ಡ್ರಗ್ಸ್ ದಂಧೆ ಆರೋಪ: ನಿರೂಪಕ ಅಕುಲ್ ಬಾಲಾಜಿ ಸೇರಿ ಮೂವರಿಗೆ ಸಿಸಿಬಿ ಸೂಚನೆ

Update: 2020-09-18 14:36 GMT
Photo: Facebook/Akul Balaji

ಬೆಂಗಳೂರು, ಸೆ.18: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ತನಿಖೆ ಮುಂದುವರಿಸಿರುವ ಸಿಸಿಬಿ ಪೊಲೀಸರು, ಖಾಸಗಿ ವಾಹಿನಿಯಲ್ಲಿ ಕಾರ್ಯಕ್ರಮ ನಿರೂಪಕನಾಗಿರುವ ಅಕುಲ್ ಬಾಲಾಜಿ ಸೇರಿದಂತೆ ಮೂವರನ್ನು ಸೆ.19ರಂದು ವಿಚಾರಣೆ ನಡೆಸಲಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಸಂತೋಷ್ ಕುಮಾರ್ ಹಾಗೂ ಮಾಜಿ ಶಾಸಕ ಆರ್.ವಿ.ದೇವರಾಜ್ ಪುತ್ರ ಯುವರಾಜ್ ಅವರಿಗೂ ನೋಟಿಸ್ ಜಾರಿಗೊಳಿಸಿದ್ದು, ಶನಿವಾರ ಇಲ್ಲಿನ ಚಾಮರಾಜಪೇಟೆಯಲ್ಲಿನ ಸಿಸಿಬಿ ಕಚೇರಿಗೆ ಹಾಜರಾಗುವಂತೆ ಹೇಳಲಾಗಿದೆ.

ಪ್ರಕರಣ ಸಂಬಂಧ ನಟಿ ರಾಗಿಣಿ, ಸಂಜನಾ, ಪ್ರತೀಕ್ ಶೆಟ್ಟಿ, ವೈಭವ್ ಜೈನ್ ಹಾಗೂ ಇತರೆ ಆರೋಪಿಗಳಿಂದ ಮಾಹಿತಿ ಪಡೆದಿರುವ ಸಿಸಿಬಿ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಈ ಮೂವರಿಗೆ ಸೂಚನೆ ನೀಡಿದ್ದಾರೆ.

ಮೂವರ ಬಳಿಯಿಂದ ಮೊಬೈಲ್‍ಗಳನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ಎಫ್‍ಎಸ್‍ಎಲ್ ಕಚೇರಿಗೆ ರವಾನೆ ಮಾಡಲಿದ್ದಾರೆ ಎನ್ನಲಾಗಿದೆ. ಇನ್ನು, ಇತ್ತೀಚಿಗಷ್ಟೇ, ನಟ ದಿಗಂತ್, ಐಂದ್ರಿತಾ ರೈ ಅವರ ವಿಚಾರಣೆ ನಡೆಸಿದ್ದ ಸಿಸಿಬಿ ಪೊಲೀಸರು, ಇದೀಗ ಈ ಮೂವರಿಗೆ ನೋಟಿಸ್ ನೀಡಿರುವುದು ಕುತೂಹಲ ಕೆರಳಿಸಿದೆ.

5ನೇ ಆರೋಪಿ ಡ್ರಗ್ಸ್ ವ್ಯಸನಿ?: ಇದೇ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ವೈಭವ್ ಜೈನ್ ಓರ್ವ ಡ್ರಗ್ ವ್ಯಸನಿ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

ಈತನ ಪತ್ನಿ ಪೂಜಾ ಎಂಬಾಕೆ ಈಗಾಗಲೇ ಇಲ್ಲಿನ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ವೈಭವ್, ಡ್ರಗ್ಸ್ ಸೇವಿಸಿ ಇನ್ನೊರ್ವ ಯುವತಿ ಗೀತಿಕಾ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News