ರಾಜ್ಯ ರಾಜಧಾನಿಯ ವಾಯು ಜೇನು ನೊಣಗಳ ಪಾಲಿಗೆ ಮಾರಕ

Update: 2020-09-15 16:53 GMT

ಬೆಂಗಳೂರು, ಸೆ.15: ನಗರದ ಗಾಳಿಯಲ್ಲಿರುವ ವಿಷ ಪದಾರ್ಥಗಳಿಂದ ಜೇನು ಹುಳುಗಳ ಉಸಿರಾಟ ಮತ್ತು ಹೃದಯ ಬಡಿತದ ಮೇಲೆ ಮಾರಕ ಪರಿಣಾಮ ಉಂಟಾಗಿರುವುದು ‘ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್ ಹಾಗೂ ಟಾಟಾ ಇನ್ಸ್‍ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್' ಸಂಸ್ಥೆಗಳು ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ.

ಹೆಜ್ಜೇನುಗಳ ಮೇಲೆ ವಾಯು ಮಾಲಿನ್ಯ ಉಂಟು ಮಾಡಿರುವ ಪರಿಣಾಮ ಕುರಿತು ‘ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್' ಸಂಸ್ಥೆಯಲ್ಲಿ ಸಂಶೋಧನಾ ವಿದ್ಯಾರ್ಥಿ ಡಾ.ಗೀತಾ ಜಿ.ತಿಮ್ಮೇಗೌಡ ನೇತೃತ್ವದ ತಂಡ 2017 ರಿಂದ 2019 ರವರೆಗೆ ಪ್ರೊ.ಶನ್ನೋನ್ ಬಿ. ಓಲ್ಸನ್ ಅವರ ಮಾರ್ಗದರ್ಶನದಲ್ಲಿ ಸುದೀರ್ಘ ಅಧ್ಯಯನ ನಡೆಸಿದೆ.

ಈ ಅಧ್ಯಯನಕ್ಕೆ ನಗರದ ಪೀಣ್ಯ, ಲಾಲ್‍ಬಾಗ್ ಹಾಗೂ ಹೆಸರಘಟ್ಟ ಪ್ರದೇಶದಲ್ಲಿದ್ದ ಒಟ್ಟು 1,820 ಜೀವಂತ ಜೇನು ನೊಣಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ನೊಣಗಳ ಉಸಿರಾಟ, ರಕ್ತ ಪರಿಚಲನೆ, ಹೃದಯ ಬಡಿತದ ಬಗ್ಗೆ ಅಧ್ಯಯನ ನಡೆಸಲಾಯಿತು. ಆದರೆ, ನಗರದ ಹೊರ ವಲಯದ ಹೆಸರಘಟ್ಟ ಪ್ರದೇಶದ ಜೇನು ನೊಣಗಳ ಉಸಿರಾಟ ಮತ್ತು ಹೃದಯ ಬಡಿತಕ್ಕೆ ಹೋಲಿಸಿದರೆ, ಪೀಣ್ಯ ಪ್ರದೇಶದ ಜೇನು ನೊಣಗಳ ಉಸಿರಾಟ ಮತ್ತು ಹೃದಯ ಬಡಿತ ಪ್ರಕ್ರಿಯೆ ಅಸಹಜವಾಗಿತ್ತು.

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚು ವಾಯುಮಾಲಿನ್ಯವಿದ್ದ ಕಾರಣ, ಇಲ್ಲಿನ ಜೇನು ನೊಣಗಳು ಉಸಿರಾಟದ ತೊಂದರೆ ಎದುರಿಸುತ್ತಿದ್ದವು. ಇದು ಜೇನು ನೊಣಗಳ ಹೃದಯ ಬಡಿತದ ಮೇಲೂ ಪರಿಣಾಮ ಬೀರಿತ್ತು ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಪ್ರಯೋಗಾಲಯಕ್ಕೆ ತಂದ ಹೆಸರಘಟ್ಟ ಮತ್ತು ಲಾಲ್‍ಬಾಗ್‍ನ ಜೇನು ನೊಣಗಳು ಆರೇಳು ದಿನಗಳ ಕಾಲ ಬದುಕಿದರೆ, ಪೀಣ್ಯ ಪ್ರದೇಶದ ನೊಣಗಳು ಕೇವಲ 24 ಗಂಟೆಯೊಳಗೆ ಸಾವನ್ನಪ್ಪುತ್ತಿದ್ದವು.

ವಾಯು ಗುಣಮಟ್ಟ ಕಳಪೆ: ಮಾನವನ ಆರೋಗ್ಯಕ್ಕೆ ಸೊನ್ನೆಯಿಂದ 50ರ ವರೆಗಿನ ಎಕ್ಯೂಐ ಉತ್ತಮವಾಗಿರುತ್ತದೆ. 51ರಿಂದ 100ರ ವರೆಗಿನ ಎಕ್ಯೂಐ ಮಧ್ಯಮ, 101-150 ಎಕ್ಯೂಐ ಸೂಕ್ಷ್ಮ ದೇಹಾರೋಗ್ಯದ ಜನರಿಗೆ ಅನಾರೋಗ್ಯಕರ, 151-200 ಅನಾರೋಗ್ಯಕರ, 201-300 ತೀವ್ರ ಅನಾರೋಗ್ಯಕರ ಹಾಗೂ 301-500 ಎಕ್ಯೂಐ ಮಾರಣಾಂತಿಕ ಎಂದು ವಿಭಾಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News