ಬೆಂಗಳೂರು: ರೈತ, ದಲಿತ, ಕಾರ್ಮಿಕ ಸಂಘಟನೆಗಳಿಂದ ಸೆ.21ರಂದು ಪ್ರತಿಭಟನಾ ರ‍್ಯಾಲಿ

Update: 2020-09-20 16:57 GMT

ಬೆಂಗಳೂರು, ಸೆ. 20: ರಾಜ್ಯ ಸರಕಾರದ ರೈತ-ಕಾರ್ಮಿಕ ವಿರೋಧಿ ಸುಗ್ರಿವಾಜ್ಞೆಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ರಾಜ್ಯದ ರೈತ, ದಲಿತ, ಕಾರ್ಮಿಕ ಸಂಘಟನೆಗಳು ಹಾಗೂ ಪ್ರಗತಿಪರ-ಜನಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಸೆ.21ರಂದು ನಗರದ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾ ರ‍್ಯಾಲಿ ಹಾಗೂ ಚಳವಳಿಗಳ ಪರ್ಯಾಯ ಜನತಾ ಅಧಿವೇಶನ ಹಮ್ಮಿಕೊಳ್ಳಲಾಗಿದೆ.

ಪ್ರತಿಭಟನಾ ರ‍್ಯಾಲಿ ನಂತರ ಮಧ್ಯಾಹ್ನ 2ಕ್ಕೆ ನಗರದ ಫ್ರೀಡಂ ಪಾರ್ಕ್‍ನಲ್ಲಿ ರೈತ, ದಲಿತ ಹಾಗೂ ಕಾರ್ಮಿಕ ಐಕ್ಯ ಹೋರಾಟದ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಸ್ವರಾಜ್ ಇಂಡಿಯಾದ ಅಧ್ಯಕ್ಷ ಯೋಗೇಂದ್ರ ಯಾದವ್, ರೈತ ಹೋರಾಟದ ನೆಲ ಕಾಗೋಡಿನ ಮಣ್ಣನ್ನು ಯುವ ರೈತರಿಗೆ ಹಸ್ತಾಂತರಿಸುವ ಮೂಲಕ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.

ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ದೇವನೂರು ಮಹಾದೇವ, ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್, ಅಖಿಲ ಭಾರತ ಕಿಸಾನ್ ಸಂಘರ್ಷಸಮನ್ವಯ ಸಮಿತಿಯ ಡಾ.ಅಶೋಕ್ ದಾವಲೆ, ಹಿರಿಯ ಕಾರ್ಮಿಕ ಮುಖಂಡ ಮೈಕಲ್ ಬಿ.ಫರ್ನಾಂಡಿಸ್, ರಾಷ್ಟ್ರೀಯ ಕಿಸಾನ್ ಮಹಾಸಭಾದ ಶಿವಕುಮಾರ್ ಕಕ್ಕಾಚಿ, ಕೃಷಿ ನೀತಿ ವಿಮರ್ಶಕಿ ಕವಿತಾ ಕುರಗುಂಟಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಕುರುಬೂರು ಶಾಂತಕುಮಾರ್, ಕೃಷಿ ಆರ್ಥಿಕ ತಜ್ಞ ಪ್ರಕಾಶ್ ಕಮ್ಮರಡಿ ಭಾಗವಹಿಸಲಿದ್ದಾರೆ. ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿಶೇಷ ಆಹ್ವಾನಿತರಾಗಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

`ವಿಧಾನಸಭಾ ಅಧಿವೇಶನದಲ್ಲಿ ರೈತ ವಿರೋಧಿ ಸುಗ್ರಿವಾಜ್ಞೆಯನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆವತಿಯಿಂದ ಸೆ.21ರಿಂದ ನಗರದ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗ ಅಹೋರಾತ್ರಿ ಸತ್ಯಾಗ್ರಹ ಹಾಗೂ ನಾಳೆ(ಸೆ.21) ಬೆಳಗ್ಗೆ 11ಕ್ಕೆ ವಿಧಾನಸೌಧ ಮುತ್ತಿಗೆ ನಡೆಸಲು ಉದ್ದೇಶಿಸಲಾಗಿದೆ
-ಕೋಡಿಹಳ್ಳಿ ಚಂದ್ರಶೇಖರ್, ರೈತ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News