ಆರ್‍ಟಿಇ ನಿಯಮ ತಿದ್ದುಪಡಿ ವಿಚಾರ: ಸುಪ್ರೀಂಕೋರ್ಟ್‍ನಲ್ಲಿ ಮಂಗಳವಾರ ಅರ್ಜಿ ವಿಚಾರಣೆ

Update: 2020-09-21 17:28 GMT

ಬೆಂಗಳೂರು, ಸೆ.21: ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಆರ್‍ಟಿಇ ನಿಯಮ-4ಕ್ಕೆ 2019ರಲ್ಲಿ ತಂದಿದ್ದ ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ವಿಶೇಷ ಮೇಲ್ಮನವಿ ಅರ್ಜಿ ವಿಚಾರಣೆ ಮಂಗಳವಾರ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆ ನಡೆಯಲಿದೆ. 

ಮಕ್ಕಳು ವಾಸಿಸುವ ಪ್ರದೇಶಗಳ ವ್ಯಾಪ್ತಿಯಲ್ಲಿ ಸರಕಾರಿ ಹಾಗೂ ಅನುದಾನಿತ ಶಾಲೆಗಳು ಇದ್ದರೆ ಅನುದಾನ ರಹಿತ(ಖಾಸಗಿ) ಶಾಲೆಗಳನ್ನು ಆರ್‍ಟಿಇ ವ್ಯಾಪ್ತಿಗೆ ಗುರುತಿಸಬಾರದು ಎಂದು ನಿಯಮ 4ಕ್ಕೆ ತಂದಿದ್ದ ತಿದ್ದುಪಡಿಯನ್ನು ಪ್ರಶ್ನಿಸಿ ಆರ್‍ಟಿಇ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್.ಯೋಗಾನಂದ ಮತ್ತು ಇತರರು ಬೆಂಗಳೂರು ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. 

ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಎಚ್‍ಡಿಕೆ ನೇತೃತ್ವದ ಮೈತ್ರಿ ಸರಕಾರ ನಿಯಮ 4ಕ್ಕೆ ತಂದಿದ್ದ ತಿದ್ದುಪಡಿಯನ್ನು ಎತ್ತಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿತ್ತು. 

ಈ ಕುರಿತು ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ವಿಸ್ತೃ ತ ವರದಿ ನೀಡುವಂತೆ ಕರ್ನಾಟಕ ಸರಕಾರ ಹಾಗೂ ಅರ್ಜಿದಾರರಿಗೆ ಸೂಚನೆ ನೀಡಿತ್ತು. 
ಮಂಗಳವಾರ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದಲ್ಲಿ ತ್ರಿಸದಸ್ಯಪೀಠದ ಮುಂದೆ ವಿಚಾರಣೆ ನಡೆಯಲಿದೆ. ಅರ್ಜಿದಾರರ ಪರ ಸುಪ್ರೀಂಕೋರ್ಟ್‍ನಲ್ಲಿ ಹಿರಿಯ ವಕೀಲೆ ಮೀನಾಕ್ಷಿ ಅರೋರಾ ವಾದ ಮಂಡಿಸಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News