​ಕೋವಿಡ್ ಹೀರೊಗಳ ನಿರ್ಲಕ್ಷ್ಯ: ಕೇಂದ್ರದ ವಿರುದ್ಧ ಐಎಂಎ ಆಕ್ರೋಶ

Update: 2020-09-17 04:09 GMT

ಹೊಸದಿಲ್ಲಿ, ಸೆ.17: ಕೊರೋನ ವೈರಸ್ ಸೋಂಕಿನ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಸಂಸತ್‌ನಲ್ಲಿ ನೀಡಿದ ಹೇಳಿಕೆಯಲ್ಲಿ ಕರ್ತವ್ಯಪಾಲನೆ ವೇಳೆ ಜೀವ ಕಳೆದುಕೊಂಡ ವೈದ್ಯರ ಉಲ್ಲೇಖ ಮಾಡದಿರುವುದು ಮತ್ತು ಆರೋಗ್ಯ ರಾಜ್ಯ ವಿಷಯವಾಗಿರುವುದರಿಂದ ಈ ಬಗ್ಗೆ ಮಾಹಿತಿ ಇಲ್ಲ ಎಂದು ರಾಜ್ಯ ಸಚಿವರು ಹೇಳಿಕೆ ನೀಡಿರುವುದು ವೈದ್ಯರ ಪ್ರಾತಿನಿಧಿಕ ಸಂಸ್ಥೆಯಾದ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮುನಿಸಿಗೆ ಕಾರಣವಾಗಿದೆ.

"ಸರ್ಕಾರ ವೈದ್ಯರ ಬಗ್ಗೆ ನಿರ್ಲಕ್ಷ್ಯ ತೋರಿದ್ದು, ಹೀರೊಗಳನ್ನೇ ಕೈಬಿಟ್ಟಿದೆ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ 1897ರ ಸಾಂಕ್ರಾಮಿಕ ರೋಗಗಳ ಕಾಯ್ದೆ ಮತ್ತು ವಿಕೋಪ ನಿರ್ವಹಣಾ ಕಾಯ್ದೆಯ ಜಾರಿಗೆ ನೈತಿಕ ಅಧಿಕಾರ ಕಳೆದುಕೊಂಡಿದೆ" ಎಂದು ವೈದ್ಯರ ಅತ್ಯುನ್ನತ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

ಇದುವರೆಗೆ ದೇಶದಲ್ಲಿ 382 ಮಂದಿ ವೈದ್ಯರು ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾರೆ. 27 ವರ್ಷದ ಕಿರಿಯ ವೈದ್ಯನಿಂದ ಹಿಡಿದು 85 ವರ್ಷದ ಹಿರಿಯ ವೈದ್ಯರವರೆಗೆ ಸೋಂಕಿಗೆ ಬಲಿಯಾಗಿದ್ದಾರೆ ಎಂದು ವಿವರ ನೀಡಿದೆ. ಸಾಂಕ್ರಾಮಿಕ ರೋಗದ ನಿಯಂತ್ರಣದಲ್ಲಿ ಆರೋಗ್ಯ ಕ್ಷೇತ್ರದ ಕಾರ್ಯಕರ್ತರ ಕೊಡುಗೆಯ ಬಗ್ಗೆ ಶ್ಲಾಘಿಸುವ ವೇಳೆ ಆರೋಗ್ಯ ಸಚಿವರು, ಕೋವಿಡ್‌ನಿಂದ ಮೃತಪಟ್ಟ ವೈದ್ಯರ ಬಗ್ಗೆ ಉಲ್ಲೇಖಿಸಿಲ್ಲ ಎಂದು ಐಎಂಎ ಆಕ್ಷೇಪ ವ್ಯಕ್ತಪಡಿಸಿದೆ.

ಇಡೀ ವಿಶ್ವದಲ್ಲಿ ಭಾರತದಂತೆ ಯಾವ ದೇಶವೂ ಆರೋಗ್ಯ ಕ್ಷೇತ್ರದ ಕಾರ್ಯಕರ್ತರನ್ನು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಕಳೆದುಕೊಂಡಿಲ್ಲ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

ಸಾರ್ವಜನಿಕ ಆರೋಗ್ಯ ಮತ್ತು ಆಸ್ಪತ್ರೆಗಳು ರಾಜ್ಯ ವಿಷಯದಲ್ಲಿ ಬರುವುದರಿಂದ ಸಾವಿಗೀಡಾದ ಕರ್ತವ್ಯನಿರತ ವೈದ್ಯರ ಕುಟುಂಬಗಳಿಗೆ ನೀಡಿದ ಪರಿಹಾರದ ಬಗ್ಗೆ ಕೂಡಾ ಯಾವುದೇ ಮಾಹಿತಿ ಇಲ್ಲ ಎಂದು ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಹೇಳಿಕೆ ನೀಡಿರುವ ಬಗ್ಗೆಯೂ ಐಎಂಎ ಅಸಮಾಧಾನ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News