ಸುಳ್ಳಾರೋಪದ ಮೂಲಕ ನನ್ನನ್ನು ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ: ಝಮೀರ್ ಅಹ್ಮದ್

Update: 2020-09-14 12:59 GMT

ಬೆಂಗಳೂರು, ಸೆ. 14: 'ಮಾದಕ ವಸ್ತು(ಡ್ರಗ್ಸ್) ಜಾಲದಲ್ಲಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ನನ್ನನ್ನು ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ. ಡ್ರಗ್ಸ್ ವಿಚಾರದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ' ಎಂದು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಝಡ್.ಝಮೀರ್ ಅಹ್ಮದ್ ಖಾನ್ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚಿತ್ರನಟಿ ಸಂಜನಾ ಅವರೊಂದಿಗೆ ಶ್ರೀಲಂಕಾದ ಕೊಲಂಬೋಗೆ ಹೋಗಿದ್ದಾರೆಂದು ಮಾಧ್ಯಮಗಳಲ್ಲಿ ಆರೋಪ ಮಾಡಿದ್ದಾರೆ. ಈ ಬಗ್ಗೆ ಸಂಜನಾ ಏನಾದರೂ ದಾಖಲೆ ಕೊಟ್ಟಿದ್ದಾರೆಯೇ? ಇದೀಗ ಬಿಜೆಪಿ ಮುಖಂಡರು ಸಂಜನಾ ಅವರನ್ನು ಬಿಟ್ಟು ಫಾಸಿಲ್ ಬಗ್ಗೆ ಮಾತನಾಡುತ್ತಿದ್ದಾರೆ. ಅವರೇನೇ ಹೇಳಿದರೂ ನಾನು ಯಾವ ತಪ್ಪೂ ಮಾಡಿಲ್ಲ ಎಂದರು.

ರಾಜ್ಯದಲ್ಲಿ ಮಾದಕ ವಸ್ತುಗಳ ಜಾಲದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸತ್ಯಾಂಶ ಬೆಳಕಿಗೆ ಬರಲಿದೆ. ಸಂಜನಾ ಜೊತೆ ತಾನು ತೆರಳಿದ್ದ ಬಗ್ಗೆ ಪ್ರಶಾಂತ್ ಸಂಬರಗಿ ಹೇಳಿದ್ದಾರೆ. ಈ ಬಗ್ಗೆ ಪೋಟೋಗಳಿದ್ದರೆ ತೋರಿಸಲಿ ಎಂದು ಆಗ್ರಹಿಸಿದ ಝಮೀರ್ ಅಹ್ಮದ್ ಖಾನ್, ನನ್ನ ವಿರುದ್ಧ ಆರೋಪ ಮಾಡುತ್ತಿರುವುದರ ಹಿಂದೆ ರಾಜಕೀಯ ಕೈವಾಡವಿದ್ದು, ನಾನು ಬೆಳೆಯುತ್ತಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನನ್ನನ್ನು ಮುಗಿಸಬೇಕು ಎಂದು ತೀರ್ಮಾನ ಮಾಡಿದ್ದಾರೆ ಎಂದು ದೂರಿದರು.

ನಮ್ಮ ರಾಜ್ಯ ಪೊಲೀಸರು ಉತ್ತಮ ರೀತಿಯಲ್ಲಿ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುವ ವಿಶ್ವಾಸವಿದೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ ಪ್ರಶಾಂತ್ ಸಂಬರಗಿ ವಿರುದ್ಧ ಪೊಲೀಸರಿಗೆ ದೂರು ನೀಡುತ್ತಿದ್ದೇನೆ, ಕಾನೂನು ಹೋರಾಟ ನಡೆಯುತ್ತಿದೆ ಎಂದ ಅವರು, ಪ್ರಶಾಂತ್ ಸಂಬರಗಿ ನನ್ನ ವಿರುದ್ಧ ಎಲ್ಲಿಯೂ ಡ್ರಗ್ಸ್ ಆರೋಪ ಮಾಡಿಲ್ಲ. ನನಗೂ ಫಾಸಿಲ್‍ಗೂ ಯಾವುದೇ ಸಂಪರ್ಕವಿಲ್ಲ. ಆರೋಪಿಯೊಂದಿಗೆ ಫೋಟೊ ಇದ್ದರೆ ನಾನು ತಪ್ಪಿತಸ್ಥನಾಗಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ನೆಮ್ಮದಿಗಾಗಿ ಯಾತ್ರೆ: ನಾನು ಪ್ರತಿವರ್ಷ 'ಉಮ್ರಾ'ಗೆ ಹೋಗುತ್ತೇನೆ. ರಾಜ್ಯದಿಂದ ಸಾವಿರಾರು ಜನರು ಉಮ್ರಾಗೆ ತೆರಳುತ್ತಾರೆ. ಡ್ರಗ್ಸ್ ದಂಧೆಯಲ್ಲಿ ಫಾಸಿಲ್ ತಪ್ಪಿತಸ್ಥನಾಗಿದ್ದರೆ ಆತನನ್ನು ಗಲ್ಲಿಗೇರಿಸಲಿ ಎಂದ ಝಮೀರ್ ಅಹ್ಮದ್ ಖಾನ್, ನಾನು ಮನಸ್ಸಿನ ನೆಮ್ಮದಿಗಾಗಿ ಶ್ರೀಲಂಕಾದ ಕೋಲಂಬೊಗೆ ಹೋಗುತ್ತೇನೆ. ಮಾಜಿ ಸಿಎಂ ಕುಮಾರಸ್ವಾಮಿ ಅವರೊಂದಿಗೆ ಕೋಲಂಬೊಗೆ ತೆರಳಿದ್ದೆ. ಕೋಲಂಬೊಗೆ ಹೋದರೆ ಕ್ಯಾಸಿನೋಗೆ ಹೋದಂತೆಯೇ? ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News