ವಿಪಕ್ಷಗಳು 'ಐತಿಹಾಸಿಕ' ಕೃಷಿ ಮಸೂದೆಗಳ ಬಗ್ಗೆ ಸುಳ್ಳು ಹರಡುತ್ತಿವೆ: ಪ್ರಧಾನಿ

Update: 2020-09-18 14:34 GMT

ಹೊಸದಿಲ್ಲಿ: ಸಂಸತ್ತಿನಲ್ಲಿ ಮಂಡಿಸಲಾಗಿರುವ ಮೂರು ಕೃಷಿ ಮಸೂದೆಗಳ ಸುತ್ತ ಹರಡಿರುವ ವಿವಾದದ ಕುರಿತಂತೆ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷಗಳು ಈ ಕುರಿತಂತೆ ಸುಳ್ಳು ಹರಡುತ್ತಿವೆ ಹಾಗೂ ವಾಸ್ತವವಾಗಿ ಈ ಮಸೂದೆಗಳು ಐತಿಹಾಸಿಕ ಕ್ರಮಗಳಾಗಿದ್ದು, ಅವುಗಳು ರೈತರಿಗೆ ಪ್ರಯೋಜನಕಾರಿಯಾಗಿವೆ ಎಂದಿದ್ದಾರೆ.

“ಚುನಾವಣೆ ಸಂದರ್ಭ ಇಂತಹುದೇ ಯೋಜನೆಯ ಭರವಸೆ ನೀಡಿದ್ದ ಅದೇ ಪಕ್ಷಗಳು ಇದೀಗ ಈ ಮಸೂದೆಗಳನ್ನು ನಾವು ಜಾರಿಗೊಳಿಸುತ್ತಿದ್ದೇವೆ ಎಂಬ ಕಾರಣಕ್ಕೆ ವಿರೋಧಿಸುತ್ತಿದ್ದಾರೆ” ಎಂದು ಪ್ರಧಾನಿ ನೀಡಿರುವ ಹೇಳಿಕೆಯ ವೀಡಿಯೋ ಇಂದು  ಬಿಡುಗಡೆಗೊಳಿಸಲಾಗಿದೆ.

“ಹಿಂದೆ ಎಪಿಎಂಸಿ ನಿಬಂಧನೆಗಳನ್ನು ತಿದ್ದುಪಡಿಗೊಳಿಸುವ ಭರವಸೆಯನ್ನು ಅವರು ರೈತರಿಗೆ ನೀಡಿದ್ದರು ಹಾಗೂ ಇದೀಗ ಅವುಗಳನ್ನು ವಿರೋಧಿಸುತ್ತಿದ್ದಾರೆ. ಅವರಿಗೆ ರೈತರಿಗೆ ಸಹಾಯ ಮಾಡುವುದು ಬೇಕಿಲ್ಲ ಬದಲು ಅವರು ಮಧ್ಯವರ್ತಿಗಳಿಗೆ ಸಹಾಯ ಮಾಡಲು ಇಚ್ಛಿಸಿದ್ದಾರೆ,'' ಎಂದು ಪ್ರಧಾನಿ ಹೇಳಿದರು.

“ದಶಕಗಳ ಕಾಲ ದೇಶವನ್ನು ಆಳಿದ ಈ ಜನರ ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕು. ಈಗ ಅವರು ರೈತರನ್ನು ತಮ್ಮ ಮಾತುಗಳು ಮತ್ತು ಸಂಚಿನಿಂದ ಬಲೆಗೆ ಹಾಕಿಕೊಳ್ಳಲು ಯತ್ನಿಸುತ್ತಿದ್ದಾರೆ. ನಮ್ಮ ಸರಕಾರ ಕೈಗೊಂಡ ಕ್ರಮ ಐತಿಹಾಸಿಕವಾಗಿದೆ ಹಾಗೂ ನಮ್ಮ ರೈತರ ಸಮಸ್ಯೆ ಪರಿಹರಿಸಲಿದೆ. ತಮಗೆಲ್ಲಿ ಬೇಕೋ ಅಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರಿಗೆ ಅನುಮತಿಸಬೇಕಿದೆ. ಆದರೆ ಸರಕಾರ ಗೋಧಿ, ಅಕ್ಕಿ ಮತ್ತಿತರ ಉತ್ಪನ್ನಗಳನ್ನು ಎಂಎಸ್‍ಪಿ ನಿಯಮದಂತೆ ಖರೀದಿಸುವುದಿಲ್ಲ ಎಂದು ಈ ಜನರು ಸುಳ್ಳು ಹರಡುತ್ತಿದ್ದಾರೆ'' ಎಂದು ಹೇಳಿದರು.

“ರೈತರಿಗೆ ಈ ಮಸೂದೆಗಳು ಗುರಾಣಿಯಿದ್ದಂತೆ. ರೈತರಿಗೆ ಹೊಸ ಸ್ವಾತಂತ್ರ್ಯ ನೀಡಲಾಗಿದೆ. ಅವರಿಗೆ ಈಗ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚಿನ ಆಯ್ಕೆಗಳಿವೆ. ಈ ಮಸೂದೆಗಳ ಅಂಗೀಕಾರದ ಸಂದರ್ಭ ಅವರಿಗೆ ಶುಭ ಹಾರೈಸುತ್ತೇನೆ. ಮಧ್ಯವರ್ತಿಗಳ ಹಾವಳಿಯಿಂದ ರೈತರನ್ನು ರಕ್ಷಿಸಲು ಇವುಗಳು ಅಗತ್ಯವಿದೆ” ಎಂದು ಪ್ರಧಾನಿ ಹೇಳಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಬಿಹಾರದಲ್ಲಿ ನೂತನ ರೈಲು ಮಾರ್ಗಗಳು ಹಾಗೂ ವಿದ್ಯುದೀಕರಣ ಯೋಜನೆಗಳಿಗೆ ಚಾಲನೆ ನೀಡಿದರು.

ಬಿಜೆಪಿಯ ಮಿತ್ರಪಕ್ಷವಾದ ಶಿರೋಮಣಿ ಅಕಾಲಿದಳ ಕೂಡಾ ವಿಧೇಯಕವನ್ನು ವಿರೋಧಿಸಿತ್ತು. ಗುರುವಾರ ವಿಧೇಯಕವು ಲೋಕಸಭೆಯಲ್ಲಿ ಅಂಗೀಕಾರಗೊಂಡ ಬಳಿಕ, ಶಿರೋಮಣಿ ಅಕಾಲಿದಳದ ಸಂಸದೆ, ಕೇಂದ್ರ ಸಚಿವೆ ಹರ್‌ಸಿಮ್ರಾತ್ ಕೌರ್ ಗುರುವಾರ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.

ಕೃಷಿ ವಿಧೇಯಕಗಳ ವಿರುದ್ಧ ತೀವ್ರಗೊಂಡ ಪ್ರತಿಭಟನೆ

  ಈ ಮಧ್ಯೆ ನೂತನ ಕೃಷಿ ವಿಧೇಯಕಗಳ ವಿರುದ್ಧ ಕಳೆದ ಒಂದು ವಾರದಿಂದ ದೇಶದ ವಿವಿಧೆಡೆ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ. ನೂತನ ಕೃಷಿ ವಿಧೇಯಕಗಳು ಕೃಷಿರಂಗವನ್ನು ಕಾರ್ಪೊರೇಟ್ ವಲಯದ ಪ್ರಾಬಲ್ಯಕ್ಕೆ ಒಳಪಡಿಸುತ್ತವೆಯೆಂದು ರೈತರು ಆರೋಪಿಸುತ್ತಾರೆ.

  ಮೂರು ಕೃಷಿ ವಿಧೇಯಕಗಳ ಜಾರಿಯನ್ನು ವಿರೋಧಿಸಿ ಸೆಪ್ಟೆಂಬರ್ 24ರಿಂದ 26ರವರೆಗೆ ಮೂರು ದಿನಗಳ ರೈಲ್ ರೋಕೋ ಪ್ರತಿಭಟನೆ ನಡೆಸುವುದಾಗಿ ಪಂಜಾಬ್‌ನ ಕಿಸಾನ್ ಮಜ್ದೂರ್ ಸಂಘರ್ಷ್ ಸಂಘಟನೆ ಘೋಷಿಸಿದ್ದರೆ,  ಇತರ ರೈತ ಸಂಘಟನೆಗಳು ವಿಧೇಯಕವನ್ನು ವಿರೋಧಿಸಿ ಸೆಪ್ಟೆಂಬರ್ 25ರಂದು ಪಂಜಾಬ್ ಬಂದ್‌ಗೆ ಕರೆ ನೀಡಿವೆ.

ಉತ್ತರಪ್ರದೇಶ, ತೆಲಂಗಾಣ, ಹರ್ಯಾಣ ರಾಜ್ಯಗಳಲ್ಲೂ ಕೃಷಿ ವಿಧೇಯಕಗಳ ವಿರುದ್ಧ ಪ್ರತಿಭಟನೆಗಳು ಮುಂದುವರಿದಿವೆ. ನೂತನ ಕೃಷಿ ವಿಧೇಯಕಗಳು ರೈತರನ್ನು ಕಾರ್ಪೊರೇಟ್ ಶಕ್ತಿಗಳ ಕೃಪೆಯಲ್ಲಿ ಬದುಕುವಂತೆ ಮಾಡಲಿದೆ ಎಂದು ಭಾರತ ಕಿಸ್ ಸಂಘರ್ಷ್ ಸಮಿತಿ ಅಧ್ಯಕ್ಷ ದರ್ಶನ್ ಪಾಲ್ ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News