ಆರ್ಥಿಕ ಸಂಕಷ್ಟ: 33 ಸಾವಿರ ಕೋಟಿ ರೂ. ಸಾಲ ಪಡೆಯಲು ಸರಕಾರ ತೀರ್ಮಾನ- ಸಚಿವ ಮಾಧುಸ್ವಾಮಿ

Update: 2020-09-15 15:14 GMT

ಬೆಂಗಳೂರು, ಸೆ.15: ಕೋವಿಡ್-19 ಲಾಕ್‍ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಎದುರಿಸುತ್ತಿರುವ ಆರ್ಥಿಕ ಸಂಕಷ್ಟದಿಂದ ಹೊರಬರಲು ಹಾಗೂ ಅಭಿವೃದ್ಧಿ ಕಾರ್ಯಗಳಿಗಾಗಿ ವಿತ್ತೀಯ ನಿರ್ವಹಣೆ ಕಾಯ್ದೆಗೆ ತಿದ್ದುಪಡಿ ತಂದು 33 ಸಾವಿರ ಕೋಟಿ ರೂ. ಸಾಲವನ್ನು ಪಡೆಯಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರವು ಎಲ್ಲ ರಾಜ್ಯಗಳಿಗೆ ಅವರ ಜಿಎಸ್‍ಡಿಪಿಯ ಆಧಾರದಲ್ಲಿ ಶೇ.3ರಷ್ಟು ಸಾಲ ಪಡೆಯಲು ಇದ್ದ ಪ್ರಮಾಣವನ್ನು ಶೇ.5ಕ್ಕೆ ಹೆಚ್ಚಿಸಿ ಅವಕಾಶ ನೀಡಿದೆ ಎಂದರು.

ಅದರಂತೆ, ನಮ್ಮ ರಾಜ್ಯದಲ್ಲಿನ ಜಿಎಸ್‍ಡಿಪಿಯ ಮೇಲೆ ಶೇ.5ರಷ್ಟಂತೆ 36 ಸಾವಿರ ಕೋಟಿ ರೂ.ಸಾಲ ಪಡೆಯಲು ಅವಕಾಶವಿದೆ. ವಿತ್ತೀಯ ನಿರ್ವಹಣೆ ಕಾಯ್ದೆಗೆ ತಿದ್ದುಪಡಿ ತಂದು ಒಂದು ಬಾರಿಗೆ ಅನ್ವಯಿಸುವಂತೆ 33 ಸಾವಿರ ಕೋಟಿ ರೂ.ಸಾಲ ಪಡೆದು, ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.

ಜಿಎಸ್‍ಟಿ ಮಂಡಳಿ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯ ಸರಕಾರಗಳು ಸಾಲ ಪಡೆಯುವಂತೆ ನೀಡಿರುವ ಸಲಹೆಗೂ ಈಗ ನಾವು ಜಿಎಸ್‍ಡಿಪಿ ಆಧಾರದಲ್ಲಿ ಪಡೆಯುತ್ತಿರುವ ಸಾಲಕ್ಕೂ ಸಂಬಂಧವಿಲ್ಲ. ಜಿಎಸ್‍ಟಿ ಪರಿಹಾರವಾಗಿ ನಮಗೆ 11 ಸಾವಿರ ಕೋಟಿ ರೂ.ಗಳನ್ನು ನೀಡಬೇಕು ಎಂಬ ರಾಜ್ಯ ಸರಕಾರದ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮಾಧುಸ್ವಾಮಿ ತಿಳಿಸಿದರು.

ಕೇಂದ್ರ ಸರಕಾರವು ಕೋವಿಡ್-19 ಇಂದಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದನ್ನು ಗಮನದಲ್ಲಿಟ್ಟುಕೊಂಡು ಎಲ್ಲ ರಾಜ್ಯಗಳಿಗೂ ಹೆಚ್ಚುವರಿ ಸಾಲ ಪಡೆಯಲು ಅವಕಾಶ ನೀಡಿದೆ. ಸರಕಾರದ ವರಮಾನ ಕುಸಿತವಾಗಿದೆ, ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಹೆಚ್ಚುವರಿ ಸಾಲ ಪಡೆಯುವುದರಿಂದ ನಮಗೆ ಹೊರೆ ಆಗುತ್ತದೆ. ಆದರೆ, ಬೇರೆ ದಾರಿ ಇಲ್ಲದೆ ಸಾಲ ಮಾಡಬೇಕಾಗಿದೆ ಎಂದು ಮಾಧುಸ್ವಾಮಿ ಸಮರ್ಥಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News