ಮೋದಿ ಸರಕಾರ ಭಾರತ ಸೇನೆಯ ಪರ ಇದೆಯೇ, ಚೀನಾ ಸೇನೆಯ ಪರ ಇದೆಯೇ: ರಾಹುಲ್ ಗಾಂಧಿ ಪ್ರಶ್ನೆ

Update: 2020-09-16 17:13 GMT

ಹೊಸದಿಲ್ಲಿ, ಸೆ. 16: ಭಾರತ-ಚೀನಾ ಗಡಿಯಲ್ಲಿ ಕಳೆದ ಆರು ತಿಂಗಳಿಂದ ಯಾವುದೇ ನುಸುಳುವಿಕೆ ಪ್ರಕರಣಗಳು ನಡೆದಿಲ್ಲ ಎಂಬ ಪ್ರತಿಪಾದನೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಹಾಗೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಭಾರತದ ಸೇನೆಯೊಂದಿಗೆ ಇದೆಯೇ, ಚೀನಾ ಸೇನೆಯೊಂದಿಗೆ ಇದೆಯೇ ? ಎಂಬುದನ್ನು ದೃಢಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಕೇಂದ್ರ ಗೃಹ ಖಾತೆಯ ಸಹಾಯಕ ಸಚಿವ ನಿತ್ಯಾನಂದ ರಾಯ್, ಕಳೆದ 6 ತಿಂಗಳಿಂದ ಚೀನಾದಿಂದ ಯಾವುದೇ ನುಸುಳುವಿಕೆ ನಡೆದಿಲ್ಲ ಎಂದು ಲಿಖಿತ ಪ್ರತಿಕ್ರಿಯೆ ನೀಡಿದ ಬಳಿಕ ರಾಹುಲ್ ಗಾಂಧಿ ಅವರು ಕೇಂದ್ರ ಸರಕಾರದ ವಿರುದ್ಧ ಈ ಕಟುವಾದ ವಾಗ್ದಾಳಿ ನಡೆಸಿದ್ದಾರೆ.

‘‘ಕಾಲಗಣನೆಯನ್ನು ಅರ್ಥ ಮಾಡಿಕೊಳ್ಳಿ: ಪ್ರಧಾನಿ ಹೇಳಿದರು-ಯಾರೊಬ್ಬರೂ ಗಡಿ ನುಸುಳಿಲ್ಲ. ಅನಂತರ ಚೀನಾ ಮೂಲದ ಬ್ಯಾಂಕ್‌ನಿಂದ ದೊಡ್ಡ ಮೊತ್ತದ ಸಾಲ ಪಡೆದುಕೊಂಡರು. ಬಳಿಕ ರಕ್ಷಣಾ ಸಚಿವರು ಹೇಳಿದರು-ಚೀನಾ ನಮ್ಮ ನೆಲವನ್ನು ಅತಿಕ್ರಮಿಸಿದೆ. ಈಗ ಕೇಂದ್ರ ಗೃಹ ಖಾತೆಯ ಸಹಾಯಕ ಸಚಿವರು ಹೇಳುತ್ತಾರೆ-ಯಾವುದೇ ನುಸುಳುವಿಕೆ ನಡೆದಿಲ್ಲ. ಮೋದಿ ಸರಕಾರ ಭಾರತದೊಂದಿಗೆ ಇದೆಯೇ ? ಅಥವಾ ಚೀನಾದೊಂದಿಗೆ ಇದೆಯೇ? ಮೋದಿ ಜಿ ಅವರೇ, ಯಾಕೆ ಹೆದರುತ್ತೀರಿ’’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ವಾಸ್ತವ ಗಡಿ ನಿಯಂತ್ರಣ ರೇಖೆ ಪ್ರದೇಶದಲ್ಲಿ ಯಾವುದೇ ನುಸುಳುವಿಕೆ ಇಲ್ಲ ಎಂದು ಪ್ರತಿಪಾದಿಸುವ ಮೂಲಕ ಕೇಂದ್ರ ಸರಕಾರ ಚೀನಾಕ್ಕೆ ಕ್ಲೀನ್ ಚಿಟ್ ನೀಡಿದೆ ಎಂದು ಕಾಂಗ್ರೆಸ್‌ನ ವಕ್ತಾರ ಪವನ್ ಖೇರಾ ಆರೋಪಿಸಿದ್ದಾರೆ. ಚೀನಾದ ಪ್ರಾದೇಶಿಕ ಆಕ್ರಮಣಶೀಲತೆಯನ್ನು ನಿರ್ವಹಿಸುವಲ್ಲಿ ಮೋದಿ ಸರಕಾರದ ಇಂತಹ ‘ಲಜ್ಜೆಗೆಟ್ಟ ದ್ವಂದ್ವತೆ’ ದೇಶಕ್ಕೆ ಆಘಾತ ಉಂಟು ಮಾಡಿದೆ ಎಂದು ಅವರು ಹೇಳಿದ್ದಾರೆ. ಇದು ಗಲ್ವಾನ್ ಕಣಿವೆಯಲ್ಲಿ ಜೂನ್ 15ರಂದು ರಾತ್ರಿ ಹುತಾತ್ಮರಾದ ನಮ್ಮ ಶೂರ ಯೋಧರಿಗೆ ಮಾಡುವ ಅವಮಾನ. ಗಲ್ವಾನ್ ಘರ್ಷಣೆ ಚೀನಾ ಭೂಪ್ರದೇಶದಲ್ಲಿ ನಡೆಯಿತು ಎಂದು ಹೇಳುವುದಕ್ಕೆ ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆಯೇ? ಹೀಗೆ ಹೇಳುವ ಮೂಲಕ ಶತ್ರು ರಾಷ್ಟ್ರಗಳ ಭೂಪ್ರದೇಶಕ್ಕೆ ಭಾರತೀಯ ಸೇನೆ ನುಸುಳಿದೆ ಎಂದು ಸರಕಾರ ಆರೋಪಿಸುತ್ತಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

 ಪೂರ್ವ ಗಡಿಯ ವಾಸ್ತವ ಪರಿಸ್ಥಿತಿಯ ಬಗ್ಗೆ ಕೇಂದ್ರ ಸರಕಾರ ಸ್ಪಷ್ಟ ಚಿತ್ರಣ ನೀಡಬೇಕು. ಭಾರತ ಹಾಗೂ ಅದರ ಸರಕಾರ ಭಾರತದ ಸೇನೆಯ ಜೊತೆಗಿದೆ ಎಂಬ ಸ್ಪಷ್ಟ ಸಂದೇಶ ಜಗತ್ತಿನಾದ್ಯಂತ ರವಾನೆಯಾಗಬೇಕು. ಅಲ್ಲದೆ, ನಮ್ಮ ಭೂಪ್ರದೇಶದ ಕುರಿತು ಚೀನಾದ ಪ್ರತಿಪಾದನೆಯನ್ನು ನ್ಯಾಯಬದ್ಧಗೊಳಿಸಬಾರದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News