ನಟ, ಬಿಜೆಪಿ ಸಂಸದ ರವಿ ಕಿಶನ್ ಗಾಂಜಾ ಸೇದುತ್ತಿದ್ದರು: ಅನುರಾಗ್ ಕಶ್ಯಪ್

Update: 2020-09-19 10:53 GMT

ಮುಂಬೈ: ಭೋಜಪುರಿ ನಟ ಹಾಗೂ ಬಿಜೆಪಿ ಸಂಸದ ರವಿ ಕಿಶನ್ ಅವರು  ತಮ್ಮ ಜೀವನದಲ್ಲಿ ಬಹಳಷ್ಟು ಸಮಯ ಗಾಂಜಾ ಸೇದಿದ್ದಾರೆ ಹಾಗೂ ಇಡೀ ಜಗತ್ತಿಗೆ ಇದು ತಿಳಿದಿದೆ ಎಂದು ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿಕೊಂಡಿದ್ದಾರೆ.

ಪತ್ರಕರ್ತೆ ಫೇ ಡಿ'ಸೋಜಾ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಶ್ಯಪ್, ಬಾಲಿವುಡ್ ಡ್ರಗ್ಸ್ ವ್ಯಸನಿಯಾಗಿದೆ ಎಂದು ಲೋಕಸಭೆಯಲ್ಲಿ  ಹೇಳಿಕೆ ನೀಡಿದ ಕಿಶನ್ ಅವರನ್ನು ಖಂಡಿಸಿದ್ದಾರೆ.

“ರವಿ ಕಿಶನ್ ಅವರು ತಮ್ಮ ದಿನದ ಆರಂಭವನ್ನು ಜೈ ಶಿವ್ ಶಂಕರ್, ಜೈ ಭೂಂ ಭೋಲೆ, ಜೈ ಶಿವ್ ಶಂಭು ಎಂದು ಹೇಳಿಕೊಂಡು ಆರಂಭಿಸುತ್ತಾರೆ. ತಮ್ಮ ಜೀವನದ ಅತ್ಯಂತ ದೀರ್ಘ ಅವಧಿ ಅವರು ಗಾಂಜಾ ಬಳಸಿದ್ದಾರೆ. ಎಲ್ಲರಿಗೂ ಇದು ತಿಳಿದಿದೆ. ಇದನ್ನು ತಿಳಿಯದ ಒಬ್ಬನೇ ಒಬ್ಬ ವ್ಯಕ್ತಿಯಿಲ್ಲ, ಆತ ಈಗ ಅದನ್ನು ಕೈಬಿಟ್ಟಿರಬಹುದು, ಅವರು ಸಚಿವರಾಗಿದ್ದರಿಂದ ಈಗ ಅದನ್ನು ತ್ಯಜಿಸಿರಬಹುದು'' ಎಂದು ಕಶ್ಯಪ್ ಹೇಳಿದ್ದಾರೆ.

ಕಶ್ಯಪ್ ಹಾಗೂ ರವಿ ಕಿಶನ್ ಅವರು 2017ರಲ್ಲಿ ತೆರೆ ಕಂಡ `ಮುಕ್ಕಾಬಾಝ್‍ನಲ್ಲಿ' ಜತೆಯಾಗಿ ಕೆಲಸ ಮಾಡಿದ್ದರು.

ಈ ಸಂದರ್ಶನದಲ್ಲಿ ತಾವು ಕೂಡ 2006 ಹಾಗೂ 2008 ನಡುವೆ  ಕೆಮಿಕಲ್ ಡ್ರಗ್ಸ್  ಬಳಸಿರುವ ಕುರಿತು ಮನಬಿಚ್ಚಿ ಮಾತನಾಡಿದ ಕಶ್ಯಪ್ ತಮ್ಮ ಚಿತ್ರ ‘ಬ್ಲ್ಯಾಕ್ ಫ್ರೈಡೆ’ ನಿಷೇಧಗೊಂಡಾಗ ಹಾಗೂ ಆರತಿ ಬಜಾಜ್ ಜತೆಗಿನ ತಮ್ಮ ವೈವಾಹಿಕ ಬದುಕು ಮುರಿದು ಬಿದ್ದಾಗ ತೀವ್ರ ಮಾನಸಿಕ ಯಾತನೆಗೊಳಗಾಗಿದ್ದನ್ನು ನೆನಪಿಸಿದ್ದರಲ್ಲದೆ , ತಾನು ಯಾವತ್ತೂ ಗಾಂಜಾ ಸೇದಿಲ್ಲ. ಆದರೆ ತನ್ನ ಸಿಗರೇಟಿಗೆ ತಾನೇ ತಂಬಾಕು ತುಂಬಿಸಿ ಸೇದುತ್ತಿದ್ದುದರಿಂದ ಕೆಲ ಜನರು ತಾವು ಗಾಂಜಾ ಸೇದಿದ್ದೆಂದು ತಿಳಿದಿದ್ದಾರೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News