ಕೊರೋನ ಕಾರ್ಮೋಡದ ನಡುವೆ ವಿಧಾನಮಂಡಲದ ಅಧಿವೇಶನ ಆರಂಭ

Update: 2020-09-21 14:25 GMT

ಬೆಂಗಳೂರು, ಸೆ.21: ಕೊರೋನ ಕಾರ್ಮೋಡದ ನಡುವೆಯೂ ಮಾರ್ಚ್ ನಂತರ ಇಂದಿನಿಂದ ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭಗೊಂಡಿದೆ. ಉದ್ದೇಶಿತ ಎಂಟು ದಿನಗಳ ಕಲಾಪವನ್ನು ಆರು ದಿನಗಳಿಗೆ ಮೊಟಕುಗೊಳಿಸಲು ಸರಕಾರ ತೀರ್ಮಾನಿಸಿದೆ.

ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ಭೈರತಿ ಬಸವರಾಜ, ಕೆ.ಗೋಪಾಲಯ್ಯ, ಶಶಿಕಲಾ ಜೊಲ್ಲೆ, ಪ್ರಭು ಚೌವಾಣ್ ಸೇರಿದಂತೆ 60ಕ್ಕೂ ಹೆಚ್ಚು ಶಾಸಕರು ಕೋವಿಡ್ ಸೋಂಕಿನಿಂದಾಗಿ ಅಧಿವೇಶನಕ್ಕೆ ಗೈರು ಹಾಜರಾಗಿದ್ದಾರೆ. ಸಂಸತ್ತಿನಲ್ಲೂ ಹಲವಾರು ಮಂದಿ ಸಂಸದರಿಗೆ ಕೊರೋನ ಸೋಂಕು ದೃಢಪಟ್ಟಿರುವುದರಿಂದ ಸಂಸತ್ ಅಧಿವೇಶನವನ್ನು ಮೊಟಕುಗೊಳಿಸಲು ನಿರ್ಧರಿಸಿರುವುದರಿಂದ, ರಾಜ್ಯದಲ್ಲಿಯೂ ಅದೇ ಮಾದರಿಯನ್ನು ಅನುಸರಿಸಲು ನಿರ್ಧರಿಸಲಾಗಿದೆ.

ವಿಧಾನಸಭೆ ಸಮಾವೇಶಗೊಂಡು ಬಳಿಕ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ನಡೆದ ಸದನ ಕಾರ್ಯಕಲಾಪ ಸಲಹಾ ಸಮಿತಿಯಲ್ಲಿ ಅಧಿವೇಶನವನ್ನು ಮೂರು ದಿನಗಳಿಗೆ ಮೊಟಕುಗೊಳಿಸುವ ಪ್ರಸ್ತಾವನೆಯನ್ನು ಸರಕಾರ ಮುಂದಿಟ್ಟಿತ್ತು. ಇದಕ್ಕೆ ವಿರೋಧ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಎಪಿಎಂಸಿ, ಭೂ ಸುಧಾರಣೆ ಕಾಯ್ದೆಯ ಸುಗ್ರೀವಾಜ್ಞೆ ಸೇರಿದಂತೆ ಅನೇಕ ವಿಧೇಯಕಗಳ ಬಗ್ಗೆ ಚರ್ಚೆ ನಡೆಸಬೇಕು. ಆದುದರಿಂದ, ಸರಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಕನಿಷ್ಠ 6 ದಿನಗಳಾದರೂ ಅಧಿವೇಶನವನ್ನು ನಡೆಸಬೇಕು ಎಂದು ವಿರೋಧ ಪಕ್ಷದ ಸದಸ್ಯರು ಪಟ್ಟು ಹಿಡಿದರು. ಒಂದು ವೇಳೆ ಸರಕಾರ ಮೂರು ದಿನಗಳಿಗೆ ಅಧಿವೇಶನ ಮೊಟಕುಗೊಳಿಸುವುದಾದರೆ ಈ ಅವಧಿಯಲ್ಲಿ ಯಾವ ಹೊಸ ವಿಧೇಯಕಗಳನ್ನು ಸದನದಲ್ಲಿ ಮಂಡಿಸಬಾರದು ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು. ಅಂತಿಮವಾಗಿ ಅಧಿವೇಶನವನ್ನು ಶನಿವಾರದವರೆಗೆ(ಆರು ದಿನ) ನಡೆಸಲು ಸರಕಾರ ಸಹಮತ ವ್ಯಕ್ತಪಡಿಸಿತು.

ಸದನ ಕಾರ್ಯಕಲಾಪ ಸಲಹಾ ಸಮಿತಿ ಸಭೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಆಡಳಿತ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರಾದ ವಿ.ಸುನೀಲ್ ಕುಮಾರ್ ಮತ್ತು ಡಾ.ಅಜಯ್ ಸಿಂಗ್ ಭಾಗವಹಿಸಿದ್ದರು.

ಕೊರೋನ ಕಾರ್ಮೋಡ: ಕೋವಿಡ್ ಮಹಾಮಾರಿಯ ನಡುವೆ ಆರಂಭವಾದ ವಿಧಾನಮಂಡಲದ ಅಧಿವೇಶನವು ವಿಭಿನ್ನವಾಗಿತ್ತು. ಶಾಸಕರ ನಡುವೆ ಸುರಕ್ಷಿತ ಅಂತರವನ್ನು ಕಾಪಾಡಲು ಆಸನಗಳ ನಡುವೆ ಗಾಜಿನ ಫಲಕವನ್ನು ಅಳವಡಿಸಲಾಗಿತ್ತು. ಎಲ್ಲ ಶಾಸಕರಿಗೆ ಮುಖಗವಸುಗಳನ್ನು ವಿತರಿಸಲಾಯಿತು.
ಸಾರ್ವಜನಿಕರಿಗೆ ಈ ಅಧಿವೇಶನ ವೀಕ್ಷಿಸಲು ಅವಕಾಶವಿರಲಿಲ್ಲ. ಸಭಾಧ್ಯಕ್ಷರ ಗ್ಯಾಲರಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ವಿಧಾನಸಭೆ ಆವರಣ ಪ್ರವೇಶಿಸುವ ಪ್ರತಿಯೊಬ್ಬ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು, ಮಾಧ್ಯಮ ಪ್ರತಿನಿಧಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಸ್ಯಾನಿಟೈಸರ್ ಹಾಕಲಾಗುತ್ತಿತ್ತು. ವಿಧಾನಸಭೆಯ ಹೊರಗೆ ಇದ್ದ ಮೊಗಸಾಲೆಯನ್ನು ಮುಚ್ಚಿ, ಸದಸ್ಯರಿಗೆ ಹೊರಭಾಗದಲ್ಲಿ ವಿಶ್ರಾಂತಿಗಾಗಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News