ಸರಕಾರಿ ಆಸ್ಪತ್ರೆಗಳ ಎಕ್ಸ್ ರೇ ಘಟಕಗಳ ಸುರಕ್ಷತಾ ಕ್ರಮಕ್ಕೆ 11.66 ಕೋಟಿ ರೂ. ಅನುದಾನ: ಮಾಧುಸ್ವಾಮಿ

Update: 2020-09-15 17:03 GMT

ಬೆಂಗಳೂರು, ಸೆ.15: ಕೇಂದ್ರ ಸರಕಾರದ ಅಟೋಮಿಕ್ ರೆಗ್ಯುಲೇಟರಿ ಬೋರ್ಡ್ ನಿಯಮಾವಳಿಗಳ ಪ್ರಕಾರ ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿರುವ 583 ಎಕ್ಸ್ ರೇ ಪ್ಲಾಂಟ್‍ಗಳಿಗೆ ಸುರಕ್ಷತೆಯ ಕ್ರಮಗಳನ್ನು ಅಳವಡಿಸಲು 11.66 ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಹೆಚ್ಚುವರಿ ಅಂದಾಜು ಮೊತ್ತ 84.69 ಕೋಟಿ ರೂ.ಬಿಡುಗಡೆ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.

ನೆಲಮಂಗಲ ತಾಲೂಕಿನ ಯಲಚಗೇರೆ ಗ್ರಾಮದಲ್ಲಿ ಸಿದ್ದಗಂಗಾ ಮಠದವರು ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯ ನಡೆಸುತ್ತಿದ್ದು, ಅವರಿಗೆ 9.70 ಎಕರೆ ಸರಕಾರಿ ಜಮೀನು ಮಂಜೂರು ಮಾಡಿದ್ದು, ಮಾರ್ಗಸೂಚಿ ದರದಲ್ಲಿ ರಿಯಾಯಿತಿ ನೀಡಲು ಉದ್ದೇಶಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ನಿರ್ಧಾರ ಮಾಡುತ್ತಾರೆ ಎಂದು ಅವರು ತಿಳಿಸಿದರು.

ಬೆಳಗಾವಿ ಜಿಲ್ಲೆಯ ಬಾಗೇವಾಡಿ ಸಂಕನಾಯಕನಕೊಪ್ಪ, ಹಾಲಗಿಮರಡಿ ಗ್ರಾಮದಲ್ಲಿರುವ ಒಟ್ಟು 176.26 ಸರಕಾರಿ ಜಮೀನಿನಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ 87.37 ಎಕರೆ ನೀಡಲು ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಲಕ್ಕುಂಡಿ ಪಾರಂಪರಿಕ ಸ್ಥಳ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ವಿಧೇಯಕ ತರಲು ಅನುಮೋದನೆ ನೀಡಲಾಗಿದೆ.

ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿರುವ ಎಸ್.ಎಂ.ಕೃಷ್ಣ ಬಡಾವಣೆಗೆ ಮೂಲಸೌಕರ್ಯ ಒದಗಿಸಲು 15.31 ಕೋಟಿ ರೂ.ಮಂಜೂರು. ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್‍ಇಡಿ ಬೀದಿ ದೀಪ ಅಳವಡಿಸಲು 109.90 ಕೋಟಿ ರೂ.ಮಂಜೂರು ಮಾಡಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಅಗರ ಕೆರೆಯಿಂದ ಆನೇಕಲ್‍ಗೆ ಪೈಪ್‍ಲೈನ್ ಮೂಲಕ 50 ಎಂಎಲ್‍ಡಿ ನೀರನ್ನು ಪೂರೈಸಲು 30 ಕೋಟಿ ರೂ.ಅನುದಾನ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. 2020-21ನೆ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಔಷಧಿ, ಉಪಕರಣ ಖರೀದಿಗೆ 24.90 ಕೋಟಿ ರೂ.ಮಂಜೂರು ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.

ವಿದ್ಯುತ್ ಸರಬರಾಜು ಸಂಸ್ಥೆಗಳು(ಹೆಸ್ಕಾಂ)ಗಳು ಬಹಳಷ್ಟು ಕಾರ್ಯಕ್ರಮ ಮಾಡಿ ಆರ್ಥಿಕ ಏರುಪೇರು ಆಗಿದೆ. ಅವುಗಳಿಗೆ 5570 ಕೋಟಿ ರೂ.ಧೀರ್ಘಾವದಿ ಸಾಲ ಪಡೆಯಲು ಸರಕಾರದ ಖಾತ್ರಿ ನೀಡಲು ಒಪ್ಪಿಗೆ ಸೂಚಿಸಲಾಗಿದೆ. 2020-25 ಸಾಲಿನಲ್ಲಿ ಪ್ರವಾಸೋದ್ಯಮ ನೀತಿ ಜಾರಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ಅವರು ಹೇಳಿದರು.

ದಿಲ್ಲಿಯಲ್ಲಿ ಈಗಿರುವ ಕರ್ನಾಟಕ ಭವನವನ್ನು ನೆಲಸಮ ಮಾಡಿ, ಅದೇ ಜಾಗದಲ್ಲಿ 120 ಕೋಟಿ ರೂ.ವೆಚ್ಚದಲ್ಲಿ ಹೊಸ ಭವನ ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿದೆ. ಒಟ್ಟು 7635 ಚದರ ಮೀಟರ್ ವಿಸ್ತೀರ್ಣದಲ್ಲಿ ಈ ನೂತನ ಕರ್ನಾಟಕ ಭವನ ನಿರ್ಮಾಣವಾಗಲಿದ್ದು, ಈ ವಾರದಲ್ಲೆ ಮುಖ್ಯಮಂತ್ರಿ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ. ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ಬಾಲಾಜಿ ಗ್ರೂಪ್ ಆಫ್ ಪ್ರಾಜೆಕ್ಟ್ ಪ್ರೈ.ಲಿಗೆ ನೀಡಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ತುಮಕೂರು ಕ್ಯಾತಸಂದ್ರ ಬಳಿ ಸಿದ್ದಗಂಗಾ ಮಠಕ್ಕೆ ಹೋಗುವ ದಾರಿಯಲ್ಲಿ 35.43 ಕೋಟಿ ರೂ.ವೆಚ್ಚದಲ್ಲಿ ರೈಲ್ವೆ ಪಾಸಿಂಗ್ ಫ್ಲೈ ಓವರ್ ನಿರ್ಮಾಣ ಮಾಡಲು, ರಾಜ್ಯದ ಪಾಲು 14.89 ಕೋಟಿ ರೂ. ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ 18 ಕಿ.ಮೀ ವ್ಯಾಪ್ತಿಯಲ್ಲಿ ‘ಬಿ’ ಖರಾಬು ಜಮೀನನ್ನು ಬಳಸುತ್ತಿದ್ದವರಿಗೆ ಮಾರುಕಟ್ಟೆ ಮೌಲ್ಯದ ನಾಲ್ಕು ಪಟ್ಟು ಹೆಚ್ಚು ದರ ವಿಧಿಸಿ ಅವರಿಗೆ ಕೊಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಭೂಕಂದಾಯ ಕಾಯ್ದೆ ಕಲಂ 64(2) ಮತ್ತು (69) ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಆರೋಗ್ಯ ಯೋಜನೆಯಡಿ 2020-21ನೆ ಸಾಲಿನಲ್ಲಿ ವೈದ್ಯಕೀಯ ಉಪಕರಣ ಖರೀದಿಸಲು 25.73 ಕೋಟಿ ರೂ.ಮತ್ತು ಔಷಧ ಖರೀದಿಸಲು 24.90 ಕೋಟಿ ರೂ.ಗಳನ್ನು ಆರೋಗ್ಯ ಇಲಾಖೆಗೆ ಒದಗಿಸಲಾಗಿರುವ ಅನುದಾನದಲ್ಲಿ ಬಳಕೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಗಣಿಗಾರಿಕೆಗೆ ತೀರ್ಮಾನ

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೋಣಿ ಮಲೈ ಬಳಿ ಸುಮಾರು 600 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಸಚಿವ ಸಂಪುಟ ತೀರ್ಮಾನಿಸಿದೆ. ಗಣಿಗಾರಿಕೆ ಆರಂಭಿಸಲು ಇದ್ದ ಸಮಸ್ಯೆಗಳನ್ನು ಮುಖ್ಯಮಂತ್ರಿ ಹಾಗೂ ಕೇಂದ್ರ ಗಣಿ ಸಚಿವರು ಚರ್ಚಿಸಿ ಬಗೆಹರಿಸಿದ್ದಾರೆ. ರಾಜ್ಯಕ್ಕೆ ರಾಯಧನ ಶೇ.15 ರಿಂದ ಶೇ 22.5 ಕ್ಕೆ ಹೆಚ್ಚಿಸಲು ಕೇಂದ್ರ ಸರಕಾರ ಒಪ್ಪಿಕೊಂಡಿದೆ. ಇದರಿಂದ ರಾಜ್ಯ ಸರಕಾರಕ್ಕೆ ವಾರ್ಷಿಕ 647 ಕೋಟಿ ರೂ.ಆದಾಯ ಬರುವ ನಿರೀಕ್ಷೆಯಿದೆ ಎಂದು ಮಾಧುಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News