ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣ: 12 ವರ್ಷದ ಬಳಿಕ ಆರೋಪಿ ಸೆರೆ

Update: 2020-09-21 17:31 GMT

ಬೆಂಗಳೂರು, ಸೆ.21: ರಾಜಧಾನಿ ಬೆಂಗಳೂರಿನಲ್ಲಿ 2008ರಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ 12 ವರ್ಷದ ಬಳಿ ಆರೋಪಿಯೊರ್ವನನ್ನು ಬೆಂಗಳೂರು ಭಯೋತ್ಪಾದನ ನಿಗ್ರಹ ದಳ (ಎಟಿಸಿ) ತಂಡ ಕೇರಳದಲ್ಲಿ ಬಂಧಿಸಿದೆ. 

ಶೋಯೆಬ್ ಎಂಬಾತ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಬೆಂಗಳೂರಿನಿಂದ ಎರಡು ಪೊಲೀಸರ ತಂಡ ಈತನನ್ನು ಕರೆತರಲು ಕೇರಳಕ್ಕೆ ತೆರಳಿದೆ ಎಂದು ಮೂಲಗಳು ತಿಳಿಸಿವೆ.

2008ರಲ್ಲಿ ಸರಣಿ ಸ್ಫೋಟ ಘಟನೆ ಬಳಿಕ ಶೋಯೆಬ್ ತಲೆಮರೆಸಿಕೊಂಡಿದ್ದ. ತದನಂತರ, ವಿದೇಶಕ್ಕೆ ಪರಾರಿಯಾಗದಂತೆ ಈತನ ವಿರುದ್ಧ ರೆಡ್‍ಕಾರ್ನರ್ ನೋಟಿಸ್ ಕೂಡ ಹೊರಡಿಸಲಾಗಿತ್ತು. ಈ ಬಗ್ಗೆ ಸತತ ಕಾರ್ಯಾಚರಣೆ ನಡೆಸಿದ ತನಿಖಾಧಿಕಾರಿಗಳು ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

2008ರ ಜುಲೈ 25ರಂದು ಬೆಂಗಳೂರಿನ 9 ಸ್ಥಳಗಳಲ್ಲಿ ಒಂದೇ ದಿನ ಬಾಂಬ್ ಸ್ಫೋಟಿಸಿದ್ದರು. ಪರಿಣಾಮ ಒಬ್ಬರು ಮೃತಪಟ್ಟು, 20 ಜನ ಗಾಯಗೊಂಡಿದ್ದರು. ಈ ಸಂಬಂಧ  ಆರೋಪಿಗಳ ಪತ್ತೆ ಕಾರ್ಯ ಚಾಲ್ತಿಯಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News