ಬೆಂಗಳೂರಿನಲ್ಲಿ ನೆಲಕಚ್ಚಿದ ಕಟ್ಟಡ ನಿರ್ಮಾಣ ಕ್ಷೇತ್ರ: ಪಾಲಿಕೆಗೆ ಅಂದಾಜು 200 ಕೋಟಿ ರೂ.ಗೂ ಹೆಚ್ಚು ನಷ್ಟ ಸಾಧ್ಯತೆ

Update: 2020-09-14 04:59 GMT

ಬೆಂಗಳೂರು, ಸೆ. 13: ರಾಜಧಾನಿಯಲ್ಲಿ ಕೊರೋನ ಸೋಂಕಿನ ಹೊಡೆತದಿಂದ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದ ಹೊಡೆತ ಬಿದ್ದಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇವಲ 13 ಹೊಸ ಕಟ್ಟಡಗಳ ನಿರ್ಮಾಣಕ್ಕೆ ನಕ್ಷೆಯನ್ನು ಮಂಜೂರಾತಿ ಪಡೆಯಲಾಗಿದೆ.

ಕಟ್ಟಡ ನಿರ್ಮಾಣ ನೆಲ ಕಚ್ಚಿದ ಹಿನ್ನೆಲೆಯಲ್ಲಿ ಪಾಲಿಕೆಯ ಸಂಪನ್ಮೂಲ ಕ್ರೋಢೀಕರಣದ ಮೇಲೆಯೂ ಭಾರೀ ಹೊಡೆತ ಬಿದ್ದಿದ್ದು, ಪ್ರತಿ ವರ್ಷ ಬಿಬಿಎಂಪಿ ನಗರದಲ್ಲಿ ಸುಮಾರು 130ಕ್ಕೂ ಅಧಿಕ ಕಟ್ಟಡಗಳ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ, 100 ಕ್ಕೂ ಅಧಿಕ ಕಟ್ಟಡಗಳ ನಿರ್ಮಾಣಕ್ಕೆ ಸಿಸಿ ಹಾಗೂ ಓಸಿ ನೀಡಲಾಗುತ್ತಿತ್ತು. ಇದರಿಂದ ಪಾಲಿಕೆಗೆ ಪ್ರತಿವರ್ಷ 300 ಕೋಟಿಗೂ ಅಧಿಕ ಆದಾಯ ಹರಿದುಬರುತ್ತಿತ್ತು.

ಪ್ರಸಕ್ತ ವರ್ಷ 2020-21ನೆ ಸಾಲಿನಲ್ಲಿ ಕೇವಲ 13 ಕಟ್ಟಡಗಳಿಗಷ್ಟೇ ಮಂಜೂರಾತಿ ನಕ್ಷೆ, 20 ಕಟ್ಟಡಗಳಿಗೆ ನಿರ್ಮಾಣ ಆರಂಭಿಸುವ ಅನುಮತಿ(ಸಿಸಿ), 28 ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ(ಒಸಿ) ನೀಡಲಾಗಿದೆ. ಇದರಿಂದ ಕೇವಲ 37 ಕೋಟಿ ರೂ.ನಷ್ಟು ಆದಾಯ ಬಂದಿದ್ದು, 200 ಕೋಟಿ ರೂ.ನಷ್ಟು ಆದಾಯ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಮಾರ್ಚ್ ನಿಂದ ಸತತವಾಗಿ ಮೂರು-ನಾಲ್ಕು ತಿಂಗಳು ಘೋಷಣೆ ಮಾಡಲಾಯಿತು. ಇದರಿಂದ ಇಡೀ ಬೆಂಗಳೂರು ನಗರ ಸ್ಥಬ್ದವಾಗಿತ್ತು. ಅದರ ಪರಿಣಾಮ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತು. ಕಟ್ಟಡ ನಿರ್ಮಾಣ ಕ್ಷೇತ್ರದ ಕೂಲಿ ಕಾರ್ಮಿಕರು ಬೆಂಗಳೂರು ನಗರ ತೊರೆದು ತಮ್ಮ ಸ್ವಂತ ಊರುಗಳತ್ತ ಪಯಣ ಬೆಳೆಸಿದರು. ಇದೀಗ ಎಲ್ಲೆಡೆ ಸೋಂಕು ವ್ಯಾಪಕವಾಗಿ ಹರಡಿದ್ದರ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರು ನಗರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಅಧಿಕಾರಿಗಳಿಂದ ವಿಳಂಬ: ಕೆಲವು ಕಡೆಗಳಲ್ಲಿ ನಕ್ಷೆ ಮಂಜೂರಾತಿಗಾಗಿ ಹಾಗೂ ಸಿಸಿ ನೀಡುವುದಕ್ಕೆ ಹಾಗೂ ನಿರ್ಮಾಣಗೊಂಡ ಕಟ್ಟಡಕ್ಕೆ ಒಸಿ ಪ್ರಮಾಣಪತ್ರ ಪಡೆಯಲು ಪಾಲಿಕೆಯ ನಗರ ಯೋಜನಾ ವಿಭಾಗಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಬಿಬಿಎಂಪಿ ಅಧಿಕಾರಿಗಳು ಕೊರೋನ ಸೋಂಕು ನಿಯಂತ್ರಣ ಕಾರ್ಯದಲ್ಲಿ ಭಾಗಿಯಾಗಿರುವುದರಿಂದ ಅನುಮತಿ ನೀಡಲು ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News