ಕಳವು ಪ್ರಕರಣ ಆರೋಪಿಯ ಬಂಧನ: 6.41 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ

Update: 2020-09-15 12:25 GMT

ಬೆಂಗಳೂರು, ಸೆ.15: ದ್ವಿಚಕ್ರ ವಾಹನ ಹಾಗೂ ಸರಗಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಸಂಜಯನಗರ ಠಾಣಾ ಪೊಲೀಸರು 6.41 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಚಂದ್ರ ಲೇಔಟ್‍ನ ಗಂಗೋಡಹಳ್ಳಿಯ ಸಾದಿಕ್ ಸಲೀಂ(33) ಬಂಧಿತ ಆರೋಪಿಯಾಗಿದ್ದಾನೆ ಎಂದು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.

ಆರೋಪಿ ದುಶ್ಚಟಗಳ ವ್ಯಸನಿಯಾಗಿದ್ದು, ದೈನಂದಿನ ಖರ್ಚು ವೆಚ್ಚಕ್ಕೆ ರೈಲ್ವೆ ನಿಲ್ದಾಣಗಳಲ್ಲಿ ಸರ ಅಪಹರಣ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ. ಇನ್ನು, ಆರೋಪಿಯ ಬಂಧನದಿಂದ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ 1 ದ್ವಿಚಕ್ರ ವಾಹನ ಕಳವು, ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯ 2 ಸರಗಳ್ಳತನ ಮತ್ತು 1 ಸಾಮಾನ್ಯ ಕಳವು ಪ್ರಕರಣಗಳು ಪತ್ತೆಯಾಗಿವೆ.

ಆರೋಪಿ ವಿರುದ್ಧದ 2006ನೇ ಸಾಲಿನಲ್ಲಿ ಸಂಜಯನಗರ ಪೊಲೀಸ್ ಠಾಣೆಯ 1 ಸುಲಿಗೆ ಪ್ರಕರಣ, ಬಾಣಸವಾಡಿ ಪೊಲೀಸ್ ಠಾಣೆಯ 2 ಸುಲಿಗೆ ಪ್ರಕರಣ, ಬೆಂಗಳೂರು ನಗರ ರೈಲ್ವೆ ಪೊಲೀಸ್ ಠಾಣೆಯ 1 ಸಾಮಾನ್ಯ ಕಳವು ಪ್ರಕರಣ, ಕಲಾಸಿಪಾಳ್ಯ ಪೊಲೀಸ್ ಠಾಣೆಯ 1 ಸಾಮಾನ್ಯ ಕಳವು ಪ್ರಕರಣ, ಸುದ್ದಗುಂಟೆಪಾಳ್ಯ 1 ಮನೆಗಳವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿದ್ದಾಪುರ ಮೂಲದ ಆರೋಪಿಗೆ 2008 ನೇ ಸಾಲಿನಲ್ಲಿ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯ 1 ಸುಲಿಗೆ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆ ಮತ್ತು 5000 ರೂ.ದಂಡ ವಿಧಿಸಲಾಗಿದೆ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News