ನ್ಯಾಯಾಂಗ ಇಲಾಖೆಯಲ್ಲಿ ವೇತನ ಹೆಚ್ಚಳಕ್ಕೆ ಎ.ಟಿ.ರಾಮಸ್ವಾಮಿ ಆಕ್ಷೇಪ

Update: 2020-09-22 17:40 GMT

ಬೆಂಗಳೂರು, ಸೆ.22: 2020ನೆ ಸಾಲಿನ ಕರ್ನಾಟಕ ವಿಧಾನಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ತೆಗಳು ಹಾಗೂ ಕೆಲವು ಇತರ ಕಾನೂನು(ತಿದ್ದುಪಡಿ) ವಿಧೇಯಕದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಜೆಡಿಎಸ್ ಹಿರಿಯ ಸದಸ್ಯ ಎ.ಟಿ.ರಾಮಸ್ವಾಮಿ, ನ್ಯಾಯಾಂಗ ಇಲಾಖೆಯಲ್ಲಿ ವೇತನ ಪರಿಷ್ಕರಣೆ ಮಾಡಿದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಕೋವಿಡ್ ಸಾಂಕ್ರಾಮಿಕದಿಂದಾಗಿ ಸರಕಾರ ನಮ್ಮ ಶೇ.30ರಷ್ಟು ವೇತನ, ಭತ್ತೆಯನ್ನು ಒಂದು ವರ್ಷದ ಅವಧಿಗೆ ಅನ್ವಯಿಸುವಂತೆ ಕಡಿತಗೊಳಿಸಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ, ನ್ಯಾಯಾಂಗ ಇಲಾಖೆಯವರು ತಾವೇ ವೇತನ ಪರಿಷ್ಕರಣೆ ಮಾಡಿಕೊಂಡಿದ್ದಾರೆ. ಅಲ್ಲದೆ, ಸರಕಾರ ಅದಕ್ಕೆ ಒಪ್ಪಿಗೆ ನೀಡಿದೆ ಎಂದು ನನಗೆ ಮಾಹಿತಿ ಇದೆ ಎಂದು ಅವರು ಹೇಳಿದರು.

ವೇತನ ಪರಿಷ್ಕರಣೆ ಮಾಡಿಕೊಳ್ಳಲು ಶಾಸನ ಸಭೆಯ ಒಪ್ಪಿಗೆ ಬೇಡವೇ? ನ್ಯಾಯ ಹೇಳುವವರು ಮಾಡುವ ಕೆಲಸವೆ ಇದು? ಬಡವರಿಗೆ ಯಾವ ವಿನಾಯಿತಿಯೂ ಇಲ್ಲ, ಇವರಿಗೆ ಮಾತ್ರ ಹೆಚ್ಚಿನ ಸೌಲಭ್ಯ ಅಗತ್ಯವೇ? ಯಾರ ಒಪ್ಪಿಗೆ ಪಡೆದು ಅವರು ವೇತನ ಹೆಚ್ಚಿಸಿಕೊಂಡಿದ್ದಾರೆ ಎಂದು ರಾಮಸ್ವಾಮಿ ಪ್ರಶ್ನಿಸಿದರು.

ಮತ್ತೊಬ್ಬ ಜೆಡಿಎಸ್ ಸದಸ್ಯ ಲಿಂಗೇಶ್ ಮಾತನಾಡಿ, ವೇತನ, ಭತ್ತೆ ಕಡಿತ ಕೇವಲ ನಮಗೆ ಮಾತ್ರ ಸೀಮಿತಗೊಳಿಸುವುದು ಬೇಡ. ಬಿಳಿಯಾನೆಗಳಾದ ಐಎಎಸ್ ಸೇರಿದಂತೆ ಹಿರಿಯ ಅಧಿಕಾರಿಗಳ ವೇತನವನ್ನು ಕಡಿತ ಮಾಡಿ ಎಂದು ಸಲಹೆ ನೀಡಿದರು.

ಜೆಡಿಎಸ್ ಹಿರಿಯ ಸದಸ್ಯ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಸರಕಾರ ಕಡಿತ ಮಾಡುತ್ತಿರುವುದು ಕೇವಲ ಸಂಬಳ, ಭತ್ತೆ ಮಾತ್ರವೇ ಅಥವಾ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲೂ ಕಡಿತ ಮಾಡಲಾಗುತ್ತದೆಯೆ ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕು. ಇದರಿಂದ ಸರಕಾರಕ್ಕೆ ಎಷ್ಟು ಉಳಿತಾಯವಾಗುತ್ತದೆ. ಹಾಸನದಿಂದ ಅರಸೀಕೆರೆಗೆ ಆಂಬ್ಯುಲೆನ್ಸ್ ಮೂಲಕ ಮೃತದೇಹ ಸಾಗಿಸಲು 40 ಸಾವಿರ ರೂ.ಪಾವತಿಸಬೇಕು. ಇಂತಹ ಸಂದರ್ಭದಲ್ಲಿ ಸರಕಾರ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ಕಡಿತ ಮಾಡಿದರೆ ಸಾಕಷ್ಟು ಸಮಸ್ಯೆಯಾಗುತ್ತದೆ ಎಂದರು.

ಕಾಂಗ್ರೆಸ್ ಹಿರಿಯ ಸದಸ್ಯ ಎಚ್.ಕೆ.ಪಾಟೀಲ್ ಮಾತನಾಡಿ, ಸರಕಾರ ಈ ವಿಧೇಯಕವನ್ನು ಈಗಲೆ ಒಪ್ಪಿಗೆ ಪಡೆಯುವ ಬದಲು, ನ್ಯಾಯಾಂಗ ಇಲಾಖೆಯ ಪ್ರತಿನಿಧಿಗಳೊಂದಿಗೆ ಚರ್ಚಿಸಿ, ಸಮಗ್ರವಾಗಿ ಈ ವಿಧೇಯಕ ತಂದರೆ ಉತ್ತಮ ಎಂದರು.

ಸರಕಾರದ ಪರವಾಗಿ ಉತ್ತರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕರ ವೇತನ ಕಡಿತದಿಂದ ಸರಕಾರಕ್ಕೆ 16-18 ಕೋಟಿ ರೂ.ಉಳಿತಾಯವಾಗಬಹುದು. ಬಹಳ ವರ್ಷಗಳ ಹಿಂದೆಯೆ ನಾವು ನ್ಯಾಯಾಂಗ ಇಲಾಖೆಗೆ ವೇತನ ಪರಿಷ್ಕರಣೆ ಮಾಡಿಕೊಳ್ಳುವ ಅಧಿಕಾರವನ್ನು ಕೊಟ್ಟಿದ್ದೇವೆ. ಅವರಿಗೆ ಬಜೆಟ್‍ನಲ್ಲಿ ನಾವು ಅನುದಾನ ಹಂಚಿಕೆ ಮಾಡಿಕೊಡುತ್ತೇವೆ. ಅವರ ವೇತನ, ವೆಚ್ಚಗಳು ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಅವರೇ ತೀರ್ಮಾನ ಮಾಡುತ್ತಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News