ನಾಯಕತ್ವ ಬದಲಾವಣೆ ಇಲ್ಲ, ಮೈ ಕ್ಯಾಪ್ಟನ್ ಈಸ್ ಯಡಿಯೂರಪ್ಪ: ಸಚಿವ ಆರ್.ಅಶೋಕ್

Update: 2020-09-14 16:21 GMT

ಬೆಂಗಳೂರು, ಸೆ. 14: ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕೆಂಬ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನ ಮಾಡಲಿದ್ದಾರೆ. ಸಂಪುಟ ವಿಸ್ತರಣೆ ಹಾಗೂ ಯಾರನ್ನು ಸೇರಿಸಿಕೊಳ್ಳಬೇಕು ಎಂಬುದು ಸಿಎಂ ಪರಮಾಧಿಕಾರ. ಸೂಕ್ತ ಸಮಯದಲ್ಲಿ ಸಿಎಂ ಈ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರಕಾರ ರಚನೆ ಮಾಡಲು ಸಹಕಾರ ನೀಡಿದವರನ್ನು ಮಂತ್ರಿ ಮಾಡಬೇಕು. ಕೊಟ್ಟ ಭರವಸೆಯನ್ನು ಉಳಿಸಿಕೊಳ್ಳಬೇಕು. ಅದೇನೆ ಇದ್ದರೂ ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಯಡಿಯೂರಪ್ಪನವರ ವಿವೇಚನೆಗೆ ಬಿಟ್ಟದ್ದು. ಅವರು ಸಂಪುಟ ವಿಸ್ತರಣೆ ಸಂಬಂಧ ಸೂಕ್ತ ತೀರ್ಮಾನ ಮಾಡಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಮುಂದಿನ ಮೂರು ವರ್ಷ ಬಿ.ಎಸ್.ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಮೈ ಕ್ಯಾಪ್ಟನ್ ಈಸ್ ಬಿ.ಎಸ್.ಯಡಿಯೂರಪ್ಪ ಎಂದ ಅಶೋಕ್, ನಮ್ಮ ನಾಯಕರು ಯಡಿಯೂರಪ್ಪ. ಹೀಗಾಗಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆ ಉದ್ಭವಿಸುವುದಿಲ್ಲ. ಬಿಜೆಪಿ ಸರಕಾರವನ್ನು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು, ನಾಯಕತ್ವ ಬದಲಾವಣೆ ಪ್ರಶ್ನೆ ಇದೀಗ ಅಪ್ರಸ್ತುತ ಎಂದು ಸ್ಪಷ್ಟಪಡಿಸಿದರು.

ಪೈಪೋಟಿ ಇಲ್ಲ: ಬೆಂಗಳೂರು ನಗರದ ಆಡಳಿತದ ಮೇಲೆ ಹಿಡಿತ ಸಾಧಿಸಲು ಮುಂದಾಗಿದ್ದೇನೆಂಬುದು ಸುಳ್ಳು. ಈ ವಿಚಾರದಲ್ಲಿ ನಾನು ಯಾರೊಂದಿಗೂ ಪೈಪೋಟಿ ನಡೆಸಿಲ್ಲ. ಬೆಂಗಳೂರು ನಗರದ ಉಸ್ತುವಾರಿಯಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಇದ್ದಾರೆ. ಎಲ್ಲ ಕಾಲಕ್ಕೂ ಅಧಿಕಾರಿಗಳು ಇದ್ದಾರೆ. ಹೀಗಾಗಿ ಯಾರೊಬ್ಬರೂ ಈ ವಿಚಾರದಲ್ಲಿ ಅನ್ಯತಾ ಭಾವಿಸುವುದು ಬೇಡ ಎಂದು ಅಶೋಕ್ ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News