ಬೆಂಗಳೂರು: ರೈತ-ದಲಿತ-ಕಾರ್ಮಿಕರ ಬೃಹತ್ ಐಕ್ಯ ಹೋರಾಟ

Update: 2020-09-21 17:13 GMT

ಬೆಂಗಳೂರು, ಸೆ.21: ಭೂ ಸುಧಾರಣಾ ಕಾಯ್ದೆ (ತಿದ್ದುಪಡಿ) ಸೇರಿದಂತೆ ಇನ್ನಿತರ ಜನವಿರೋಧಿ ಕಾಯ್ದೆಗಳ ತಿದ್ದುಪಡಿ ಸುಗ್ರೀವಾಜ್ಞೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ರೈತ, ದಲಿತ ಹಾಗೂ ಕಾರ್ಮಿಕ ಸಂಘಟನೆಗಳು ಒಗ್ಗೂಡಿ ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸೋಮವಾರ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವನ ಮೈದಾನವರೆಗೂ 30ಕ್ಕೂ ಅಧಿಕ ಸಂಘಟನೆಗಳ ನೇತೃತ್ವದಲ್ಲಿ ಸಾವಿರಾರು ರೈತರು, ಕಾರ್ಮಿಕರು ಮೆರವಣಿಗೆಯಲ್ಲಿ ಹೆಜ್ಜೆಹಾಕಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.

ಅಧಿವೇಶನದಲ್ಲಿ ರೈತ, ಕಾರ್ಮಿಕ ವಿರೋಧಿ ನೀತಿಗಳಾದ ಭೂಸುಧಾರಣಾ ಕಾಯ್ದೆ (ತಿದ್ದುಪಡಿ), ಎಪಿಎಂಸಿ ಕಾಯ್ದೆ, ಕೈಗಾರಿಕೆ ಕಾಯ್ದೆ ತಿದ್ದುಪಡಿಗಳನ್ನು ವಾಪಸ್ ಪಡೆಯಬೇಕು. ಬೇಡಿಕೆಗಳಿಗೆ ಸರ್ಕಾರ ಮಣಿಯದಿದ್ದರೆ, ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಈ ತಿದ್ದುಪಡಿ ಮಸೂದೆಗಳಲ್ಲಿ ಅವುಗಳ ಮೂಲ ಆಶಯಗಳನ್ನೇ ಗಾಳಿಗೆ ತೂರಲಾಗಿದೆ. ಬಂಡವಾಳಶಾಹಿಗಳ ಪರವಾಗಿ ಮಸೂದೆಗಳನ್ನು ಜಾರಿ ಮಾಡಲಾಗಿದೆ. ಇದು ಸಾರ್ವಜನಿಕ ಸಂಸ್ಥೆಗಳನ್ನು ಎಲ್ಲೂ ಇಲ್ಲದಂತೆ ಮಾಡುವ ಷಡ್ಯಂತ್ರ. ಯಾವುದೇ ಕಾಯ್ದೆ ಜಾರಿಗೂ ಮುನ್ನ ಜನರ ಅಭಿಪ್ರಾಯ ಕೇಳಬೇಕು ಹಾಗೂ ಸಮಗ್ರ ಚರ್ಚೆಗೆ ಅವಕಾಶ ನೀಡಬೇಕು ಎಂದು ಪ್ರತಿಭಟನಾ ನಿರತ ರೈತ ಮುಖಂಡರು ಒತ್ತಾಯಿಸಿದರು.

ಸ್ವರಾಜ್ಯ ಇಂಡಿಯಾದ ವರಿಷ್ಠ ಯೋಗೇಂದ್ರ ಯಾದವ್ ಮಾತನಾಡಿ, ಯಾವುದೇ ಕಾಯ್ದೆ ಜಾರಿಗೂ ಮುನ್ನ ಜನರ ಅಭಿಪ್ರಾಯ ಕೇಳಬೇಕು ಹಾಗೂ ಸಮಗ್ರ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಸಂಚಾರ ದಟ್ಟಣೆ: ಪ್ರತಿಭಟನೆಯಿಂದ ನಗರದ ಆನಂದ್ ರಾವ್ ವೃತ್ತ, ಮೆಜೆಸ್ಟಿಕ್ ಸುತ್ತ ಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಸಾಲು ಸಾಲಾಗಿ ನಿಂತಿದ್ದ ದೃಶ್ಯ ಕಂಡಿತು.

ಬಿಗಿ ಬಂದೋಬಸ್ತ್: ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್  ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿನ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್‍ವರೆಗೆ  ಸುಮಾರು 500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಇಬ್ಬರು ಡಿಸಿಪಿ, 9 ಎಸಿಪಿ, 26 ಇನ್ಸ್ ಪೆಕ್ಟರ್, ಒಬ್ಬರು ಮಹಿಳಾ ಇನ್ಸ್‍ಪೆಕ್ಟರ್, 24 ಪಿಎಸ್‍ಐ, ಐವರು ಮಹಿಳಾ ಪಿಎಸ್‍ಐ, 31 ಎಎಸ್‍ಐ, 250 ಕಾನ್‍ಸ್ಟೆಬಲ್, 32 ಮಹಿಳಾ ಕಾನ್‍ಸ್ಟೆಬಲ್‍ಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

"ಮೋದಿ ಮಣ್ಣಿನ ಮಗನಲ್ಲ"
ಪ್ರಧಾನಿ ನರೇಂದ್ರ ಮೋದಿ ಅವರು ನಾನು ರೈತ, ರೈತನ ಮಗ ಎನ್ನುತ್ತಾರೆ. ಆದರೆ, ಅವರು ಮಣ್ಣಿನ ಮಗನಾಗಿದ್ದರೆ, ಈ ರೀತಿಯ ಮಸೂದೆ ಅನ್ನು ಜಾರಿಗೊಳಿಸುತ್ತಿರಲಿಲ್ಲ. ಅಲ್ಲದೆ, ಕೊರೋನ ಸಂದರ್ಭದಲ್ಲಿ ಈ ತಿದ್ದುಪಡಿ ಬೇಕಿತ್ತಾ? ಇದು ರೈತರಿಗೆ ವಿರುದ್ಧವಾದ ಕೆಲಸ.
-ಕೋಡಿಹಳ್ಳಿ ಚಂದ್ರಶೇಖರ್, ರೈತ ಮುಖಂಡ 

ಕುಸಿದು ಬಿದ್ದ ರೈತ
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನಂಜನಗೂಡು ಮೂಲದ ಕಬ್ಬು ಬೆಳೆಗಾರ ಹಾಡ್ಯಾ ರವಿ ಎಂಬುವರು ಏಕಾಏಕಿ ಕುಸಿದು ಬಿದ್ದ ಘಟನೆ ನಡೆಯಿತು. ತದನಂತರ, ರೈತ ಮುಖಂಡರು ರವಿ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿದರು.

ರೈತರ ಅರೆ ಬೆತ್ತಲೆ ಪ್ರತಿಭಟನೆ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಕೆಲ ರೈತರು ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿ, ಸರಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News