ಐಪಿಎಲ್ ಬೆಟ್ಟಿಂಗ್ ಅಡ್ಡೆ ಮೇಲೆ ಸಿಸಿಬಿ ದಾಳಿ: 6 ಜನರ ಬಂಧನ, ಲಕ್ಷಾಂತರ ರೂ. ನಗದು ಜಪ್ತಿ

Update: 2020-09-23 11:32 GMT

ಬೆಂಗಳೂರು, ಸೆ.23: ಐಪಿಎಲ್ ಕ್ರಿಕೆಟ್ ಟೂರ್ನಿ ಆರಂಭವಾಗುತ್ತಿದ್ದಂತೆಯೇ ಕ್ರಿಕೆಟ್ ಬೆಟ್ಟಿಂಗ್ ನಡೆಸಲು ಸಜ್ಜಾಗಿ ಕುಳಿತಿದ್ದ ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಆರು ಜನ ಆರೋಪಿಗಳನ್ನು ಬಂಧಿಸಿ 6 ಲಕ್ಷ ನಗದು, ಕಾರು, ಬೈಕ್ ಹಾಗೂ ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಸೆ.21 ಹಾಗೂ 22ರಂದು ದುಬೈನಲ್ಲಿ ನಡೆದ ಐಪಿಎಲ್ ಕ್ರಿಕೆಟ್ ಟೂರ್ನಿಗಳ ಹಿನ್ನೆಲೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸಲಾಗಿತ್ತು. ಈ ಎಲ್ಲ ಮಾಹಿತಿಯನ್ನು ಕಲೆ ಹಾಕಿದ ಸಿಸಿಬಿ ಪೊಲೀಸರು ಅಡ್ಡೆಗಳ ಮೇಲೆ ದಾಳಿ ನಡೆಸಿದ್ದಾರೆ.

ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ನಡೆಯುತ್ತಿದ್ದ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ನಡೆಸಿ 5 ಮಂದಿಯನ್ನು ಬಂಧಿಸಿ, 1.70 ಲಕ್ಷ ನಗದು, ಕಾರು, ಬೈಕ್ ಮತ್ತು ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಗಜೇಂದ್ರ, ಮಣಿಕಂಠ, ಅರುಣ್‍ ಕುಮಾರ್, ವರುಣ್‍ ಕುಮಾರ್, ಜೋಸೆಫ್ ಎಂದು ಗುರುತಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡೆ ಮೇಲೆ ದಾಳಿ ನಡೆಸಿ ವಿನಯ್ ಎಂಬಾತನನ್ನು ಬಂಧಿಸಿ 4 ಲಕ್ಷ ನಗದು, ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಆರ್ ಸಿಬಿ ಮತ್ತು ಹೈದ್ರಾಬಾದ್ ಹಾಗೂ ಚೆನ್ನೈ ಮತ್ತು ರಾಜಸ್ಥಾನ ತಂಡಗಳ ಮಧ್ಯೆ ನಡೆದ ಪಂದ್ಯಗಳ ಮೇಲೆ ಮೊಬೈಲ್ ಮೂಲಕ ಬೆಟ್ಟಿಂಗ್ ನಡೆಸಲಾಗಿತ್ತು ಎಂಬ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News