ಒಳಮೀಸಲಾತಿ ಎಂಬ ಎರಡು ಮೊನೆಯ ಸೂಜಿ..!

Update: 2020-09-19 19:30 GMT

ಜಾತಿಗಳ ಸೇರ್ಪಡೆ ಅಥವಾ ತೆಗೆದು ಹಾಕುವ ಅಧಿಕಾರ ಪಾರ್ಲಿಮೆಂಟ್ ಮತ್ತು ರಾಷ್ಟ್ರಪತಿಗೆ ಮಾತ್ರ ಇದೆ ಎಂಬ ಒಂದೇ ಒಂದು ವಾಕ್ಯವನ್ನು ಗಟ್ಟಿಯಾಗಿ ಹಿಡಿದುಕೊಂಡು ಹಲವು ರಾಜ್ಯ ಸರಕಾರಗಳು ಇದುವರೆಗೆ ಒಳಮೀಸಲಾತಿ ಕುರಿತ ಹೋರಾಟಗಾರರ ಮೂಗಿಗೆ ತುಪ್ಪ ಸವರುತ್ತ ತಾವು ಮಾತ್ರ ತಪ್ಪಿಸಿಕೊಳ್ಳುತ್ತಿದ್ದವು. ಆದರೆ ಇತ್ತೀಚಿನ ತೀರ್ಪು ರಾಜ್ಯ ಸರಕಾರಗಳ ಬುಡಕ್ಕೆ ಬೆಂಕಿ ಇಟ್ಟಿದೆ ಎಂದರೆ ತಪ್ಪಲ್ಲ.


ಒಳ ಮೀಸಲಾತಿ ಕುರಿತು ರಾಜ್ಯ ಸರಕಾರಗಳೇ ಚಿಂತನೆ ಮಾಡುವುದು ಒಳಿತು ಎಂದು ಇತ್ತೀಚಿನ ಸುಪ್ರೀಂಕೋರ್ಟ್ ಆದೇಶ ದೇಶಾದ್ಯಂತ ಒಂದು ರೀತಿಯಲ್ಲಿ ಸಂಚಲನ ಉಂಟುಮಾಡಿದೆ. 2005ರಲ್ಲಿ ಒಳಮೀಸಲಾತಿ ಸಾಧ್ಯವಿಲ್ಲ ಎಂಬ ಅಂದಿನ ಐದು ನ್ಯಾಯಾಧೀಶರ ಪೀಠದ ತೀರ್ಪನ್ನು(ಚಿನ್ನಯ್ಯ ಮತ್ತು ಆಂಧ್ರ ಪ್ರದೇಶ ಪ್ರಕರಣ)ಮರು ಪರಿಶೀಲಿಸುವ ಕಾಲ ಬಂದಿದೆ ಎಂದು ಇತ್ತೀಚೆಗೆ ಸುಪ್ರೀಂಕೋರ್ಟ್ ಪಂಜಾಬ್ ಹಾಗೂ ದೇವೇಂದ್ರ ಸಿಂಗ್ ಪ್ರಕರಣದಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್ ‘‘ಎಲ್ಲಾ ಒಂದೇ ವರ್ಗ ಎಂಬ ಕಾರಣಕ್ಕೆ ಎಲ್ಲಾ ಹಣ್ಣುಗಳ ಬುಟ್ಟಿಯನ್ನು ಬಲಶಾಲಿ ಜಾತಿಯೊಂದಿಗೆ ಸದಾ ನೀಡಲಾಗದು’’ ಎಂದು ಬಹಳ ಮಾರ್ಮಿಕವಾಗಿ ತನ್ನ ತೀರ್ಪಿನಲ್ಲಿ ದಾಖಲಿಸಿದೆ. ಇದು ಒಂದು ರೀತಿ ಮೀಸಲಾತಿ ಜೇನುಗೂಡಿಗೆ ಹೊಸದಾಗಿ ಕಲ್ಲು ಹೊಡೆಯುವ ಪ್ರಯತ್ನ ಎನ್ನಬಹುದು. ಇದರಿಂದ ಆಯಾ ಭೌಗೋಳಿಕ ಪ್ರದೇಶಗಳಿಗುಣವಾಗಿ ಸಾಮಾಜಿಕವಾಗಿ ಹೊರಗೆ ಉಳಿದವರಿಗೆ ಮತ್ತು ಅಲೆಮಾರಿಗಳಂತೆ ಮೀಸಲು ವಂಚಿತ ಜನರಿಗೆ ಸಾಕಷ್ಟು ಉಪಯೋಗವಾಗುವ ಸಾಧ್ಯತೆಯಿದೆ. ಇದರ ಅರ್ಥ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ಜಾತಿಗಳ ಒಳಗೆ ಇನ್ನೂ ಮೀಸಲಾತಿ ತಲುಪದ ಕೆಲವು ಜಾತಿಗಳಿಗೆ ಮೀಸಲಾತಿ ಸೃಷ್ಟಿಸುವುದರ ಬಗ್ಗೆ ಸಮಯ ಕೂಡಿಬಂದಿದೆ.

  ಜಾತಿಗಳ ಸೇರ್ಪಡೆ ಅಥವಾ ತೆಗೆದು ಹಾಕುವ ಅಧಿಕಾರ ಪಾರ್ಲಿಮೆಂಟ್ ಮತ್ತು ರಾಷ್ಟ್ರಪತಿಗೆ ಮಾತ್ರ ಇದೆ ಎಂಬ ಒಂದೇ ಒಂದು ವಾಕ್ಯವನ್ನು ಗಟ್ಟಿಯಾಗಿ ಹಿಡಿದುಕೊಂಡು ಹಲವು ರಾಜ್ಯ ಸರಕಾರಗಳು ಇದುವರೆಗೆ ಒಳಮೀಸಲಾತಿ ಕುರಿತ ಹೋರಾಟಗಾರರ ಮೂಗಿಗೆ ತುಪ್ಪ ಸವರುತ್ತ ತಾವು ಮಾತ್ರ ತಪ್ಪಿಸಿಕೊಳ್ಳುತ್ತಿದ್ದವು. ಆದರೆ ಇತ್ತೀಚಿನ ತೀರ್ಪು ರಾಜ್ಯ ಸರಕಾರಗಳ ಬುಡಕ್ಕೆ ಬೆಂಕಿ ಇಟ್ಟಿದೆ ಎಂದರೆ ತಪ್ಪಲ್ಲ. ಇದು ಕೋರ್ಟಿನ ಕೇವಲ ಆಶಯ ಎನ್ನಬಹುದು, ಆದರೆ ಆದೇಶವಲ್ಲ ಎನ್ನುತ್ತಾರೆ ಹಿರಿಯ ಕಾನೂನು ತಜ್ಞರು. ಒಂದೊಮ್ಮೆ ಆದೇಶ ಮಾಡುವುದೇ ಆದರೆ ಅದಕ್ಕಿಂತ ಮೊದಲು ಸಂವಿಧಾನದ 342ನೇ ಕಲಂಗೆ ವರ್ಗೀಕರಣ ಅಧಿಕಾರವನ್ನು ಕೊಡುವ 432(3) ಅಂಶ ಪಾರ್ಲಿಮೆಂಟ್‌ನಲ್ಲಿ ಅಂಗೀಕಾರಗೊಳ್ಳಬೇಕಾಗುತ್ತದೆ. ಈ ಸಂಬಂಧ ನ್ಯಾ.ರೋಹಿಣಿ ಸಮಿತಿ ವರದಿ ಇನ್ನಷ್ಟೇ ಬರಬೇಕಾಗಿದೆ. ಸುಪ್ರೀಂ ಕೋರ್ಟ್ ತೀರ್ಮಾನ ತಕ್ಷಣಕ್ಕೆ ಜಾರಿಗೆ ಬರುವುದಿಲ್ಲ. ಸುಪ್ರೀಂ ಕೋರ್ಟ್ ತಾನೇ ಹೇಳಿದಂತೆ ರಾಜ್ಯ ಸರಕಾರಗಳು ಒಳಮೀಸಲಾತಿಯನ್ನು ನೀಡಬೇಕಾದರೆ ಅದು ಸುಪ್ರೀಂಕೋರ್ಟಿನ 9 ಜನರ ನ್ಯಾಯಪೀಠದಲ್ಲಿ ಅಂತಿಮ ತೀರ್ಮಾನವಾಗಬೇಕೆಂದು ತಿಳಿಸಿದೆ. ಕೋರ್ಟಿನ ಇತ್ತೀಚಿನ ಅಭಿಪ್ರಾಯ ದೇಶದ ಎಲ್ಲ ರಾಜ್ಯ ಸರಕಾರಗಳಂತೆ ಕರ್ನಾಟಕ ರಾಜ್ಯ ಸರಕಾರಕ್ಕೆ ಕೂಡಾ ಒಂದು ರೀತಿಯಲ್ಲಿ ಬಿಸಿತುಪ್ಪವಾಗಿ ಪರಿಣಮಿಸಿದೆ.

ಪರಿಶಿಷ್ಟ ಜಾತಿಯಲ್ಲಿ ಮೀಸಲಾತಿ ಮರು ವರ್ಗೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಮತ್ತು ಪರಿಶಿಷ್ಟರ ಮೀಸಲಾತಿ ಹೆಚ್ಚಿಸುವ ಸಂಬಂಧ ಸರಕಾರ ರಚಿಸಿದ್ದ ನ್ಯಾಯಮೂರ್ತಿ ನಾಗಮೋಹನ್‌ದಾಸ್ ವರದಿ ಬಹಳ ವರ್ಷಗಳಿಂದ ದೂಳು ಹಿಡಿಯುತ್ತಿತ್ತು. ಅದಕ್ಕೆ ಈಗ ಮರುಜೀವ ಬಂದಂತೆ ಕಾಣುತ್ತದೆ. ಅಷ್ಟೆ ಅಲ್ಲ ಈ ಮಧ್ಯೆ ಸಿದ್ದರಾಮಯ್ಯನವರು ರಚಿಸಿದ್ದ ಹಿಂದುಳಿದ ವರ್ಗಗಳ ಶೈಕ್ಷಣಿಕ ಸಾಮಾಜಿಕ ಆರ್ಥಿಕ ಸ್ಥಿತಿಗತಿ ಅಧ್ಯಯನ ಮತ್ತು ಬಹು ವಿವಾದಿತ ಜಾತಿ ಸರ್ವೇ ಎಲ್ಲದಕ್ಕೂ ಒಟ್ಟಿಗೆ ಜೀವ ಬಂದಂತೆ ಕಾಣುತ್ತದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಬರುವ ಎಡಗೈ, ಬಲಗೈ ಅಸ್ಪಶ್ಯ, ಸ್ಪಶ್ಯ ಮತ್ತು ಇನ್ನಿತರ ಜಾತಿಗೆ ಮೀಸಲಾತಿ ಹಂಚಿಕೆ ಕುರಿತು ಬಹಳ ವರ್ಷಗಳಿಂದ ರಾಜ್ಯದಲ್ಲಿ ಹೋರಾಟ ನಡೆಯುತ್ತಿದೆ.

ಇತ್ತೀಚಿನ ನ್ಯಾಯಮೂರ್ತಿ ಸದಾಶಿವ ಆಯೋಗದ ಶಿಫಾರಸಿನಂತೆ ಎಡಗೈ ಸಮುದಾಯಕ್ಕೆ ಶೇ.6, ಬಲಗೈ ಸಮುದಾಯಕ್ಕೆ ಶೇ. 5, ಸ್ಪಶ್ಯ ಸಮುದಾಯಕ್ಕೆ ಶೇ. 3 ಮತ್ತು ಇತರ ಸಮುದಾಯಗಳಿಗೆ ಶೇ. 1ರಂತೆ ಮೀಸಲಾತಿ ಕಲ್ಪಿಸುವ ಅಭಿಪ್ರಾಯ ಕೊಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.ಆದರೆ ಸದಾಶಿವ ಆಯೋಗದ ವರದಿ ಬಗ್ಗೆ ಕೆಲವು ಸಮುದಾಯಗಳಲ್ಲಿ ವಿವಿಧ ರೀತಿಯ ಅಭಿಪ್ರಾಯ ವ್ಯಕ್ತವಾಗಿವೆೆ. ಕೇಂದ್ರ ಸರಕಾರದ ಜಾತಿಗಣತಿಯ ಅಂಕಿಅಂಶಗಳಿಗೂ, ಸದಾಶಿವ ವರದಿಯ ಅಂಕಿಅಂಶಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಇದಕ್ಕೆ ಇನ್ನೊಂದು ಸರಿಯಾದ ಜನಗಣತಿಯೇ ಪರಿಹಾರ ಎನ್ನುವುದು ಇನ್ನೂ ಕೆಲವರ ವಾದ. ಕೆಲವರ ವಾದದ ಪ್ರಕಾರ ಒಳಮೀಸಲು ಹಂಚುವ ಅಧಿಕಾರ ರಾಜ್ಯಗಳಿಗೆ ನೀಡಿದರೆ ಅಲ್ಲಿ ರಾಜಕಾರಣವೇ ಅತಿಯಾಗಿ ವಿಜೃಂಭಿಸುತ್ತದೆೆ. ಬಹುಶಃ ಇದು ಮುಂದೆ ಇನ್ನಷ್ಟು ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು ಎನ್ನಲಾಗುತ್ತಿದೆ.

ಎಡಗೈ ಸಮುದಾಯವು ಪ್ರಸ್ತುತ ಮೀಸಲಾತಿ ಕುರಿತು ಉಂಟಾಗಿರುವ ಅನ್ಯಾಯದ ವಿರುದ್ಧ ಬಹಳಷ್ಟು ವಷರ್ಗಳಿಂದ ಹೋರಾಟ ಮಾಡಿಕೊಂಡು ಬಂದಿದೆ. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಸರಕಾರದ ಮುಂದೆ ಇದೆ. ಅದನ್ನು ಮಾನ್ಯ ಮಾಡುವುದು ಅಥವಾ ಬಿಡುವುದು ಸರಕಾರದ ವಿವೇಚನೆಗೆ ಬಿಟ್ಟಿರುವುದರಿಂದ ಮತ್ತು ಈ ವಿಚಾರದಲ್ಲಿ ಎಡಗೈ ಸಮುದಾಯದವರ ಒತ್ತಡ ಇದ್ದರೆ, ಬಲಗೈ ಸಮುದಾಯದ ವಿರೋಧ ಇರುವುದು ಸಮಸ್ಯೆಯನ್ನು ಮತ್ತಷ್ಟು ಕ್ಲಿಷ್ಟವಾಗಿಸಿದೆ. ಈ ಮಧ್ಯೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಜನಜಾತಿಗಣತಿ ವರದಿ ಸರಕಾರಕ್ಕೆ ಸಲ್ಲಿಕೆಯಾಗಿ ವರ್ಷಗಳೇ ಕಳೆದರೂ ಅದನ್ನು ಸ್ವೀಕರಿಸುವ ಸ್ಥಿತಿಯಲ್ಲಿ ಸರಕಾರವಿಲ್ಲ. ಏಕೆಂದರೆ ಈ ರೀತಿಗಣತಿ ಮಾಡಲು ಸಾಧ್ಯವಿಲ್ಲವೆಂದು ಈಗಾಗಲೇ ಕೆಲವರು ಕೋರ್ಟಿನ ಬಾಗಿಲನ್ನು ತಟ್ಟಿದ್ದಾರೆ. ಸದ್ಯ ವಿಚಾರ ಕೋರ್ಟ್‌ನಲ್ಲಿ ಇರುವುದರಿಂದ ಆಯೋಗದ ವರದಿಯನ್ನು ಸರಕಾರ ಸ್ವೀಕರಿಸುವುದು ಕಷ್ಟ್ಟ.

ಬಿಜೆಪಿ ಒಳಮೀಸಲಾತಿಯನ್ನು ವ್ಯಾಪಕವಾಗಿ ಸ್ವಾಗತಿಸುತ್ತದೆ ಹಾಗೂ ಅಧಿಕಾರಕ್ಕೆ ಬಂದರೆ ಈ ಕುರಿತು ಬೆಂಬಲಿಸುವುದಾಗಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಆದರೆ ಒಳಮೀಸಲಾತಿಗೆ ವ್ಯಾಪಕವಾದ ವಿರೋಧ ಕಂಡು ಬಂದಿರುವುದರಿಂದ ಈಗ ಬಿಜೆಪಿಯು ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ. ಒಳಮೀಸಲಾತಿ ಹೋರಾಟ ತೀವ್ರವಾಗಿ ಕಂಡು ಬಂದ ಸಮಯದಲ್ಲಿ ಸಿದ್ದರಾಮಯ್ಯರ ಸರಕಾರದ ಅವಧಿ ಮುಗಿದಿದ್ದರಿಂದ ಸಿದ್ದರಾಮಯ್ಯ ಈ ಹೋರಾಟದ ಬಿಸಿಯಿಂದ ತಪ್ಪಿಸಿಕೊಂಡಿದ್ದರು. ಈಗ ಇದನ್ನು ಬೆಂಬಲಿಸಬೇಕೇ ಅಥವಾ ವಿರೋಧಿಸಬೇಕೇ ಎಂಬುದು ಕಾಂಗ್ರೆಸ್‌ಗೆ ತಿಳಿಯುತ್ತಿಲ್ಲ. ಏಕೆಂದರೆ ಈಗಲೂ ಕಾಂಗ್ರೆಸ್‌ನ ಆಂತರಿಕ ವಲಯದಲ್ಲಿ ಸುಪ್ರೀಂಕೋರ್ಟ್ ತೀರ್ಪಿಗೆ ಪರ ಮತ್ತು ವಿರೋಧ ಹೇಳಿಕೆಗಳು ಬರುತ್ತಿವೆ. ಕೆಲವರ ಪ್ರಕಾರ ಸದಾಶಿವ ಆಯೋಗದ ವರದಿಯನ್ನು ಗೌಪ್ಯವಾಗಿಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡುತ್ತಿರುವ ಹಿಂದೆ ಹಲವಾರು ಅನುಮಾನಗಳು ಇವೆ ಎನ್ನಲಾಗುತ್ತಿದೆ. ಸುಮಾರು ನೂರಕ್ಕಿಂತಲೂ ಹೆಚ್ಚಿನ ಜಾತಿ ಹಣೆಬರಹ ನಿರ್ಧರಿಸುವ ಈ ವರದಿಯ ಕುರಿತು ವ್ಯಾಪಕ ಚರ್ಚೆ ಆಗದಿರುವುದು ನಿಜಕ್ಕೂ ದುರಂತಮಯ ವಿಚಾರ.

ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಇರುವ ಅನೇಕ ಸಣ್ಣ-ಪುಟ್ಟ ಜಾತಿಗಳಿಗೆ ಇದುವರೆಗೂ ಸಹ ಸರಿಯಾದ ಪ್ರಾಮುಖ್ಯತೆ ಸಿಕ್ಕಿಲ್ಲ. ಅದರಲ್ಲೂ ಮುಖ್ಯವಾಗಿ ಮಾದಿಗ ಸಮುದಾಯಕ್ಕೆ ಈ ವಿಚಾರದಲ್ಲಿ ಬಹಳಷ್ಟು ಅನ್ಯಾಯವಾಗಿದೆಯೆಂದು ಕಳೆದ ಹತ್ತು ವಷರ್ಗಳಿಂದ ಈ ಸಮುದಾಯ ಹೋರಾಡುತ್ತಿದೆ. ಇದು ಒಂದೆಡೆಯಾದರೆ ಇದೇ ರೀತಿ ಸಮಸ್ಯೆ ಇತರ ಹಿಂದುಳಿದ ವರ್ಗದ ಸಮುದಾಯದಲ್ಲಿ ಕೂಡಾ ಕಂಡುಬರುತ್ತಿದೆ. ಅಲ್ಲೂ ಸಹ ಕೇವಲ ಕೆಲವು ಬಲಿಷ್ಟ ಸಮುದಾಯಗಳು ಮಾತ್ರ ಮೀಸಲಾತಿ ಪ್ರಯೋಜನವನ್ನು ಪಡೆಯುತ್ತಿವೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಅಂದು ಸಿದ್ದರಾಮಯ್ಯನವರು ಜಾತಿವಾರು ಸಮೀಕ್ಷೆಗೆ ನಿರ್ಧಾರ ಮಾಡಿದಾಗ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಹಾಗೂ ಅಲೆಮಾರಿ ಜನಾಂಗದವರಿಗೆ ಈಗಲಾದರೂ ನ್ಯಾಯಸಿಗಬಹುದೇ ಎಂಬ ನಂಬಿಕೆ ಮೂಡಿತ್ತು. ಆದರೆ ಅತಿಯಾದ ರಾಜಕೀಯದಿಂದಾಗಿ ಮತ್ತು ಕೋರ್ಟ್‌ನ ವಿಚಾರದಿಂದಾಗಿ ಇಂದು ಅದೇ ವರದಿ ಮೂಲೆ ಸೇರಿದೆ. ತಾವೇ ರಚಿಸಿದ್ದ ಈ ಆಯೋಗದ ವರದಿಯನ್ನು ಸ್ವೀಕರಿಸಲು ಸಿದ್ದರಾಮಯ್ಯನವರೇ ಹಿಂದೇಟು ಹಾಕಿದ್ದು ನಿಜವಾಗಿಯೂ ಸೋಜಿಗವೇ ಸರಿ. ಆನಂತರ ಕಾಂಗ್ರೆಸ್ ಬೆಂಬಲ ಪಡೆದು ಅಧಿಕಾರಿಕ್ಕೆ ಬಂದ ಜೆಡಿಎಸ್ ಅವಧಿಯಲ್ಲಿ ಸಹ ಈ ವರದಿಯ ಬಗ್ಗೆ ಯಾರೂ ಮಾತನಾಡಲಿಲ್ಲ. ಹಾಗಾಗಿ ಈಗ ಅವಕಾಶ ಯಡಿಯೂರಪ್ಪನವರ ಪಾಲಿಗೆ ಬಂದಿದೆ. ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರಕಾರಗಳು ಅತ್ಯಂತ ತಳವರ್ಗದ ಅಭ್ಯರ್ಥಿಗಳನ್ನು ಇತ್ತೀಚೆಗೆ ವಿಧಾನಸಭೆ ಮತ್ತು ರಾಜ್ಯಸಭೆಗೆ ನೇಮಕ ಮಾಡಿರುವುದನ್ನು ಇಲ್ಲಿ ನೆನಪಿಟ್ಟುಕೊಳ್ಳಬೇಕು.

ಸುಪ್ರೀಂಕೋರ್ಟ್ ಹೇಳಿಕೆ ತೀರ ಗೊಂದಲಕಾರಿಯಾಗಿರುವುದರಿಂದ ಕೇಂದ್ರ ಸರಕಾರ ಮತ್ತೊಮ್ಮೆ ಸುಪ್ರೀಂಕೋರ್ಟ್ ಅಭಿಪ್ರಾಯವನ್ನು ಕೇಳಬಹುದು ಅಥವಾ ಸುಪ್ರೀಂಕೋರ್ಟ್ ಈ ಕುರಿತಾಗಿ ರಾಜ್ಯ ಸರಕಾರಗಳ ಅಭಿಪ್ರಾಯವನ್ನು ಕೇಳಬಹುದು. ಒಳಮೀಸಲಾತಿಯ ಇನ್ನೊಂದು ಸಾಮಾಜಿಕ-ಸಾಂಸ್ಕೃತಿಕ ಆಯಾಮವೆಂದರೆ ಇದು ಜಾತಿ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿ ಮಾಡುವ ಅಪಾಯವಿದೆ. ಎಡಗೈ, ಬಲಗೈ ಸೃಶ್ಯ-ಅಸ್ಪಶ್ಯ ಜಾತಿಗಳ ನಡುವೆಯೇ ಆಂತರಿಕವಾಗಿ ಕಚ್ಚಾಟಗಳು ಆರಂಭವಾದರೂ ಆಶ್ಚರ್ಯವಿಲ್ಲ. ಈ ರೀತಿ ಕಚ್ಚಾಟಗಳಿಂದ ಮೂರನೇ ವ್ಯಕ್ತಿಗಳು ಖಂಡಿತವಾಗಿಯೂ ಲಾಭ ಪಡೆದುಕೊಳ್ಳುತ್ತಾರೆ ಎನ್ನುವ ವಾದವಿದೆ.

ಈ ರೀತಿಯ ಒಳಮೀಸಲಾತಿಗಳು ಒಡೆದು ಆಳುವ ರಾಜಕೀಯ ನೀತಿಯ ಭಾಗವಾಗಿದ್ದರೆ ಇದರಿಂದ ಉಂಟಾಗುವ ಅನಾಹುತಗಳನ್ನು ಮುಂದೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅಸ್ಪಶ್ಯ ಜಾತಿಗಳಿಗೆ ಉಂಟಾಗಿರುವ ಅನ್ಯಾಯಕ್ಕೆ ಒಳಮೀಸಲಾತಿಯಲ್ಲಿ ಪರಿಹಾರವಿದೆ ಎಂಬುದನ್ನು ಸುಪ್ರೀಂಕೋರ್ಟ್ ಸಾರಸಗಟಾಗಿ ದೃಢೀಕರಿಸಿದೆ. ಅಷ್ಟೇ ಅಲ್ಲದೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದಲ್ಲಿ ಕೆನೆಪದರ ಪರಿಕಲ್ಪನೆಯ ಬಗ್ಗೆ ಇದು ಚರ್ಚೆ ಆರಂಭಿಸಲು ದಾರಿ ಮಾಡಿಕೊಟ್ಟಂತಾಗುತ್ತದೆ. ಒಳಮೀಸಲಾತಿ ಪರಿಕಲ್ಪನೆ ಅಂಬೇಡ್ಕರ್ ಆಶಯವನ್ನು ಪ್ರಶ್ನಿಸುತ್ತದೆಯೇ? ಬಲ್ಲವರು ಹೇಳಬೇಕು. ರಾಜ್ಯದ ಕೆಲವು ತಜ್ಞರ ಪ್ರಕಾರ ಮೀಸಲಾತಿಯ ಫಲ ಸರ್ವರಿಗೂ ಸಿಗಬೇಕು. ಆಶಯ ಈಡೇರದಿದ್ದಾಗ ನ್ಯಾಯಕ್ಕಾಗಿ ತಳಸಮುದಾಯ ಹೋರಾಟ ಮಾಡುವುದರಲ್ಲಿ ಯಾವ ತಪ್ಪುಕೂಡಾ ಇಲ್ಲ. ಮೀಸಲಾತಿ ಕೆಲವೇ ಕೆಲವು ಜನಗಳಿಗೆ ಮಾತ್ರ ಸೀಮಿತವಾಗುವುದರ ಕುರಿತು ಅಂಬೇಡ್ಕರ್ ಕೂಡಾ ಒಪ್ಪಿರಲಿಲ್ಲ. ಒಬ್ಬರು ಉಪವಾಸದಲ್ಲಿದ್ದು ಇನ್ನೊಬ್ಬರು ಬದುಕುವುದು ಮಾನವ ಹಕ್ಕಿಗೆ ವಿರುದ್ಧ ಎಂಬುದು ಅಂಬೇಡ್ಕರ್ ವಾದವಾಗಿತ್ತು.

Writer - ಡಾ.ಡಿ.ಸಿ.ನಂಜುಂಡ

contributor

Editor - ಡಾ.ಡಿ.ಸಿ.ನಂಜುಂಡ

contributor

Similar News