ಸೆ.25ರ ಭಾರತ ಬಂದ್‍ ಕರೆಗೆ ವೆಲ್ಫೇರ್ ಪಾರ್ಟಿ ಬೆಂಬಲ

Update: 2020-09-23 11:51 GMT

ಬೆಂಗಳೂರು, ಸೆ.23: ಕೇಂದ್ರ ಸರಕಾರವು ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾನೂನುಗಳಿಗೆ ಹಾಗೂ ವಿದ್ಯುತ್ ಕಾಯ್ದೆಗಳಿಗೆ ತಿದ್ದುಪಡಿ ಸುಗ್ರೀವಾಜ್ಞೆ ತರುವುದನ್ನು ವಿರೋಧಿಸಿ ಸೆ.25 ರಂದು ಕರೆ ನೀಡಿರುವ ಭಾರತ ಬಂದ್‍ಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಘಟಕ ಸಂಪೂರ್ಣವಾಗಿ ಬೆಂಬಲ ವ್ಯಕ್ತಪಡಿಸಿದೆ.

ಕಾರ್ಪೋರೇಟ್, ಬಂಡವಾಳಶಾಹಿಗಳ ಹಿಡಿತಕ್ಕೆ ದೇಶವನ್ನು ಕೊಟ್ಟು ದೇಶದ ಕಾರ್ಮಿಕ ಹಾಗೂ ರೈತರನ್ನು ಗುಲಾಮರನ್ನಾಗಿ ಮಾಡುವ ಹುನ್ನಾರ ನಡೆದಿದೆ. ರಾಜ್ಯದಲ್ಲಿ 18 ಲಕ್ಷಕ್ಕೂ ಹೆಚ್ಚು ರೈತರು ಭೂಮಿ ಇಲ್ಲದೇ ಸರಕಾರ ಗೈರಾಣಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದಾರೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಆದಿಲ್ ಪಟೇಲ್ ತಿಳಿಸಿದ್ದಾರೆ.

ಸಾಗುವಳಿ ಮಾಡುವ ರೈತರಿಗೆ ಭೂಮಿ ಪಟ್ಟಾ ನೀಡದೆ ರೈತರನ್ನು ವಂಚಿಸಲಾಗುತ್ತಿದೆ. ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತಂದು ಸಣ್ಣಪುಟ್ಟ ರೈತ ಹಾಗೂ ಆದಿವಾಸಿಗಳನ್ನು ಬೀದಿಗೆ ತಳ್ಳುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಅವರು ಆರೋಪಿಸಿದ್ದಾರೆ.

ಕಾರ್ಮಿಕ ಕಾಯ್ದೆಯನ್ನು ಜಾರಿಗೆ ತಂದು ಕಾರ್ಮಿಕ ಹಕ್ಕುಗಳನ್ನು ಮೊಟಕುಗೊಳಿಸಿ, ಗುತ್ತೇದಾರ ಪದ್ಧತಿಯನ್ನು ಜಾರಿಗೆ ತರಲು ಹೊರಟಿದೆ. ಅಲ್ಲದೇ ವಿದ್ಯುತ್ ಕಾಯ್ದೆ ಜಾರಿಗೊಳಿಸುವ ಮೂಲಕ ಬಡವರ ಭಾಗ್ಯಜ್ಯೋತಿ ಉಚಿತ ವಿದ್ಯುತ್ ಅನ್ನು ಮೊಟಕುಗೊಳಿಸುವ ಯತ್ನ ನಡೆದಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ನಮ್ಮ ಬೇಡಿಕೆಗಳಿಗೆ ಸ್ಪಂದಿಸದ ಕಾರಣ ಸೆ.25ರಂದು ವಿವಿಧ ಸಂಘಟನೆಗಳ ಒಕ್ಕೂಟದಲ್ಲಿ ಭಾರತ ಬಂದ್‍ಗೆ ಕರೆ ಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯಾದ್ಯಂತ ವೆಲ್ಫೇರ್ ಪಾರ್ಟಿ ಭಾರತ್ ಬಂದ್‍ಗೆ ಬೆಂಬಲ ನೀಡಲಿದೆ. ಈ ಹೋರಾಟಕ್ಕೂ ಸರಕಾರ ಸ್ಪಂದಿಸದಿದ್ದಲ್ಲಿ ಅಸಹಕಾರ ಚಳವಳಿಯ ಮೂಲಕ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದೆಂದು ಆದಿಲ್ ಪಟೇಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News