ಟ್ರಾವೆಲ್ ಏಜೆನ್ಸಿಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಕಡ್ಡಾಯ
ಬೆಂಗಳೂರು, ಸೆ.15: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಟೂರ್ಸ್ ಅಂಡ್ ಟ್ರಾವೆಲ್ ಏಜೆನ್ಸಿ ಮಾಲಕರು ಸರಕಾರದ ನಿಯಮಾವಳಿಗಳನ್ವಯ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಅಧಿಕೃತ ಪರವಾನಿಗೆ ಪಡೆಯಬೇಕೆಂದು ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಇಲಾಖೆ, ಇಲ್ಲಿಯವರೆಗೂ ಮಾನ್ಯತೆ ಪಡೆಯದೆ ಇರುವ ಟ್ರಾವೆಲ್ ಏಜೆನ್ಸಿಗಳು ಪ್ರವಾಸೋದ್ಯಮ ಇಲಾಖೆ, ಬೆಂಗಳೂರು ವಿಭಾಗ, ಮೈಸೂರು ಷುಗರ್ ಕಂಪನಿ ಲಿ.ಕಟ್ಟಡ, 1ನೇ ಮಹಡಿ, ಜೆಸಿ ರಸ್ತೆ, ಬೆಂ.02 ಇಲ್ಲಿಗೆ ಭೇಟಿ ನೀಡಿ ಸಂಬಂಧಪಟ್ಟ ಮಾಹಿತಿಗಳನ್ನು ಪಡೆದು ಟೂರ್ಸ್ ಅಂಡ್ ಟ್ರಾವೆಲ್ಸ್ ನಡೆಸಲು ಹಾಗೂ ಪ್ರವಾಸಕ್ಕೆ ಸಂಬಂಧಿಸಿದ ಪ್ರಯಾಣಿಕರ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಸಂಬಂಧ ಅಧಿಕೃತವಾಗಿ ಇಲಾಖೆಯಿಂದ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳದ ಟ್ರಾವೆಲ್ ಏಜೆನ್ಸಿಗಳ ಮೇಲೆ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಯಾರೂ ಅವಕಾಶ ಮಾಡಿಕೊಡದ ರೀತಿಯಲ್ಲಿ ಕೂಡಲೇ ಸೂಕ್ತ ದಾಖಲೆಗಳ ಸಮೇತ ಪ್ರವಾಸೋದ್ಯಮ ಇಲಾಖೆ ಕಚೇರಿಗೆ ಆಗಮಿಸಿ ನೋಂದಣಿ ಮಾಡಿಕೊಳ್ಳಬೇಕಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಪ್ರವಾಸೋದ್ಯಮ ಇಲಾಖೆಯ ಇ-ಮೇಲ್ ddtourismblru@gmail.com ಹಾಗೂ ದೂ.080-22224415, 9480940555ಕ್ಕೆ ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಲಾಗಿದೆ.