ಬೇರೆ ಬ್ಯಾಂಕ್‌ಗಳೊಂದಿಗೆ ವಿಲೀನಕ್ಕೆ ನಷ್ಟದಲ್ಲಿರುವ ಪಿಎಂಸಿ ಪ್ರಯತ್ನ: ವರದಿ

Update: 2020-09-16 17:17 GMT

ಹೊಸದಿಲ್ಲಿ, ಸೆ.16: ಸಾಲ ಪಡೆದು ವಂಚನೆ ಪ್ರಕರಣದಿಂದ ತತ್ತರಿಸಿರುವ ಪಂಜಾಬ್ ಆ್ಯಂಡ್ ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್ (ಪಿಎಂಸಿ), ದೇಶದ ಇತರ ಪ್ರಮುಖ ಬ್ಯಾಂಕ್‌ಗಳೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದ್ದು ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದು ಬ್ಯಾಂಕ್‌ನ ಮೂಲಗಳು ಹೇಳಿವೆ.

ಬ್ಯಾಂಕ್‌ನಿಂದ ಬೃಹತ್ ಮೊತ್ತದ ಸಾಲ ಪಡೆದಿರುವವರು ಮರುಪಾವತಿಸದೆ ಬ್ಯಾಂಕ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿತ್ತು. ಈ ಸಂದರ್ಭದಲ್ಲೇ ಕೊರೋನ ಸೋಂಕಿನ ಸಮಸ್ಯೆ ಎದುರಾದ್ದರಿಂದ ಸಾಲ ವಸೂಲು ಪ್ರಕ್ರಿಯೆಗೆ ತೊಡಕಾಗಿತ್ತು. ಬ್ಯಾಂಕ್‌ನಲ್ಲಿ ಹಣದ ಅವ್ಯವಹಾರ ನಡೆದಿರುವುದು ಬೆಳಕಿಗೆ ಬರುತ್ತಿದ್ದಂತೆಯೇ ಬ್ಯಾಂಕ್‌ನ ವ್ಯವಹಾರದ ನಿರ್ವಹಣೆಯನ್ನು ಆರ್‌ಬಿಐ ವಹಿಸಿಕೊಂಡಿದೆ. ಬ್ಯಾಂಕ್‌ನಿಂದ ಠೇವಣಿ ಹಿಂಪಡೆಯಲು 1 ಲಕ್ಷ ರೂ. ಮಿತಿಯನ್ನು ವಿಧಿಸಿರುವುದರಿಂದ ಸಾವಿರಾರು ಠೇವಣಿದಾರರಿಗೆ ತೊಡಕಾಗಿದೆ. ಈ ಮಧ್ಯೆ, ದೇಶದ ಪ್ರಮುಖ ಬ್ಯಾಂಕ್‌ಗಳೊಂದಿಗೆ ವಿಲೀನಗೊಳ್ಳಲು ಪಿಎಂಸಿ ನಿರ್ಧರಿಸಿದ್ದು ಈ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದು ದಿಲ್ಲಿ ಹೈಕೋರ್ಟ್‌ಗೆ ಸೆಪ್ಟಂಬರ್ 10ರಂದು ಸಲ್ಲಿಸಿರುವ ಪತ್ರದಲ್ಲಿ ಬ್ಯಾಂಕ್‌ನ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.

1984ರಲ್ಲಿ ಸ್ಥಾಪನೆಯಾಗಿರುವ ಪಿಎಂಸಿ ಪ್ರಾದೇಶಿಕ ಸಹಕಾರಿ ಬ್ಯಾಂಕ್ ಆಗಿದ್ದು 6 ರಾಜ್ಯಗಳಲ್ಲಿ 137 ಶಾಖೆಗಳನ್ನು ಹೊಂದಿದೆ. ಆದರೆ ಎಚ್‌ಡಿಐಎಲ್ ಸಹಿತ ಹಲವು ಪ್ರಮುಖ ಸಾಲಗಾರರು ಬ್ಯಾಂಕ್‌ಗೆ ಸಾಲ ಮರುಪಾವತಿಸದ ಕಾರಣ ಬ್ಯಾಂಕ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಎಚ್‌ಡಿಐಎಲ್ ಸಂಸ್ಥೆ 6,981 ಕೋಟಿ ರೂ. ಸಾಲ ಬಾಕಿ ಇರಿಸಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News