ಬೆಂಗಳೂರು: ರೈಲ್ವೆ ಖಾಸಗೀಕರಣ ಖಂಡಿಸಿ ಎಸ್‍ಯುಸಿಐ ಪ್ರತಿಭಟನೆ

Update: 2020-09-15 16:24 GMT

ಬೆಂಗಳೂರು, ಸೆ.15: ರೈಲ್ವೆಯನ್ನು ಖಾಸಗೀಕರಣ ಮಾಡಲು ಮುಂದಾಗಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಖಂಡಿಸಿ ಎಸ್‍ಯುಸಿಐ ಬೆಂಗಳೂರು ಜಿಲ್ಲಾ ಸಮಿತಿ ವತಿಯಿಂದ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಎಸ್‍ಯುಸಿಐ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಎಂ.ಎನ್.ಶ್ರೀರಾಮ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಭಾರತೀಯ ರೈಲ್ವೆಯು ದೇಶದ ಎರಡು ಕೋಟಿಗಿಂತ ಹೆಚ್ಚಿನ ಜನರ ಜೀವನಾಡಿಯಾಗಿದೆ. ಹಾಗೂ ಭಾರತೀಯ ರೈಲ್ವೆಯು ಯಾವುದೇ ನಷ್ಟಕ್ಕೂ ತುತ್ತಾಗಿಲ್ಲ. ಆದಾಗ್ಯು ಕೇಂದ್ರ ಸರಕಾರ ದೇಶದ ಎಲ್ಲ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸುತ್ತಿರುವುದು ದೇಶದ ಜನರಿಗೆ ಮಾಡುವ ವಂಚನೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತೀಯ ರೈಲ್ವೆಯು ಭಾರತದ ಆರ್ಥಿಕತೆಗೆ ಪ್ರಮುಖ ಆಧಾರಸ್ತಂಭವಾಗಿದೆ. ಮತ್ತು ಸಾರ್ವಜನಿಕ ವಲಯದ ಒಂದು ಲಾಭದಾಯಕ ಉದ್ದಿಮೆಯಾಗಿದೆ. ಇಂತಹ ಅನುಕೂಲಕರ ಪರಿಸ್ಥಿತಿಯಲ್ಲಿಯೂ ರೈಲ್ವೆಯನ್ನು ಖಾಸಗಿಯವರ ಕೈಗೆ ಒಪ್ಪಿಸುತ್ತಿರುವ ಕೇಂದ್ರ ಸರಕಾರ ನಿರ್ಧಾರ ಅರ್ಥಹೀನವಾದದ್ದೆಂದು ಶ್ರೀರಾಮ್ ಖಂಡಿಸಿದ್ದಾರೆ.

ರೈಲ್ವೆ ಜಮೀನು, ಕಾಲನಿಗಳು, ಸ್ಟೇಷನ್‍ಗಳು ಮತ್ತಿತರ ಜಾಗಗಳನ್ನು ಕ್ರಮೇಣವಾಗಿ ಮಾರುವುದು ಕೇಂದ್ರ ಸರಕಾರ ಖಾಸಗೀಕರಣದ ನೀತಿಯಲ್ಲಿದೆ. ಇದರೊಂದಿಗೆ ಹಲವು ತ್ಯಾಗಗಳ ಫಲವಾಗಿ ರೈಲ್ವೆ ಕಾರ್ಮಿಕರು ಗಳಿಸಿದ್ದ ಖಾಯಂ ಉದ್ಯೋಗ, ನಿಶ್ಚಿತ ಪಿಂಚಣಿ, ನಿವೃತ್ತಿಯ ವಯಸ್ಸು, ಉಚಿತ ಪಾಸ್ ಇತ್ಯಾದಿ ಹಕ್ಕುಗಳು ನಿಧಾನವಾಗಿ ಕಣ್ಮರೆಯಾಗಲಿವೆ. ಕೇಂದ್ರ ಸರಕಾರದ ಈ ಕಾರ್ಪೊರೇಟ್ ಪರ, ಜನವಿರೋಧಿ ನೀತಿಯ ವಿರುದ್ಧ ದೇಶಾದ್ಯಂತ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬೀದಿಗಿಳಿದು ಹೋರಾಟ ಮಾಡಬೇಕು. ಆ ಮೂಲಕ ಸಂವಿಧಾನ ಜನತೆಗೆ ನೀಡಿರುವ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News