ಈರುಳ್ಳಿ ರಫ್ತಿನ ಮೇಲೆ ಕೇಂದ್ರದ ನಿಷೇಧವು ರೈತವಿರೋಧಿ ಕ್ರಮವಾಗಿದೆ: ಅಜಿತ್ ಪವಾರ್

Update: 2020-09-16 17:42 GMT

ಮುಂಬೈ,ಸೆ.16: ಈರುಳ್ಳಿ ರಫ್ತನ್ನು ನಿಷೇಧಿಸಿರುವ ಕೇಂದ್ರದ ಕ್ರಮವು ರೈತವಿರೋಧಿಯಾಗಿದೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.

ದೇಶಿಯ ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರವನ್ನು ತಗ್ಗಿಸಲು ಕೇಂದ್ರ ಸರಕಾರವು ಸೋಮವಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಎಲ್ಲ ವಿಧಗಳ ಈರುಳ್ಳಿ ರಫ್ತನ್ನು ನಿಷೇಧಿಸಿದೆ. ಆದರೆ ಬಿಲ್ಲೆಗಳು ಅಥವಾ ಹುಡಿಯ ರೂಪಕ್ಕೆ ಪರಿವರ್ತನೆಗೊಂಡಿರುವ ಈರುಳ್ಳಿಯ ರಫ್ತಿಗೆ ಈ ನಿಷೇಧವು ಅನ್ವಯಿಸುವುದಿಲ್ಲ.

ಬೆಳೆಗಾರರು ತಮ್ಮ ಉತ್ಪನ್ನಗಳಿಗೆ ಒಳ್ಳೆಯ ಬೆಲೆಗಳನ್ನು ಪಡೆಯುತ್ತಿದ್ದಾಗಲೇ ಕೇಂದ್ರವು ಈರುಳ್ಳಿ ರಫ್ತನ್ನು ನಿಷೇಧಿಸಿದೆ ಎಂದು ಹೇಳಿದ ಪವಾರ್,ಇದು ಸಂಪೂರ್ಣವಾಗಿ ತಪ್ಪುಕ್ರಮವಾಗಿದೆ ಮತ್ತು ಕೇಂದ್ರವು ರೈತವಿರೋಧಿಯಾಗಿದೆ ಎನ್ನುವುದು ಸ್ಪಷ್ಟವಾಗಿದೆ. ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ ಈಗಾಗಲೇ ನರಳುತ್ತಿರುವ ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳುವ ಮೂಲಕ ಕೇಂದ್ರ ಸರಕಾರವು ಭಾರೀ ಪಾಪವನ್ನೆಸಗಿದೆ ಎಂದರು.

ಸರಕಾರದ ಕ್ರಮದಿಂದಾಗಿ ಈರುಳ್ಳಿ ಬೆಲೆಗಳು ಕುಸಿದಿವೆ ಎಂದು ಹೇಳಿದ ಮಹಾರಾಷ್ಟ್ರ ಕಂದಾಯ ಸಚಿವ ಹಾಗೂ ರಾಜ್ಯಕಾಂಗ್ರೆಸ್ ಅಧ್ಯಕ್ಷ ಬಾಳಾಸಾಹೇಬ್ ಥೋರಟ್ ಅವರು,ರೈತರಿಗಾಗಿರುವ ಅನ್ಯಾಯದ ವಿರುದ್ಧ ತನ್ನ ಪಕ್ಷವು ಹೋರಾಡಲಿದೆ ಎಂದು ತಿಳಿಸಿದರು.

ನಿಷೇಧವನ್ನು ಹಿಂದೆಗೆದುಕೊಳ್ಳುವಂತೆ ಮಂಗಳವಾರ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ ಗೋಯಲ್ ಅವರನ್ನು ಒತ್ತಾಯಿಸಿದ್ದ ಎನ್‌ಸಿಪಿ ವರಿಷ್ಠ ಶರದ್ ಪವಾರ ಅವರು,ಸರಕಾರದ ನಿರ್ಧಾರದ ವಿರುದ್ಧ ರೈತರ ಪ್ರತಿಭಟನೆಗಳು ಮತ್ತು ಅದು ಈರುಳ್ಳಿ ಬೆಳೆಗಾರರ ಮೇಲೆ ಬೀರಲಿರುವ ಹಣಕಾಸು ಪರಿಣಾಮಗಳ ಬಗ್ಗೆ ತಿಳಿಸಿದ್ದರು.

ಈರುಳ್ಳಿ ರಫ್ತು ನಿಷೇಧವನ್ನು ವಿರೋಧಿಸಿ ಮಹಾರಾಷ್ಟ್ರದಲ್ಲಿ ರೈತರು ಮಂಗಳವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಎಪಿಎಂಸಿಗಳಲ್ಲಿ ವಹಿವಾಟು ಸ್ಥಗಿತಗೊಂಡಿತ್ತು. ರೈತರು ಮುಂಬೈ-ಆಗ್ರಾ ಹೆದ್ದಾರಿಯನ್ನೂ ತಡೆದಿದ್ದರು. ನಿಷೇಧದ ಬಳಿಕ ಈರುಳ್ಳಿ ಬೆಲೆ ಪ್ರತಿ ಕ್ವಿಂಟಲ್‌ಗೆ 2950 ರೂ.ನಿಂದ 2700 ರೂ.ಗೆ ಕುಸಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News