ಕೊರೋನ ನೆಗೆಟಿವ್ ಇದ್ದವರಿಗೆ ಮಾತ್ರ ಅಧಿವೇಶನಕ್ಕೆ ಪ್ರವೇಶ: ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮೀ

Update: 2020-09-18 18:03 GMT

ಬೆಂಗಳೂರು, ಸೆ. 18: ಇದೇ ತಿಂಗಳ 21ರಿಂದ ಆರಂಭಗೊಳ್ಳಲಿರುವ ವಿಧಾನ ಮಂಡಲ ಅಧಿವೇಶನಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕಲಾಪಕ್ಕೆ ಹಾಜರಾಗುವ ಪರಿಷತ್ತಿನ ಸದಸ್ಯರು, ಅಧಿಕಾರಿ, ಸಿಬ್ಬಂದಿ ಸೇರಿದಂತೆ ಮಾಧ್ಯಮ ಪ್ರತಿನಿಧಿಗಳು ಕೋವಿಡ್-19 ಪರೀಕ್ಷೆಗೆ ಒಳಗಾಗುವುದು ಕಡ್ಡಾಯ. ಕೊರೋನ ಪರೀಕ್ಷಾ ವರದಿ ನೆಗೆಟಿವ್ ಇದ್ದವರಿಗೆ ಮಾತ್ರ ಅಧಿವೇಶನಕ್ಕೆ ಪ್ರವೇಶ ಕಲ್ಪಿಸಲಾಗುವುದು ಎಂದು ವಿಧಾನ ಪರಿಷತ್ತಿನ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮೀ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಸಮಿತಿ ಕೊಠಡಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ಮಾರ್ಗಸೂಚಿ ಹಿನ್ನೆಲೆಯಲ್ಲಿ ಎಲ್ಲ ಸದಸ್ಯರು ಆರ್‍ಟಿ-ಪಿಸಿಆರ್ ಪರೀಕ್ಷೆ ಮಾಡಿಕೊಂಡು ದೃಢೀಕರಣ ವರದಿಯನ್ನು ತರಬೇಕು. ಅಧಿವೇಶನ ಮುಕ್ತಾಯಗೊಳ್ಳುವವರೆಗೂ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಪ್ರತಿದಿನ ಕಲಾಪ ಆರಂಭಕ್ಕೂ ಮುನ್ನ ಹಾಗೂ ಮುಗಿದ ತಕ್ಷಣ ಎರಡೆರಡು ಬಾರಿ ಸ್ಯಾನಿಟೈಸ್ ಮಾಡಲಾಗುವುದು. ಸೂಕ್ತ ಅಂತರ ಕಾಯ್ದುಕೊಳ್ಳಲು ಆಸ್ಥೆ ವಹಿಸಿದ್ದು, ಅಗತ್ಯ ಮುನ್ನಚ್ಚರಿಕೆಯೊಂದಿಗೆ ಕಲಾಪ ನಡೆಸಲು ತೀರ್ಮಾನಿಸಲಾಗಿದೆ ಎಂದ ಅವರು, ಎಲ್ಲ ಸದಸ್ಯರಿಗೆ ಮಾಸ್ಕ್ ಮತ್ತು ಫೇಸ್ ಶೀಲ್ಡ್ ನೀಡಲಾಗುತ್ತಿದ್ದು, ಸದಸ್ಯರ ಮೇಜಿನ ಮೇಲೆ ಸ್ಯಾನಿಟೈಸರ್ ಒದಗಿಸಲಾಗುತ್ತದೆ. ಅಲ್ಲದೆ, ಆಸನಗಳ ನಡುವೆ ಪಾರದರ್ಶಕ ಫೈಬರ್ ಶೀಟ್ ಅಳವಡಿಸಲಾಗಿದೆ ಎಂದು ತಿಳಿಸಿದರು.

ಕಲಾಪ ವೀಕ್ಷಣೆಗೆ ಈ ಅಧಿವೇಶನದಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಮೊದಲ ದಿನ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ಈವರೆಗೆ 1,254 ಪ್ರಶ್ನೆಗಳನ್ನು ಸ್ವೀಕರಿಸಿದ್ದೇವೆ. ಒಂಭತ್ತು ವಿಧೇಯಕಗಳು ಪರಿಷತ್ತಿನ ಒಪ್ಪಿಗೆ ಪಡೆಯಬೇಕಿದೆ. ಆ ಪೈಕಿ ಎರಡು ಅಧ್ಯಾದೇಶಗಳನ್ನು ಹಿಂಪಡೆಯಲಾಗುವುದು. ಉಳಿದ ಏಳು ವಿಧೇಯಕಗಳು ಮಂಡನೆಯಾಗಲಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪರಿಷತ್ತಿನ ಜಂಟಿ ಕಾರ್ಯದರ್ಶಿ ನಿರ್ಮಲಾ, ಉಪ ಕಾರ್ಯದರ್ಶಿ ಗಾಯತ್ರಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News