ಸರಕಾರದಿಂದ ಕೊರೋನ ಉಪಕರಣ ಖರೀದಿಯಲ್ಲಿ 2 ಸಾವಿರ ಕೋಟಿ ರೂ. ಭ್ರಷ್ಟಾಚಾರ: ಎಂ.ನಾರಾಯಣಸ್ವಾಮಿ ಆರೋಪ

Update: 2020-09-22 16:24 GMT

ಬೆಂಗಳೂರು, ಸೆ.22: ಕೊರೋನ ಉಪಕರಣ ಖರೀದಿಯಲ್ಲಿ ನಾಲ್ಕು ಸಾವಿರ ಕೋಟಿ ರೂ.ಖರ್ಚು ಮಾಡಿದ್ದೇವೆ ಎಂದು ಹೇಳಿಕೆ ನೀಡುವ ರಾಜ್ಯ ಸರಕಾರ ಅದರಲ್ಲಿ ಎರಡು ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆಸಿದೆ ಎಂದು ಕಾಂಗ್ರೆಸ್ ಪಕ್ಷದ ಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ವಿಧಾನ ಪರಿಷತ್‍ನ ಅಧಿವೇಶನದಲ್ಲಿ ಅರ್ಧ ಗಂಟೆ ಕಾಲಾವಧಿ ಚರ್ಚೆ ಅಡಿಯಲ್ಲಿ ನಡೆದ ಕೊರೋನ ಸಂಬಂಧವಾಗಿ ಖರೀದಿಸಲಾದ ವಿವಿಧ ಸಾಮಗ್ರಿಗಳ ಕುರಿತು ಅವರು ಮಾತನಾಡಿದರು.

ಕೊರೋನ ತಡೆಗಟ್ಟಲು ವೆಂಟಿಲೇಟರ್ ಸೇರಿದಂತೆ ಇನ್ನಿತರ ವೈದ್ಯಕೀಯ ಸಾಮಗ್ರಿಗಳನ್ನು ಖರಿದಿಸಿದ್ದೇವೆ ಎಂದು ಹೇಳುವ ಸರಕಾರ ಕೊರೋನವನ್ನು ಶೇ.1ರಷ್ಟು ಕೂಡ ತಡೆಗಟ್ಟಿಲ್ಲ. ರಾಜ್ಯದಲ್ಲಿ ಕೊರೋನ ಹೆಚ್ಚಾಗುತ್ತಲೇ ಇದೆ. ಪ್ರತಿ ದಿನ ಜನರು ಸಾಯುತ್ತಲೇ ಇದ್ದಾರೆ ಎಂದು ಹೇಳಿದರು. ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಸಚಿವ ಸಿಟಿ.ರವಿ ಅವರು, ಸಾವಿನ ಸಂಖ್ಯೆ ಬರೀ 7 ಸಾವಿರ ಇದೆ. ಗುಣಮುಖರ ಸಂಖ್ಯೆ 4 ಲಕ್ಷ ಇದೆ. ಇದರ ಬಗ್ಗೆ ನೀವು ಯಾಕೆ ಹೇಳುತ್ತಿಲ್ಲ ಎಂದು ಪ್ರಶ್ನಿಸಿದರು.

ಈ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್‍ನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು, ಬರೀ 7 ಸಾವಿರ ಜನರು ಮೃತಪಟ್ಟಿದ್ದಾರೆ ಎಂಬ ಹೇಳಿಕೆ ನೀಡುವ ನೀವು ಮೃತರ ಕುಟುಂಬಗಳಿಗೆ ಭೇಟಿ ನೀಡಿ ಆವಾಗ ನಿಮಗೆ ಸಾವಿನ ಸಂಕಟ ಗೊತ್ತಾಗುತ್ತದೆ. ಬಿಜೆಪಿ ಸರಕಾರ ಕೊರೋನದಿಂದ ಮೃತಪಟ್ಟವರನ್ನು ಸಂಸ್ಕಾರಯುತವಾಗಿ ಮಣ್ಣು ಮಾಡಲಿಲ್ಲ ಎಂದು ಕಿಡಿಕಾರಿದರು.

ಮಧ್ಯಪ್ರವೇಶಿಸಿ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್ ಅವರು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕೊರೋನ ಚಿಕಿತ್ಸೆಗಾಗಿ ಹೋದವರೆಲ್ಲ ಸಾಯುತ್ತಾರೆ ಎಂಬ ವದಂತಿ ಹಬ್ಬಿತ್ತು. ಆದರೆ, ಈಗ ಆರೋಗ್ಯಯುತವಾಗಿ ಮರಳುತ್ತಿರುವ ಬಗ್ಗೆ ನನಗೆ ದೂರವಾಣಿ ಕರೆಗಳು ಬರುತ್ತಿವೆ ಎಂದು ಹೇಳಿದರು.

ಕೊರೋನ ತಡೆಗೆ ಸರಕಾರ ಬರೀ ಹಣ ಖರ್ಚು ಮಾಡಿದರೆ ಆಗುವುದಿಲ್ಲ. ಜನರೂ ಮಾಸ್ಕ್ ಧರಿಸುವ ಮೂಲಕ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೋನವನ್ನು ತಡೆಗಟ್ಟಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News