ಕೊರೋನ ಪೀಡಿತರಿಗೆ ಶೇ.50 ಹಾಸಿಗೆ ಒದಗಿಸುವ ವಿಚಾರ: ಸರಕಾರದ ಸೂಚನೆಯನ್ನು ನಿರಾಕರಿಸಿದ ಖಾಸಗಿ ಆಸ್ಪತ್ರೆಗಳು

Update: 2020-09-22 17:05 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.22: ಕೊರೋನ ಸೋಂಕಿತರ ಚಿಕಿತ್ಸೆಗೆ ಒಟ್ಟು ಹಾಸಿಗೆಯ ಶೇ.50 ಹಾಸಿಗೆ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಖಾಸಗಿ ಆಸ್ಪತ್ರೆಗಳು ಬಿಬಿಎಂಪಿ ಶೋಕಾಸ್ ನೋಟಿಸ್‍ಗೆ ಸ್ಪಷ್ಟೀಕರಣ ಪತ್ರ ಬರೆದಿವೆ.

ಸರಕಾರದ ಸೂಚನೆಯಂತೆ ಎಲ್ಲ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ಒಟ್ಟು ಹಾಸಿಗೆಗಳಲ್ಲಿ ಶೇ.50 ಹಾಸಿಗೆಯನ್ನು ಕೊರೋನ ಚಿಕಿತ್ಸೆಗೆ ನೀಡಬೇಕು. ಹಾಸಿಗೆ ನೀಡದ ಆಸ್ಪತ್ರೆಗಳ ವಿರುದ್ಧ ಸೆ.16ರಂದು ಬಿಬಿಎಂಪಿ 36 ಖಾಸಗಿ ಆಸ್ಪತ್ರೆಗಳಿಗೆ ಅಂತಿಮ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು. ಜತೆಗೆ 48 ಗಂಟೆಗಳ ಒಳಗಾಗಿ ಹಾಸಿಗೆ ಬಿಟ್ಟುಕೊಡುವಂತೆ ನಿರ್ದೇಶನ ನೀಡಿ, ಸಹಕರಿಸದಿದ್ದಲ್ಲಿ ಪರವಾನಿಗೆ ರದ್ದು ಮಾಡುವ ಕುರಿತು ಎಚ್ಚರಿಕೆ ನೀಡಲಾಗಿತ್ತು. ಇದರಲ್ಲಿ ಕೆಲವು ಆಸ್ಪತ್ರೆಗಳು ಒಟ್ಟು ಹಾಸಿಗೆಯಲ್ಲಿ ಶೇ.50ರಷ್ಟು ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಪಾಲಿಕೆಗೆ ಪತ್ರ ಬರೆದಿವೆ.

ಪತ್ರದಲ್ಲಿ ಏನಿದೆ?: ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್‍ಮೆಂಟ್ ಪ್ರಕಾರ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸಾ ಘಟಕ, ಡಯಾಲಿಸಿಸ್ ಘಟಕ, ತುರ್ತು ಚಿಕಿತ್ಸಾ ಘಟಕ, ಕಾರ್ಮಿಕ ವಾರ್ಡ್ ಸೇರಿ ವಿವಿಧ ವಿಶೇಷ ವಾರ್ಡ್ ಗಳಿರುತ್ತವೆ. ಈ ಘಟಕಗಳ ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಬಿಟ್ಟುಕೊಡಲು ಸಾಧ್ಯವಿಲ್ಲ. ಹೀಗಾಗಿ, ಒಟ್ಟು ಆಸ್ಪತ್ರೆಯಲ್ಲಿನ ಹಾಸಿಗೆಯ ಶೇ.50 ಹಾಸಿಗೆ ಬಿಟ್ಟುಕೊಡುವುದಿಲ್ಲ. ಈ ಬಗ್ಗೆ ಬಿಬಿಎಂಪಿ ಪರಿಶೀಲನೆ ಮಾಡಿ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ನಗರದ 36 ಆಸ್ಪತ್ರೆಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಕೆಲವು ಆಸ್ಪತ್ರೆಗಳು ಕೆಲವು ಸ್ಪಷ್ಟೀಕರಣ ನಿಡಿದ್ದು, ಉಳಿದ ಕೆಲವು ಆಸ್ಪತ್ರೆಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಬಗ್ಗೆ ಸ್ಪಷ್ಟೀಕರಣ ಪತ್ರ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News