ಉಸಿರಾಟದ ಸಮಸ್ಯೆಗಳನ್ನು ನವಾರಿಸಬಲ್ಲ ನೀಲಗಿರಿ

Update: 2020-09-19 18:28 GMT

ನೀಲಗಿರಿ ತನ್ನ ವಿವಿಧ ಅಚ್ಚರಿದಾಯಕ ಪರಿಣಾಮಗಳಿಂದಾಗಿ ಉಸಿರಾಟದ ತೊಂದರೆಯನ್ನು ಎದುರಿಸುವಲ್ಲಿ ಹೆಚ್ಚಾಗಿ ಬಳಕೆಯಾಗುವ ಔಷಧೀಯ ಗುಣವುಳ್ಳ ಸಸ್ಯವಾಗಿದೆ. ತೀಕ್ಷ್ಣ ಪರಿಮಳವನ್ನು ಹೊಂದಿರುವ ಇದು ತನ್ನ ಉರಿಯೂತ ನಿರೋಧಕ, ಸೂಕ್ಷ್ಮಾಣುಜೀವಿ ನಿರೋಧಕ ಮತ್ತು ಕಫಹಾರಿ ಗುಣಗಳಿಂದಾಗಿ ಔಷಧಿಯಾಗಿ ಬಳಕೆಯಾಗುತ್ತಿದೆ. ಅಸ್ತಮಾ ಮತ್ತು ಫ್ಲೂದಂತಹ ಕಾಯಿಲೆಗಳಲ್ಲಿ ಜನರು ಸಾಮಾನ್ಯವಾಗಿ ನೀಲಗಿರಿ ಎಲೆಗಳನ್ನು ಔಷಧಿಯ ರೂಪದಲ್ಲಿ ಉಪಯೋಗಿಸುತ್ತಾರೆ. ಚಹಾ ಮತ್ತು ತೈಲಗಳ ರೂಪದಲ್ಲಿಯೂ ನೀಲಗಿರಿ ದೊರೆಯುತ್ತದೆ. ಆದರೆ ನೀಲಗಿರಿ ತೈಲವು ಕೆಲವು ಅಡ್ಡಪರಿಣಾಮಗಳನ್ನು ಹೊಂದಿರುವುದರಿಂದ ಅದನ್ನು ಎಚ್ಚರಿಕೆಯಿಂದ ಬಳಸಬೇಕು. ಉಸಿರಾಟದ ಸಮಸ್ಯೆಗಳನ್ನು ಶಮನಿಸಲು ನೀಲಗಿರಿ ಬಳಕೆಯ ಕುರಿತು ಮಾಹಿತಿ ಇಲ್ಲಿದೆ.....

* ನೀಲಗಿರಿ ಹನಿಗಳು

 ಉಸಿರಾಟದ ಸಮಸ್ಯೆಯಿಂದ ತಕ್ಷಣದ ಪರಿಹಾರಕ್ಕಾಗಿ ನೀಲಗಿರಿ ಹನಿಗಳ ಬಳಕೆ ಅತ್ಯುತ್ತಮ ಉಪಾಯವಾಗಿದೆ. ಮೂರು ಟೇಬಲ್‌ಸ್ಪೂನ್‌ಗಳಷ್ಟು ಸಣ್ಣಗೆ ಕತ್ತರಿಸಿದ ನೀಲಗಿರಿಯ ಎಲೆಗಳನ್ನು ಅರ್ಧ ಲೀಟರ್ ನೀರಿಗೆ ಬೆರೆಸಿ ಐದು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ಬಳಿಕ ಅದನ್ನು ಸ್ಟವ್‌ನಿಂದ ಕೆಳಗಿಳಿಸಿ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಬಾಟ್ಲಿಯೊಳಗೆ ತುಂಬಿ ಫ್ರಿಝ್‌ನಲ್ಲಿರಿಸಿದರೆ ಅಗತ್ಯವಿದ್ದಾಗ ಬಳಸಬಹುದು. ತೊಂದರೆಯನ್ನು ಶಮನಿಸಲು ಒಂದೆರಡು ಹನಿಗಳನ್ನು ಮೂಗಿನಲ್ಲಿ ಹಾಕಿಕೊಳ್ಳಬಹುದಾಗಿದೆ.

* ನೀಲಗಿರಿಯ ಪರಿಮಳವನ್ನು ಆಘ್ರಾಣಿಸಿ

ಇದು ನೀಲಗಿರಿಯನ್ನು ಬಳಸಿ ಅತ್ಯಂತ ಸಾಮಾನ್ಯ ಮನೆಮದ್ದಾಗಿದೆ. ದಿನಕ್ಕೆ ಎರಡು ಸಲ ನೀವು ನೀಲಗಿರಿಯನ್ನು ಆಘ್ರಾಣಿಸಬಹುದು. ಅದರ ತೀಕ್ಷ್ಣ ಪರಿಮಳವು ಶ್ವಾಸನಾಳವನ್ನು ಸುಗಮಗೊಳಿಸುತ್ತದೆ ಮತ್ತು ತಕ್ಷಣ ಪರಿಣಾಮವನ್ನು ಕಾಣಬಹುದು. ಎರಡು ಟೇಬಲ್‌ಸ್ಪೂನ್‌ಗಳಷ್ಟು ನೀಲಗಿರಿ ಎಲೆಗಳನ್ನು ಕತ್ತರಿಸಿ ಅರ್ಧ ಕಪ್ ಅಥವಾ 125 ಎಂಎಲ್ ನೀರಿನಲ್ಲಿ ಸೇರಿಸಿ ನೀರು ಕಂದುಬಣ್ಣಕ್ಕೆ ತಿರುಗುವವರೆಗೆ ಬಿಸಿ ಮಾಡಿ. ಬಳಿಕ ಅದನ್ನು ಮಧ್ಯಮ ಗಾತ್ರದ ಬೌಲ್‌ನಲ್ಲಿ ಹಾಕಿ. ಈಗ ಮುಖವನ್ನು ಈ ಬೌಲ್‌ನ ಸಮೀಪಕ್ಕೆ ತಂದು ಆವಿಯನ್ನು ಉಸಿರಾಡಿಸಿ. ಹೆಚ್ಚು ಆವಿ ನಿಮ್ಮ ಶ್ವಾಸಕೋಶಗಳನ್ನು ಸೇರುವಂತಾಗಲು ನೀವು ನಿಮ್ಮ ತಲೆಯನ್ನು ಟವೆಲ್‌ನಿಂದ ಮುಚ್ಚಿಕೊಳ್ಳಬಹುದು.

* ನೀಲಗಿರಿ ಸ್ನಾನ

   ನೀಲಗಿರಿ ಸ್ನಾನವು ಶ್ವಾಸನಾಳದಲ್ಲಿಯ ಅಡಚಣೆಗಳನ್ನು ನಿವಾರಿಸುತ್ತದೆ. ಶರೀರದಲ್ಲಿ ರಂಧ್ರಗಳು ಬಿಸಿನೀರಿನ ಆವಿಯನ್ನು ಹೀರಿಕೊಳ್ಳುತ್ತವೆ ಮತ್ತು ಲೋಳೆಯನ್ನು ಹೊರಹಾಕಲು ನೆರವಾಗುತ್ತವೆ. ಒಂದು ಲೀ.ನೀರಿನಲ್ಲಿ ಸುಮಾರು 100 ಗ್ರಾಮ್‌ಗಳಷ್ಟು ಒಣ ನೀಲಗಿರಿ ಎಲೆಗಳನ್ನು ಸೇರಿಸಿ ಕೆಲವು ನಿಮಿಷಗಳ ಕಾಲ ಕುದಿಸಿ. ಬಳಿಕ ಈ ನೀರನ್ನು ಒಂದು ಟಬ್‌ಗೆ ಹಾಕಿ ಅದು ಸ್ವಲ್ಪ ತಣ್ಣಗಾಗಲು ಬಿಡಿ. ಅದಕ್ಕೆ ಬಿಸಿನೀರನ್ನು ಸೇರಿಸಿ ಸ್ನಾನ ಮಾಡಿ.

* ನೀಲಗಿರಿ ಕಷಾಯ

 ಜನರು ಈ ಕಷಾಯವನ್ನು ನೇರವಾಗಿ ನೀಲಗಿರಿ ಎಲೆಗಳಿಂದ ತಯಾರಿಸುತ್ತಾರೆ. ಆದರೆ ಇದಕ್ಕೆ ಒಣ ಎಲೆಗಳನ್ನು ಬಳಸುವುದು ಉತ್ತಮವಾಗುತ್ತದೆ,ಏಕೆಂದರೆ ಇದರಿಂದ ನೀಲಗಿರಿಯ ಗುಣಗಳು ನೀರಿನಲ್ಲಿ ಸೂಕ್ತವಾಗಿ ಕರಗುತ್ತವೆ. ಒಂದು ಲೀ.ನೀರನ್ನು ಬಿಸಿ ಮಾಡಿ ಅದು ಕುದಿಯುತ್ತಿರುವಾಗ ಒಣ ನೀಲಗಿರಿ ಎಲೆಗಳನ್ನು ಸೇರಿಸಿ. ಈ ಎಲೆಗಳು ನೀರಿನಲ್ಲಿ ಕರಗಲು ಕೆಲವು ನಿಮಿಷಗಳ ಕಾಲ ಅವಕಾಶ ನೀಡಿ. ಬಳಿಕ ಅದನ್ನು ಸೋಸಿ ಸೇವಿಸಿ. ಈ ಕಷಾಯವನ್ನು ದಿನಕ್ಕೆ ನಾಲ್ಕು ಕಪ್‌ಗಿಂತ ಹೆಚ್ಚು ಸೇವಿಸಬಾರದು.

* ನೀಲಗಿರಿಯಿಂದ ಗಾರ್ಗಲಿಂಗ್

 ನೀಲಗಿರಿಯಿಂದ ಗಂಟಲನ್ನು ಗಲಬರಿಸಿದರೆ ಕಟ್ಟಿದ ಮೂಗು ತೆರೆಯುತ್ತದೆ ಮತ್ತು ಶೀತದಿಂದ ನೆಮ್ಮದಿ ದೊರೆಯುತ್ತದೆ. ಇದು ಗಂಟಲಿಗೆ ಯಾವುದೇ ಹಾನಿಯನ್ನು ಮಾಡುವುದಿಲ್ಲ ಮತ್ತು ಈ ಕೆಲಸವನ್ನು ಬೆಳಿಗ್ಗೆ ಮತ್ತು ರಾತ್ರಿ ಹೀಗೆ ಎರಡು ಸಲ ಮಾಡಿದರೆ ಸಾಕು. ಎರಡು ಟೇಬಲ್‌ಸ್ಪೂನ್‌ಗಳಷ್ಟು ನೀಲಗಿರಿ ಎಲೆಗಳನ್ನು 250 ಎಂ.ಎಲ್ ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ. ಬಳಿಕ ಸ್ಟವ್‌ನಿಂದ ಕೆಳಕ್ಕಿಳಿಸಿ ಅದರ ಉಷ್ಣತೆ ಕೋಣೆಯ ತಾಪಮಾನಕ್ಕೆ ಇಳಿಯಲು ಬಿಡಿ. ಈ ನೀರಿನಿಂದ 20 ನಿಮಿಷಗಳ ಕಾಲ ಗಾರ್ಗಲ್ ಮಾಡಿ.

ಉಸಿರಾಟದ ಸಮಸ್ಯೆಗಳಿದ್ದಾಗ ನೀವು ತಕ್ಷಣ ಚಿಕಿತ್ಸೆ ಪಡೆಯಬೇಕಾಗುತ್ತದೆ,ಆದ್ದರಿಂದ ಮೊದಲು ವೈದ್ಯರನ್ನು ಕಾಣುವುದು ಉತ್ತಮ. ಆದರೆ ಈ ನೈಸರ್ಗಿಕ ಔಷಧಿಯು ನಿಮ್ಮ ತೊಂದರೆಯನ್ನು ಕಡಿಮೆ ಮಾಡುವುದರಿಂದ ನೀಲಗಿರಿ ಮದ್ದು ಲಾಭಗಳನ್ನು ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News