ಆರ್ಥಿಕ ಪರಿಸ್ಥಿತಿ ಬಗ್ಗೆ ಜನತೆ ನಿರ್ಲಕ್ಷ್ಯ ತಾಳಿದಲ್ಲಿ ದೇಶಕ್ಕೆ ಸಂಕಷ್ಟ: ಅಂಕಣಕಾರ ಚೇತನ್ ಭಗತ್ ಎಚ್ಚರಿಕೆ

Update: 2020-09-14 17:43 GMT

 ಹೊಸದಿಲ್ಲಿ,ಸೆ.15: ಪ್ರಸಕ್ತ ಆರ್ಥಿಕ ಪರಿಸ್ಥಿತಿಯ ಬಗ್ಗೆ ಪ್ರಜೆಗಳು ನಿರ್ಲಕ್ಷ್ಯ ವಹಿಸಿದ್ದಲ್ಲಿ ದೇಶವು ಇನ್ನೂ ಹೆಚ್ಚು ಸಂಕಷ್ಟಕ್ಕೀಡಾಗಲಿದೆ ಎಂದು ಖ್ಯಾತ ಬರಹಗಾರ ಹಾಗೂ ಅಂಕಣಕಾರ ಚೇತನ್ ಭಗತ್ ಎಚ್ಚರಿಕೆ ನೀಡಿದ್ದಾರೆ.

   ‘ಇಂಡಿಯಾ ಟುಡೆ’ ಟಿವಿ ವಾಹಿನಿಗೆ ಸೋಮವಾರ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ‘‘ಯುವಜನತೆ ಸೇರಿದಂತೆ ದೇಶದ ಪ್ರಜೆಗಳು ಬಾಲಿವುಡ್ ಪ್ರಕರಣಗಳನ್ನು ಬಗೆಹರಿಸುವಲ್ಲಿ ತಲ್ಲೀನರಾಗಿದ್ದಾರೆಯೇ ಹೊರತು ಆರ್ಥಿಕ ಸಂಕಷ್ಟದ ಬಗ್ಗೆ ಅವರು ಎಳ್ಳಷ್ಟೂ ತಲೆಕೆಡಿಸಿಕೊಳ್ಳುತ್ತಿಲ್ಲ’ ಎೆಂದು ವಿಷಾದಿಸಿದರು.

  ದೇಶದ ಜನತೆ ಆರ್ಥಿಕತೆಯ ಬಗ್ಗೆ ಚಿಂತಿಸುತ್ತಿಲ್ಲವೆಂದು ಯಾವುದೇ ಸರಕಾರಕ್ಕೆ ಮನದಟ್ಟಾದಲ್ಲಿ ಅದು ಆ ಬಿಕ್ಕಟ್ಟನ್ನು ಬಗೆಹರಿಸುವುದಕ್ಕೆ ಸಮಯವನ್ನು ವಿನಿಯೋಗಿಸುವುದಿಲ್ಲವೆಂದು ಚೇತನ್ ವ್ಯಂಗ್ಯವಾಡಿದರು. ದೇಶದ ಜನತೆಗೆ ಆರ್ಥಿಕತೆಯ ಬಗ್ಗೆ ಕಾಳಜಿಯಿಲ್ಲದಿರುವಾಗ ರಾಜಕಾರಣಿಗಳೇಕೇ ಮುತುವರ್ಜಿ ವಹಿಸುತ್ತಾರೆ ಭಗತ್ ಪ್ರಶ್ನಿಸಿದ್ದಾರೆ.

 ದೇಶದ ಆರ್ಥಿಕತೆಯನ್ನು ಕಾಡುತ್ತಿರುವ ಸಮಸ್ಯೆಗಳನ್ನು ಸರಿಪಡಿಸಬೇಕೆಂದು ದೇಶದ ಜನತೆ ಸರಕಾರದ ಮೇಲೆ ಒತ್ತಡ ಹೇರದೆ ಹೋದಲ್ಲಿ ಆರ್ಥಿಕತೆಯು ಜಡ್ಡುಗಟ್ಟಿ ನಿಲ್ಲಲಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಕುಸಿಯುತ್ತಿರುವ ಉದ್ಯೋಗಾವಕಾಶಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ ಅವರು, ಮುಂದಿನ ವರ್ಷ ಪದವೀಧರರಾಗಲಿರುವ ಎಷ್ಟು ಮಂದಿಗೆ ಉದ್ಯೋಗ ಲಭ್ಯವಾಗಲಿದೆ ಎಂದು ಪ್ರಶ್ನಿಸಿದರು. ‘‘ ಯುವಜನತೆ ಬಾಲಿವುಡ್ ಹಗರಣಗಳನ್ನು ಬಗೆಹರಿಸುತ್ತಲೇ ಇರಬೇಕೇ ಅಥವಾ ಉದ್ಯೋಗವನ್ನು ಗಳಿಸುವ ಬಗ್ಗೆ ಮಾರ್ಗೋಪಾಯಗಳನ್ನು ಹುಡುಕಲು ಸಮಯವನ್ನು ವಿನಿಯೋಗಿಸಬೇಕೇ’’ ಎಂದವರು ಪ್ರಶ್ನಿಸಿದರು.

 ದೇಶದ ಪ್ರಸಕ್ತ ಆರ್ಥಿಕ ಬಿಕ್ಕಟ್ಟನ್ನು ಸರಿಪಡಿಸದೇ ಹೋದಲ್ಲಿ ಶ್ರೀಸಾಮಾನ್ಯ ಭಾರತೀಯರು, ಬಡತನದಂಚಿಗೆ ಜಾರಲಿದ್ದಾರೆಂದು ಚೇತನ್ ಭಗತ್ ಸಂದರ್ಶನದಲ್ಲಿ ಎಚ್ಚರಿಕೆ ನೀಡಿದ್ದಾರೆೆ.

  ಯುವಜನರು ತಮ್ಮ ಮೊಬೈಲ್‌ ಫೋನ್‌ಗಳಲ್ಲಿ ಕಾಲಕಳೆಯುವ ಬದಲು ಆರ್ಥಿಕತೆಯ ಬಗ್ಗೆ ಮಾತನಾಡಬೇಕೆಂದು ಚೇತನ್ ಭಗತ್ ಕರೆ ನೀಡಿದರು. ಕೋವಿಡ್ -19 ತಡೆಗೆ ದೇಶಾದ್ಯಂತ ಹೇರಲಾದ ಕಟ್ಟುನಿಟ್ಟಿನ ಲಾಕ್‌ಡೌನ್‌ನಿಂದಾಗಿ ಭಾರತದ ಆರ್ಥಿಕತೆಯನ್ನು ಕುಂಠಿತಗೊಂಡಿರುವುದಾಗಿ ಚೇತನ್‌ಭಗತ್ ಅಭಿಪ್ರಾಯಿಸಿದರು.

ಲಾಕ್‌ಡೌನ್ ಹೇರಿದಲ್ಲಿ, ಒಬ್ಬ ಸಿರಿವಂತನಿಗೆ ಕೆಲಸ ಮಾಡದೆ ಆರು ತಿಂಗಳು ಕಳೆಯಲು ಸಾಧ್ಯವಿದೆ.ಆದರೆ ಬಡವ್ಯಕ್ತಿಗೆ ಅದು ಅಸಾಧ್ಯ ಎಂದರು. ‘ಇಂತಹ ಹುಚ್ಚುಹುಚ್ಚಾದ ಲಾಕ್‌ಡೌನ್ ಅನ್ನು ತಾಳಿಕೊಳ್ಳಲು ನಮಗೆ ಸಾಧ್ಯವಾಗದು’ ಎಂದು ಹೇಳಿದ ಭಗತ್, ಲಾಕ್‌ಡೌನ್‌ನಿಂದಾಗಿ ದೇಶದ ಜಿಡಿಪಿಯು 23.9 ಶೇಕಡದಷ್ಟು ಸಂಕುಚಿತಗೊಂಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News