ಆರ್ಥಿಕತೆ ಪೂರ್ಣವಾಗಿ ಚೇತರಿಸಿಕೊಂಡಿಲ್ಲ: ಶಕ್ತಿಕಾಂತ ದಾಸ್

Update: 2020-09-16 17:16 GMT

ಹೊಸದಿಲ್ಲಿ,ಸೆ.16: ದೇಶದ ಆರ್ಥಿಕತೆಯು ಈಗಲೂ ಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ಬುಧವಾರ ಹೇಳಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು,ಬೆಳವಣಿಗೆಯನ್ನು ಬೆಂಬಲಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಆರ್‌ಬಿಐ ಸಂಪೂರ್ಣ ಸನ್ನದ್ಧವಾಗಿದೆ ಎಂದು ತಿಳಿಸಿದರು.

ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಒಕ್ಕೂಟ ‘ಫಿಕ್ಕಿ’ ಆಯೋಜಿಸಿದ್ದ ಆನ್‌ಲೈನ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ದಾಸ್,ಸರಕಾರವು ಬಿಡುಗಡೆಗೊಳಿಸಿರುವ ಜಿಡಿಪಿ ದರವು ಕೋವಿಡ್-19 ಉಂಟು ಮಾಡಿರುವ ವಿನಾಶವನ್ನು ಪ್ರತಿಬಿಂಬಿಸುತ್ತಿದೆ ಎಂದು ಹೇಳಿದರು.

ಕೊರೋನ ವೈರಸ್ ಸೋಂಕು ಹರಡುವಿಕೆಯನ್ನು ತಡೆಯಲು ಮಾರ್ಚ್ ಅಂತ್ಯದಲ್ಲಿ ಸರಕಾರವು ಹೇರಿದ್ದ ಕಟ್ಟುನಿಟ್ಟಿನ ಲಾಕ್‌ಡೌನ್‌ನಿಂದಾಗಿ ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಆರ್ಥಿಕತೆಯು ಶೇ.23ರಷ್ಟು ಕುಸಿದಿದೆ.

ಆದಾಗ್ಯೂ ಕೃಷಿ ಚಟುವಟಿಕೆಗಳು ಮತ್ತು ತಯಾರಿಕಾ ಕ್ಷೇತ್ರದ ಸೂಚಕಗಳು ಹಾಗೂ ನಿರುದ್ಯೋಗ ಕುರಿತು ಕೆಲವು ಖಾಸಗಿ ಅಂದಾಜುಗಳು ಹಾಲಿ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ಕೊಂಚ ಸ್ಥಿರತೆಯನ್ನು ಬೆಟ್ಟು ಮಾಡುತ್ತಿವೆ. ಇದೇ ವೇಳೆ ಇತರ ಹಲವಾರು ಕ್ಷೇತ್ರಗಳೂ ಕ್ರಮೇಣ ಚೇತರಿಸಿಕೊಳ್ಳುತ್ತಿವೆ ಎಂದ ದಾಸ್, ಆರ್ಥಿಕತೆಯ ಪುನರಾರಂಭಕ್ಕೆ ಹೆಚ್ಚುತ್ತಿರುವ ಕೊರೋನ ವೈರಸ್ ಸೋಂಕು ಸವಾಲೊಡ್ಡುತ್ತಿದ್ದರೂ ಆರ್ಥಿಕತೆಯು ಕ್ರಮೇಣ ಚೇತರಿಸಿಕೊಳ್ಳಲಿದೆ ಎಂಬ ಎಲ್ಲ ಸಂಕೇತಗಳಿವೆ ಎಂದರು.

ಆರ್‌ಬಿಐ ‘ಯುದ್ಧ ಸನ್ನದ್ಧ ಸ್ಥಿತಿ’ಯಲ್ಲಿದೆ ಮತ್ತು ಹಣಕಾಸು ಹರಿವನ್ನು ಹೆಚ್ಚಿಸಲು,ಬೆಳವಣಿಗೆಯನ್ನು ಬೆಂಬಲಿಸಲು ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸಲು ಅಗತ್ಯವಿರುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ದಾಸ್ ಉದ್ಯಮರಂಗಕ್ಕೆ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News