ಡ್ರಗ್ಸ್ ಗೆ ಕಡಿವಾಣ ಹಾಕಲು ಕೇಂದ್ರ ಸರಕಾರ ಕಠಿಣ ಕಾಯಿದೆ ಜಾರಿಗೆ ತರಲಿ: ಈಶ್ವರ್ ಖಂಡ್ರೆ

Update: 2020-09-15 17:17 GMT

ಬೆಂಗಳೂರು, ಸೆ.15: ಡ್ರಗ್ಸ್ ಮಾಫಿಯಾ ನಿಯಂತ್ರಣ ಪ್ರಸಕ್ತ ಜಾರಿಯಲ್ಲಿರುವ ಕಾಯಿದೆಯಿಂದಷ್ಟೇ ಸಾಧ್ಯವಾಗುವುದಿಲ್ಲ. ಹಾಗಾಗಿ ನರೇಂದ್ರ ಮೋದಿ ಸರಕಾರ ಲೋಕಸಭೆಯಲ್ಲಿ ಇದಕ್ಕಾಗಿ ಕಠಿಣವಾದ ಕಾಯಿದೆಯನ್ನು ಜಾರಿಗೊಳಿಸಬೇಕು. ಅಲ್ಲದೆ, ಈ ಸಂಬಂಧ ಸಂಸತ್ತು ಹಾಗೂ ವಿಧಾನಮಂಡಲದ ಅಧಿವೇಶನದಲ್ಲಿ ವಿಸ್ತೃತವಾಗಿ ಚರ್ಚಿಸಲು 2 ದಿನಗಳ ಕಾಲಾವಧಿಯನ್ನು ಮೀಸಲಿಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಪೊಲೀಸರು ವಶಪಡಿಸಿಕೊಳ್ಳುತ್ತಿರುವ ಸಾವಿರಾರು ಕೆಜಿ ಅಮಲಿನ ವಸ್ತುಗಳನ್ನು ನೋಡಿದಾಗ ಗಾಬರಿ ಹುಟ್ಟಿಸುತ್ತಿದೆ. ಸರಕಾರ ಈಗಲೇ ಎಚ್ಚೆತ್ತು ಇದನ್ನು ನಿಗ್ರಹಿಸದೇ ಹೋದರೆ ಸಮಾಜದ ಸ್ವಾಸ್ಥ್ಯ ಹದಗೆಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೊಲೆ, ಸುಲಿಗೆಯಂತಹ ಸಮಾಜ ಘಾತಕ ಚಟುವಟಿಕೆಗಳು ಹೆಚ್ಚಾಗಿ ದೇಶದ ಭವಿಷ್ಯವೇ ಮಸುಕಾಗುತ್ತದೆ. ಇದು ರಾಜಕೀಯ ಮಾಡುವ ವಿಚಾರವಲ್ಲ, ಬದಲಾಗಿ ಯುವಜನರ ಭವಿಷ್ಯದ ದೃಷ್ಟಿಯಿಂದ ಮಾದಕ ದ್ರವ್ಯ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಿಕ್ಕಿರುವ ಅವಕಾಶ ಎಂದು ತಿಳಿದು ಸರಕಾರ ಮುಂಗಾರು ಅಧಿವೇಶನದಲ್ಲೆ ಡ್ರಗ್ ಪೆಡ್ಲರ್ ಗಳಿಗೆ, ಗಾಂಜಾ ಇತ್ಯಾದಿ ಬೆಳೆಯುವವರಿಗೆ, ಮಾರುವವರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಕಾಯ್ದೆ ತರಬೇಕು ಎಂದು ಅವರು ಒತ್ತಾಯಿಸಿದರು.

ಯುವ ಸಮುದಾಯಕ್ಕೆ ಮಾರಕವಾಗಿರುವ ಮಾದಕ ದ್ರವ್ಯ ಮಕ್ಕಳನ್ನು ದಾರಿ ತಪ್ಪಿಸುತ್ತಿದ್ದು, ಈ ಪಿಡುಗನ್ನು ಬೇರು ಸಹಿತ ಕಿತ್ತೊಗೆಯಲು ಈ ಅಧಿವೇಶನದಲ್ಲೆ ಕಠಿಣ ಕಾನೂನು ರೂಪಿಸಬೇಕು. ಸಾಮಾಜಿಕ ಸ್ವಾಸ್ಥ್ಯವನ್ನೆ ಬುಡಮೇಲು ಮಾಡುತ್ತಿರುವ ಈ ಜಾಲವನ್ನು ಮೂಲೋತ್ಪಾಟನೆ ಮಾಡುವ ಬದ್ಧತೆಯನ್ನು ಸರಕಾರ ಪ್ರದರ್ಶಿಸಬೇಕು ಎಂದು ಈಶ್ವರ್ ಖಂಡ್ರೆ ಆಗ್ರಹಿಸಿದರು.

ಮಾದಕ ದ್ರವ್ಯ ಸೇವಿಸುವವರಿಗೂ ಕನಿಷ್ಠ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದರೆ ಮಾತ್ರ ಪಿಡುಗಿನ ನಿರ್ಮೂಲನೆ ಸಾಧ್ಯ. ಡ್ರಗ್ಸ್ ಸಾಗಾಟ ಮಾಡುವವರಿಗೆ ಜೀವಾವಧಿ ಶಿಕ್ಷೆ ನೀಡುವಂತಹ ಕಠಿಣ ಕಾನೂನು ತರಬೇಕು. ಡ್ರಗ್ಸ್ ದಂಧೆಗೆ ಉಗ್ರವಾದ ನಂಟು ಇದೆ. ಹಾಗಾಗಿ ತಪ್ಪಿತಸ್ಥರ ವಿರುದ್ಧ ರಾಜಕೀಯ ರಹಿತವಾಗಿ ಕ್ರಮ ಕೈಗೊಳ್ಳಬೇಕು. ಎಸ್‍ಐಟಿ ರಚನೆ ಮಾಡಿ ಸಮಗ್ರ ತನಿಖೆ ನಡೆಸಬೇಕು. ಪಕ್ಷಾತೀತವಾಗಿ, ಎಷ್ಟಢ ದೊಡ್ಡವರಾದರೂ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಮ್ಮ ರಾಜ್ಯ ಉಡ್ತಾ ಪಂಜಾಬ್ ಆಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಡ್ರಗ್ಸ್ ಪಿಡುಗು ಹೆಚ್ಚಾಗುತ್ತಿದ್ದು, ಲಾಕ್‍ಡೌನ್ ಅವಧಿಯಲ್ಲಿ ರೇವ್ ಪಾರ್ಟಿ, ಡ್ರಗ್ಸ್ ದಂಧೆ ನಡೆಯುತ್ತಿತ್ತು. ಇದು ಕಳವಳಕಾರಿ ವಿಚಾರ. ಒಂದು ವಲಯಕ್ಕೆ ಮಾತ್ರ ತನಿಖೆ ಸೀಮಿತವಾಗದೆ ಹೆಚ್ಚಿನ ತನಿಖೆ ಆಗಬೇಕು. ಡ್ರಗ್ಸ್ ಜಾಲದ ಮೂಲ ಹುಡುಕಬೇಕು ಎಂದು ಅವರು ಹೇಳಿದರು.

ಕಾಂಗ್ರೆಸ್ ಶಾಸಕ ಝಮೀರ್ ಅಹ್ಮದ್ ವಿರುದ್ಧ ಕೇಳಿ ಬಂದಿರುವ ಡ್ರಗ್ಸ್ ಮಾಫಿಯಾ ಕುರಿತಾದ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೆ ಝಮೀರ್ ಅಹ್ಮದ್ ಈ ವಿಚಾರದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಅವರ ವಿರುದ್ಧದ ಆರೋಪ ಸಾಬೀತಾದರೆ ತನ್ನ ಆಸ್ತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಲಿ ಎಂದಿದ್ದಾರೆ ಎಂದರು.

ಸಿ.ಟಿ.ರವಿ ವಿರುದ್ಧ ಕಿಡಿ

ನಮ್ಮ ರಾಜ್ಯದಲ್ಲಿ ಕ್ಯಾಸಿನೊ ತರೋಕೆ ಹೊರಟವರು ಯಾರು? ಈಗ ಕ್ಯಾಸಿನೋಗೆ ಹೋಗಿ ಬಂದಿರುವವರ ಬಗ್ಗೆ ಟೀಕೆಗಳನ್ನು ಮಾಡುತ್ತಿರುವವರು ಯಾರು? ಸಚಿವ ಸಿ.ಟಿ.ರವಿಗೆ ಮಾನ, ಮರ್ಯಾದೆ ಏನಾದರೂ ಇದೆಯೇ? ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕಿಡಿಗಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News