ಬಿಬಿಎಂಪಿ ವಾರ್ಡ್ ಗಳ ಸಂಖ್ಯೆ 250ಕ್ಕೆ ಹೆಚ್ಚಿಸಲು ಪರಿಶೀಲನಾ ಸಮಿತಿ ಶಿಫಾರಸ್ಸು

Update: 2020-09-22 17:53 GMT

ಬೆಂಗಳೂರು, ಸೆ. 22: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ವಾರ್ಡ್ ಗಳ ಸಂಖ್ಯೆಯನ್ನು 250ಕ್ಕೆ ಹೆಚ್ಚಿಸುವಂತೆ ಕರ್ನಾಟಕ ವಿಧಾನ ಮಂಡಲದ ಜಂಟಿ ಪರಿಶೀಲನಾ ಸಮಿತಿ ರಾಜ್ಯ ಸರಕಾರಕ್ಕೆ ಮಹತ್ವದ ಶಿಫಾರಸ್ಸು ಮಾಡಿದೆ.

ಮಂಗಳವಾರ ವಿಧಾನಸಭೆಯಲ್ಲಿ ಪರಿಶೀಲನಾ ಸಮಿತಿ ಅಧ್ಯಕ್ಷ ಎಸ್.ರಘು ಅವರು, 2020ನೆ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಧೇಯಕವನ್ನು ಪರಿಶೀಲಿಸಿ ವರದಿಯನ್ನು ಮಂಡಿಸಿದರು. ಇಂದು ಮಂಡನೆಯಾದ ಬಿಬಿಎಂಪಿ ವಿಧೇಯಕ ಜಂಟಿ ಪರಿಶೀಲನಾ ಸಮಿತಿ ವರದಿಯಲ್ಲಿ ವಾರ್ಡ್ ಗಳ ಸಂಖ್ಯೆಯನ್ನು 250ಕ್ಕೆ ಹೆಚ್ಚಿಸುವಂತೆ ಶಿಫಾರಸ್ಸು ಮಾಡಲಾಗಿದೆ.

ಈ ವೇಳೆ ಮಾತನಾಡಿದ ಎಸ್.ರಘು, `ಬಿಬಿಎಂಪಿ ವಿಧೇಯಕದಲ್ಲಿನ ಅಂಶಗಳ ಬಗ್ಗೆ ಸವಿಸ್ತಾರವಾಗಿ ಪರಿಶೀಲಿಸಿ ಚರ್ಚಿಸಲು ಸಮಿತಿಯ ಅವಧಿಯನ್ನು ವಿಸ್ತರಿಸುವಂತೆ ಸೆ.4ರಂದು ನಡೆದ ಸಮಿತಿ ಸಭೆಯಲ್ಲಿ ಸ್ಪೀಕರ್ ಅವರನ್ನು ಕೋರಲು ತೀರ್ಮಾನ ಮಾಡಲಾಗಿತ್ತು. ಅದರಂತೆ ಸಮಿತಿ ಅಂತಿಮ ವರದಿ ಸಲ್ಲಿಸಲು ನವೆಂಬರ್ 10ರ ವರೆಗೂ ಸ್ಪೀಕರ್ ಅವರು ಅವಧಿ ವಿಸ್ತರಿಸಿದ್ದಾರೆ ಎಂದು ತಿಳಿಸಿದರು.

ಈ ಮಧ್ಯದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾಯಿತ ಅವಧಿಯು ಮುಕ್ತಾಯಗೊಂಡಿದ್ದು, ಚುನಾವಣೆಯನ್ನು ನಡೆಸಬೇಕಾಗಿರುತ್ತದೆ. ಹೀಗಾಗಿ ಈ ವಿಶೇಷ ವರದಿಯನ್ನು ಸೆ.16ರಂದು ನಡೆದ ಸಮಿತಿ ಸಭೆಯಲ್ಲಿ ಅಂಗೀಕರಿಸಿ ಸ್ಪೀಕರ್ ಅವರಿಗೆ ಸಲ್ಲಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಇಂದು ಮಂಡಿಸಲಾದ ವರದಿಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರ ಅವಧಿ ಮುಗಿದಿದ್ದು, ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಬೇಕಾಗಿರುತ್ತದೆ. ಆದರೆ, ಈಗಿನ ವಿದ್ಯಮಾನಗಳು ಬೆಂಗಳೂರು ಮಹಾನಗರದಲ್ಲಿ ಹೆಚ್ಚಳವಾದ ಜನಸಂಖ್ಯೆ ಹಾಗೂ ವಿಸ್ತಾರವಾದ ಪ್ರದೇಶವನ್ನು ಗಮನಿಸಿರುವ ಸಮಿತಿಯು, 1976ನೆ ಸಾಲಿನ `ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ ಪ್ರಕರಣ-7'ಕ್ಕೆ ತಿದ್ದುಪಡಿ ತರುವಂತೆ ಶಿಫಾರಸ್ಸು ಮಾಡಿದೆ.

ಈ ಶಿಫಾರಸ್ಸಿನಂತೆ 1976ನೆ ಸಾಲಿನ ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ-7(1)ನೆ ಉಪಪ್ರಕರಣದ (ಅ)ಖಂಡದಲ್ಲಿ (ಎರಡನೂರು) ಎಂಬ ಪದಗಳಿಗೆ ಎರಡೂನೂರುಐವತ್ತು (250) ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು ಎಂದು ಶಿಫಾರಸ್ಸು ಮಾಡಿದೆ. ಈ ಶಿಫಾರಸ್ಸಿನಂತೆ ಬಿಬಿಎಂಪಿ ವಿಧೇಯಕ ವಿಧಾನಸಭೆಯಲ್ಲಿ ಚರ್ಚೆಯಾಗಿ ಅಂಗೀಕಾರವಾದರೆ ಬಿಬಿಎಂಪಿಯ ವಾರ್ಡ್ ಗಳ ಸಂಖ್ಯೆ ಸಂಖ್ಯೆ 250ಕ್ಕೆ ಏರಿಕೆಯಾಗಲಿದೆ.

ಬಿಬಿಎಂಪಿಯ 192 ವಾರ್ಡ್ ಗಳನ್ನು 250 ವಾರ್ಡ್‍ಗಳ ಹೆಚ್ಚಳಕ್ಕೆ ತೀರ್ಮಾನಿಸಿದ್ದು, ಹೊಸದಾಗಿ 52 ವಾರ್ಡ್ ಸೇರ್ಪಡೆಗೆ ಶಿಫಾರಸ್ಸು ಮಾಡಿದ್ದೇವೆ. ಸಮಿತಿಯ ವರದಿ ವಿಧಾನಸಭೆಯಲ್ಲಿ ಅಂಗೀಕಾರವಾಗಬೇಕಾಗಿದೆ. ಅಂಗೀಕಾರವಾದ ನಂತರ 250 ವಾರ್ಡ್ ಆಗಲಿದೆ. ಚುನಾವಣೆ ಮುಂದೂಡುವ ಯಾವುದೇ ಉದ್ದೇಶವಿಲ್ಲ. ಬೆಂಗಳೂರಿನ ಈಗಿನ ಭಾಗಗಳನ್ನೇ ಸೇರಿಸಿ ವಾರ್ಡ್ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ಹೊಸ ಭಾಗಗಳ ಸೇರ್ಪಡೆ ಇಲ್ಲ'

-ಎಸ್.ರಘು, ಜಂಟಿ ಪರಿಶೀಲನಾ ಸಮಿತಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News