'ಸೋಂಕಿತ ಸರಕಾರ': ಬೆಂಗಳೂರು ನಗರದ ಬೀದಿಗಳಲ್ಲಿ ರಾರಾಜಿಸುತ್ತಿರುವ ಅನಾಮಿಕ ಪೋಸ್ಟರ್ ಗಳು!

Update: 2020-09-21 15:00 GMT

ಬೆಂಗಳೂರು, ಸೆ. 21: ರಾಜ್ಯದಲ್ಲಿ ಮಾರಕ ಕೊರೋನ ವೈರಸ್ ಸೋಂಕಿತ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೆ, ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆಯೂ ಏರುತ್ತಿದೆ. ಈ ಮಧ್ಯೆ ಬೆಂಗಳೂರು ನಗರದ ಹಲವು ಕಡೆಗಳಲ್ಲಿ `ಸೋಂಕಿತ ಸರಕಾರ' ಎಂಬ ಭಿತ್ತಿಪತ್ರಗಳನ್ನು ರಾತ್ರೋರಾತ್ರಿ ಅಂಟಿಸಲಾಗಿದೆ.

`ಹಣದಿಂದ, ಹಣಕ್ಕಾಗಿ, ಹಣಕ್ಕೋಸ್ಕರ ಅಧಿಕಾರಕ್ಕೆ ಬಂದ ಸೋಂಕಿನ ಸರಕಾರ' ಎಂದು ಭಿತ್ತಿಪತ್ರಗಳು ಎಲ್ಲೆಡೆ ರಾರಾಜಿಸುತ್ತಿವೆ. ನಗರದ ಮೇಕ್ರಿ ವೃತ್ತ, ಪ್ಯಾಲೆಸ್ ರಸ್ತೆ, ಆರ್.ಟಿ.ನಗರದ ಟಿ.ವಿ.ಟವರ್ ರಸ್ತೆ, ಶಂಕರಮಠ, ಕಾಮಾಕ್ಷಿಪಾಳ್ಯ ಸೇರಿದಂತೆ ನಗರದ ವಿವಿಧೆಡೆಗಳಲ್ಲಿ ಸಾವಿರಾರು ಪೋಸ್ಟರ್‍ಗಳನ್ನು ಹಾಕಲಾಗಿದೆ.

ಕೊರೋನ ಸೋಂಕಿನ ಸಂಕಷ್ಟದಲ್ಲಿಯೂ ಹಣ ಲೂಟಿ ಮಾಡಲು ನಿಂತಿರುವ ಸೋಂಕಿನ ಸರಕಾರ ಎಂಬ ಭಿತ್ತಿಪತ್ರಗಳನ್ನು ಅನಾಮಿಕರು ನಿನ್ನೆ ರಾತ್ರಿ ಅಂಟಿಸಿರುವುದು ಪತ್ತೆಯಾಗಿದೆ. ಸರಕಾರದ ವಿರುದ್ಧ ಭಿತ್ತಿಪತ್ರ ಅಂಟಿಸಿದರು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಬಿಜೆಪಿ ಸರಕಾರ ಕೊರೋನ ಸೋಂಕಿನ ನಿಯಂತ್ರಣದ ಹೆಸರಿನಲ್ಲಿ 2ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಹಣವನ್ನು ಲೂಟಿ ಮಾಡಿದೆ ಎಂದು ಭಿತ್ತಿಪತ್ರದಲ್ಲಿ ಬರೆಯಲಾಗಿದೆ. ನಗರದೆಲ್ಲೆಡೆ ರಾರಾಜಿಸುತ್ತಿರುವ ಈ ಭಿತ್ತಿಪತ್ರಗಳು ರಾಜ್ಯ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ಭಿತ್ತಿಪತ್ರ ಅಂಟಿಸಿರುವವರನ್ನು ಪತ್ತೆಹಚ್ಚುವಂತೆ ರಾಜ್ಯ ಸರಕಾರ ಬಿಬಿಎಂಪಿ ಮತ್ತು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News