ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಅಧಿವೇಶನದಲ್ಲಿ ಚರ್ಚಿಸಲು ವಿಪಕ್ಷಗಳಿಗೆ ಮನವಿ

Update: 2020-09-19 18:09 GMT

ಬೆಂಗಳೂರು, ಸೆ.19: ಅಸಂವಿಧಾನಿಕವಾದ ಮತ್ತು ವಿದ್ಯಾರ್ಥಿ ವಿರೋಧಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ -2020 ವಿಧಾನ ಸಭೆಯ ಅಧಿವೇಶನದಲ್ಲಿ ಚರ್ಚೆ ಮಾಡಬೇಕು ಎಂದು ಆಗ್ರಹಿಸಿ ಶಿಕ್ಷಣ ಸಂರಕ್ಷಿಸಿ ಭಾರತ ಉಳಿಸಿ ಸಮಿತಿಯ ಪದಾಧಿಕಾರಿಗಳು ವಿರೋಧ ಪಕ್ಷದ ನಾಯಕರುಗಳಿಗೆ ಮನವಿ ಸಲ್ಲಿಸಿದ್ದಾರೆ.

ಶನಿವಾರ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ರಾಜ್ಯದಲ್ಲಿ ಎನ್‍ಇಪಿಯನ್ನು ತಿರಸ್ಕರಿಸಬೇಕೆಂದು ಒತ್ತಡ ಹೇರುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.

ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಪ್ರತಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಹೊರತುಪಡಿಸಿ ದೇಶದ ಯಾವ ಪ್ರಾದೇಶಿಕ ಭಾಷೆಯಲ್ಲೂ ಇಂದಿಗೂ ಸಿಗುತ್ತಿಲ್ಲ. ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿದೆ. ಇದು ರಾಜ್ಯ ಮತ್ತು ಕೇಂದ್ರಕ್ಕೆ ಸಂಬಂಧಿಸಿದ ವಿಷಯ. ಆದರೆ ಯಾವ ರಾಜ್ಯ ಸರಕಾರದ ಸಹಮತ ಪಡೆಯದೆ ಶಾಸನ ಸಭೆಯಲ್ಲಿ ಚರ್ಚೆ ಮಾಡಿ ಅಭಿಪ್ರಾಯ ಕ್ರೋಢೀಕರಣ ಮಾಡದೆ ಜಾರಿ ಮಾಡಲು ಹೊರಟಿರುವುದು ಅಪ್ರಜಾಸತ್ತಾತ್ಮಕ ನಡೆಯಾಗಿದೆ ಎಂಬ ಅಂಶವನ್ನು ಪತ್ರದಲ್ಲಿ ಉಲ್ಲೇಖಸಿದ್ದಾರೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ರಾಜ್ಯ ಸರಕಾರಗಳಿಗೆ ಇರುವ ಶಿಕ್ಷಣ ಕ್ಷೇತ್ರ ಅಧಿಕಾರ, ಹಕ್ಕುಗಳನ್ನು ಮೊಟಕುಗೊಳಿಸಿ ಶಿಕ್ಷಣವನ್ನು ನೀತಿ ನಿರೂಪಣೆಯ ಅಧಿಕಾರಿಗಳನ್ನು ಕೇಂದ್ರೀಕರಣಗೊಳಿಸುವ ಅಂಶಗಳನ್ನು ನಮ್ಮ ರಾಜ್ಯ ಸರಕಾರ ವಿರೋಧಿಸಬೇಕು. ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸರಕಾರಕ್ಕಿರುವ ಅಧಿಕಾರ, ಹಕ್ಕುಗಳನ್ನು ಕಾಯ್ದಿರಿಸಲು ಕೇಂದ್ರ ಸರಕಾರವನ್ನು ಆಗ್ರಹಿಸಿ ಒಕ್ಕೂಟ ವ್ಯವಸ್ಥೆಯ ಆಶಯಗಳ ಉಳಿಸಲು ಮುಂದಾಗಬೇಕು.

ಸರಕಾರವೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಸಂವಿಧಾನದ ಮಾನ್ಯತೆ ಪಡೆದ ಎಲ್ಲ ಭಾಷೆಗಳಿಗೆ ಅನುವಾದಿಸಿ ಅಧ್ಯಯನಕ್ಕೆ ಅವಕಾಶ ನೀಡಿ. ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು, ಅಂಗನವಾಡಿ, ಬಿಸಿಯೂಟ, ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲರೂ ಚರ್ಚಿಸಿ ತಿದ್ದುಪಡಿ ಸಲಹೆಗಳನ್ನು ನೀಡಲು ಅಗತ್ಯವಾದ ಕಾಲಾವಕಾಶ ನೀಡಬೇಕು.

ಕೇಂದ್ರ ಸರಕಾರದ ಸಚಿವ ಸಂಪುಟ ಅನುಮೋದಿತ ಹೊಸ ರಾಷ್ಟೀಯ ಶಿಕ್ಷಣ ನೀತಿಯ ಕುರಿತು ರಾಜ್ಯ ವಿಧಾನಸಭೆ, ವಿಧಾನ ಪರಿಷತ್ತಿನ ಉಭಯ ಸದನಗಳಲ್ಲಿ ಸಮಗ್ರ ಚರ್ಚೆ ನಡೆಸಬೇಕು. ಈ ಸದನದಲ್ಲಿ ಈ ಕುರಿತು ಜನಪ್ರತಿನಿಧಿಗಳು ಮಾತನಾಡಬೇಕು. ಮತ್ತು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಿರುವ ತ್ರಿಭಾಷಾ ಸೂತ್ರವನ್ನು ತಮಿಳುನಾಡು ರಾಜ್ಯ ಸರಕಾರದ ಮಾದರಿಯಲ್ಲಿ ರಾಜ್ಯ ಸರಕಾರ ವಿರೋಧಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಎಸ್‍ಎಫ್‍ಐನ ಅಧ್ಯಕ್ಷ ಅಮರೇಶ್ ಕಡಗದ, ಎಐಎಸ್‍ಎಫ್‍ನ ಅಧ್ಯಕ್ಷೆ ಕೆ.ಜ್ಯೋತಿ, ವಿಜೆಡಿಎಸ್‍ನ ಉಮೇಶ್‍ಗೌಡ, ಎನ್‍ಎಸ್‍ಯುಐನ ಮನೀಷ್ ರಾಜ್ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News