ಡ್ರಗ್ಸ್ ದಂಧೆ ಪ್ರಕರಣ: ಮಾಜಿ ಸಚಿವರ ಪುತ್ರನ ನಿವಾಸದ ಮೇಲೆ ಸಿಸಿಬಿ ದಾಳಿ

Update: 2020-09-15 14:59 GMT

ಬೆಂಗಳೂರು, ಸೆ.15: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ತನಿಖೆ ಮುಂದುವರಿಸಿರುವ ಸಿಸಿಬಿ ಪೊಲೀಸರು, ಮಾಜಿ ಸಚಿವ, ದಿವಂಗತ ಜೀವರಾಜ್ ಆಳ್ವ ಅವರ ಪುತ್ರ ಆದಿತ್ಯ ಆಳ್ವ ನಿವಾಸದ ಮೇಲೆ ದಾಳಿ ನಡೆಸಿ, ಶೋಧ ಕಾರ್ಯ ಕೈಗೊಂಡರು.

ನ್ಯಾಯಾಲಯದ ಮೂಲಕ ಸರ್ಚ್ ವಾರೆಂಟ್ ಪಡೆದ ತನಿಖಾಧಿಕಾರಿಗಳ ತಂಡ ಮಂಗಳವಾರ ನಗರದ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹೌಸ್ ಆಫ್ ಲೈಫ್ ಮನೆ ಮೇಲೆ ದಾಳಿ ನಡೆಸಿದರು.

ಇಲ್ಲಿನ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‍ಐಆರ್ ನಲ್ಲಿ 6ನೇ ಆರೋಪಿಯಾಗಿರುವ ಆದಿತ್ಯ ಆಳ್ವ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಮನೆಯಲ್ಲಿ ಯಾರು ಇಲ್ಲದಿರುವುದು ಮತ್ತಷ್ಟು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

ಮತ್ತೊಂದೆಡೆ ಆದಿತ್ಯ ಆಳ್ವ ಲೈಪ್ ಆಫ್ ಹೌಸ್‍ನಲ್ಲಿ ಕೇವಲ ಪಾರ್ಟಿ ಮಾತ್ರವಲ್ಲ, ಅಕ್ರಮವಾಗಿ ಫ್ಲೈ ಡೈನಿಂಗ್ ಕೂಡ ನಡೆಯುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ. ಬಾನೆತ್ತರಕ್ಕೆ ಕ್ರೇನ್ ರೂಪದ ಯಂತ್ರದಲ್ಲಿ ಹೋಗಿ ಕೆರೆಯ ಸುತ್ತಲಿನ ಪರಿಸರ ನೋಡುತ್ತಾ ಊಟ ಮಾಡುವ ವ್ಯವಸ್ಥೆ(ಫ್ಲೈ ಡೈನಿಂಗ್)ಯನ್ನು ಅಕ್ರಮವಾಗಿ ಆಳ್ವಾ ಕುಟುಂಬ ಅಳವಡಿಸಿಕೊಂಡಿತ್ತು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News