ಪ್ರತಿಭಟನೆ ಮಾಡುತ್ತಿರುವುದು ರೈತರಲ್ಲ ಮಧ್ಯವರ್ತಿಗಳು ಎಂದ ಪ್ರಧಾನಿ ಹೇಳಿಕೆ ನಾಚಿಕೆಗೇಡು: ಯೋಗೇಂದ್ರ ಯಾದವ್

Update: 2020-09-21 16:06 GMT

ಬೆಂಗಳೂರು, ಸೆ.21: ಭೂ ಸುಧಾರಣಾ ತಿದ್ದುಪಡಿ ವಿಧೇಯಕ ಸೇರಿ ಕೇಂದ್ರ ಸರಕಾರದ ರೈತ ಹಾಗೂ ಕಾರ್ಮಿಕ ವಿರೋಧಿ ಧೋರಣೆಯನ್ನು ಖಂಡಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ಕರೆ ನೀಡಿರುವ ಸೆ.25 ರಂದು ಭಾರತ್ ಬಂದ್‍ಗೆ ಶಕ್ತಿ ತುಂಬಬೇಕಿದೆ ಎಂದು ಸ್ವರಾಜ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್ ತಿಳಿಸಿದರು.

ಸೋಮವಾರ ನಗರದ ಸ್ವಾತಂತ್ರ್ಯ ಉದ್ಯಾನವನ ಮೈದಾನದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆದ ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾಯ್ದೆಗಳಿಗೆ ಸುಗ್ರೀವಾಜ್ಞೆ ತರುವ ಮೂಲಕ ರೈತರಿಗೆ ಉಡುಗೊರೆ ಕೊಟ್ಟಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ನಿಜವಾಗಿಯೂ ಅವರು ಉಡುಗೊರೆ ಕೊಟ್ಟಿದ್ದರೆ, ಅಧಿವೇಶನದಲ್ಲಿ ಏಕೆ ಚರ್ಚೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ರೈತರ ಹೆಸರಿನಲ್ಲಿ ದೊಡ್ಡ ದೊಡ್ಡ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅನೇಕ ಕಾಯ್ದೆಗಳಿಗೆ ತಿದ್ದುಪಡಿ ತಂದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಸುಗ್ರೀವಾಜ್ಞೆ ಹೊರಡಿಸಿದೆ ಎಂದ ಅವರು, ನರೇಂದ್ರ ಮೋದಿ ಅವರು ಪ್ರತಿಭಟನೆ ಮಾಡುತ್ತಿರುವುದು ರೈತರಲ್ಲ. ಮಧ್ಯವರ್ತಿಗಳು ಎಂದು ಹೇಳಿರುವುದು ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದರು.

ಭಾರತೀಯ ಕಿಸಾನ್ ಸಂಘಟನೆಯೇ ಮಸೂದೆಗಳನ್ನು ವಿರೋಧಿಸಿದೆ. ಅಷ್ಟೇ ಅಲ್ಲದೆ, ಪಂಜಾಬ್, ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ರೈತರ ಪ್ರತಿಭಟನೆಗಳು ತೀವ್ರವಾಗಿದ್ದು, ಇದೇ ತಿಂಗಳ 25ರಂದು ಭಾರತ್ ಬಂದ್‍ಗೆ ಕರೆ ನೀಡಲಾಗಿದೆ. ಹೀಗಾಗಿ, ಈ ಹೋರಾಟವೂ ಐತಿಹಾಸಿಕ ಪುಟಗಳು ಸೇರುವಂತೆ, ಸರಕಾರಕ್ಕೆ ಪಾಠ ಕಲಿಸುವಂತೆ ಧ್ವನಿಗೂಡಿಸಬೇಕೆಂದು ಅವರು ಹೇಳಿದರು.

ಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಹಿನ್ನೆಲೆಯಲ್ಲಿ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಮಾರುಕಟ್ಟೆ ವ್ಯವಸ್ಥೆಯೆ ಕುಸಿದು ಬೀಳಲಿದೆ. ರೈತ ಮತ್ತು ಕಾರ್ಮಿಕರ ಪರವಾಗಿದ್ದ ಕಾನೂನುಗಳನ್ನು ಅದಾನಿ ಅಂತವರಿಗೆ ಅನುಕೂಲ ಮಾಡಿಕೊಡಲು ಸರಕಾರ  ಮುಂದಾಗಿದೆ ಎಂದು ದೂರಿದರು.

ಈಗಾಗಲೇ ಕೇಂದ್ರ ಸರಕಾರದ ಧೋರಣೆ ಬಗ್ಗೆ ಎನ್‍ಡಿಎ ಸರಕಾರದ ಮೈತ್ರಿ ಪಕ್ಷಗಳೆ ವಿರೋಧ ವ್ಯಕ್ತಪಡಿಸಿವೆ. ಇಂತಹ ಕಾಯ್ದೆಗಳಿಂದ ಉಂಟಾಗುವ ತೊಂದರೆಗಳ ಬಗ್ಗೆ ತಳಮಟ್ಟದ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕು.ಇಲ್ಲದಿದ್ದರೆ, ಭವಿಷ್ಯದಲ್ಲಿ ರೈತರೇ ಇಲ್ಲದಂತೆ ಆಗಲಿದ್ದಾರೆ ಎಂದು ಯೋಗೇಂದ್ರ ಯಾದವ್ ಆತಂಕ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್, ರೈತ ಮುಖಂಡರಾದ ಕುರುಬೂರು ಶಾಂತಕುಮಾರ್, ಬಡಗಲಪುರ ನಾಗೇಂದ್ರ, ಕೋಡಿಹಳ್ಳಿ ಚಂದ್ರಶೇಖರ್, ದಲಿತ ಪರ ಹೋರಾಟಗಾರ ಲಕ್ಷ್ಮೀನಾರಾಯಣ ನಾಗವಾರ, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಸುಗ್ರೀವಾಜ್ಞೆ ಸರಕಾರ ಜಾರಿಯಲ್ಲಿದೆ. ಕೇಂದ್ರ ಸರಕಾರ ಯಾವುದೇ ರೀತಿಯಲ್ಲಿ ಚರ್ಚೆ ನಡೆಸದೆ ಸುಗ್ರೀವಾಜ್ಞೆಗಳನ್ನು ಜಾರಿಗೆ ತರುತ್ತಿದ್ದು ಇದರು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರೋಧಿಯಾಗಿದೆ.
-ಎಚ್.ಎಸ್.ದೊರೆಸ್ವಾಮಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ

"ರೈತರು ಬುದ್ದಿ ಕಲಿಸುತ್ತಾರೆ"
ಈಗಿನ ಸರಕಾರ ಸುಗ್ರಿವಾಜ್ಞೆ ಮೂಲಕ ಕಾನೂನು, ಮಸೂದೆಗಳನ್ನು ಜಾರಿಗೊಳಿಸಬಾರದು. ಒಂದು ವೇಳೆ ಜನರ ವಿರೋಧ ಕಟ್ಟಿಕೊಂಡರೆ, ರೈತರು ಬುದ್ದಿ ಕಲಿಸುತ್ತಾರೆ ಎಂದು ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ತಿಳಿಸಿದರು.

ಅಹೋರಾತ್ರಿ ಧರಣಿ
ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಹಮ್ಮಿಕೊಂಡಿರುವ ರೈತರ ಹೋರಾಟದ ನೇತೃತ್ವ ವಹಿಸಿರುವ ಕೋಡಿಹಳ್ಳಿ ಚಂದ್ರಶೇಖರ್ ಭೂ ಸುಧಾರಣಾ ತಿದ್ದುಪಡಿ ವಿಧೇಯಕ ವಿರೋಧಿಸಿ ಸೆ.26 ವರೆಗೆ ಅಹೋರಾತ್ರಿ ಧರಣಿ ನಡೆಸುವುದಾಗಿ ಹೇಳಿದರು. ಕೇಂದ್ರ ಮತ್ತು ರಾಜ್ಯ ಸರಕಾರ ರೈತ ವಿರೋಧಿ ಧೋರಣೆಯಲ್ಲಿ ನಿರತವಾಗಿದ್ದು ಭೂಸುಧಾರಣ ಕಾಯ್ದೆ ಹಿಂಪಡೆಯುವ ವರೆಗೂ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News