ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರ ಆರೋಪ: ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್-ಜೆಡಿಎಸ್ ಸಭಾತ್ಯಾಗ

Update: 2020-09-23 13:11 GMT

ಬೆಂಗಳೂರು, ಸೆ. 23: `ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ವಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ. ಎಲ್ಲವೂ ಪಾರದರ್ಶಕವಾಗಿದ್ದು, ಯಾವುದೇ ತನಿಖೆ ಅಗತ್ಯವಿಲ್ಲ' ಎಂದು ಸರಕಾರ ತನಿಖೆಗೆ ನಿರಾಕರಿಸಿದ ಕ್ರಮವನ್ನು ವಿರೋಧಿಸಿ ವಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.

ಬುಧವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ನಿನ್ನೆ ನಡೆದ ಚರ್ಚೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನೀಡಿದ ಉತ್ತರ ತಮಗೆ ತೃಪ್ತಿ ತಂದಿಲ್ಲ. ಸೋಂಕಿನ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಮರ್ಪಕವಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಇಂದಿಗೂ ಸೋಂಕಿತರಿಗೆ ಹಾಸಿಗೆ ದೊರೆಯುತ್ತಿಲ್ಲ. ಕೇಂದ್ರ ಸರಕಾರ 4 ಲಕ್ಷ ರೂ.ನಂತೆ ಒಂದು ವೆಂಟಿಲೇಟರ್ ಖರೀದಿಸಿದರೆ, ರಾಜ್ಯ ಸರಕಾರ 18 ಲಕ್ಷ ರೂ.ಗೆ ವೆಂಟಿಲೆಟರ್ ಖರೀದಿಸಿದ್ದು, ಉಪಕರಣ ಖರೀದಿಯಲ್ಲಿ ದೊಡ್ಡ ಮೊತ್ತದ ಅವ್ಯವಹಾರ ನಡೆದಿದೆ. ಆರೇಳು ಪಟ್ಟು ಹೆಚ್ಚಿನ ಬೆಲೆಗೆ ವಸ್ತುಗಳನ್ನು ಖರೀದಿಸಲಾಗಿದೆ. ಇದರಲ್ಲಿ ಮೇಲ್ನೋಟಕ್ಕೆ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟ. ಉಪಕರಣ ಖರೀದಿಯಲ್ಲಿ ಪಾರದರ್ಶಕತೆ ಇಲ್ಲ. ಆದುದರಿಂದ ಈ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಆಗ್ರಹಿಸಿದರು.

ಕಾಂಗ್ರೆಸ್ ಸದಸ್ಯೆ ಸೌಮ್ಯಾರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಇಂದಿಗೂ ಸೋಂಕಿತರಿಗೆ ಹಾಸಿಗೆ, ವೆಂಟಿಲೇಟರ್ ಸೌಲಭ್ಯ ದೊರೆಯುತ್ತಿಲ್ಲ. ಪಾಲಿಕೆ ಸೂಚನೆ ನೀಡಿದರೂ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ಸಿಗದೆ ನಮ್ಮ ಆತ್ಮೀಯರನ್ನು ಕಳೆದುಕೊಳ್ಳುತ್ತಿದ್ದೇವೆ. ಸರಕಾರ ಕನಿಷ್ಠ ಪಕ್ಷ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ನಮ್ಮ ಸಲಹೆಗಳನ್ನು ಸ್ವೀಕಾರ ಮಾಡುತ್ತಿಲ್ಲ ಎಂದು ದೂರಿದರು.

ಜೆಡಿಎಸ್‍ನ ಬಂಡೆಪ್ಪ ಕಾಶೆಂಪೂರ್ ಮತ್ತು ಶಿವಲಿಂಗೇಗೌಡ, ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳ ಲೂಟಿ ಮಿತಿಮೀರಿದೆ. ಅವುಗಳಿಗೆ ಕಡಿವಾಣ ಹಾಕಲು ಸರಕಾರ ಕನಿಷ್ಠ ಪಕ್ಷ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೇ? 3.50 ಲಕ್ಷ ರೂ.ಪ್ಯಾಕೇಜ್ ಅಂತೆ. ಬಡ ರೈತರು ಎಲ್ಲಿಂದ ಹಣ ತರಬೇಕು. ಸೋಂಕಿತರು ಊರೆಲ್ಲ ಖಾಯಿಲೆ ಹಂಚಿದ ಬಳಿಕ ಫಲಿತಾಂಶ ಬರುವ ವ್ಯವಸ್ಥೆ ಮೊದಲು ತಪ್ಪಿಸಿ, ಸಮರ್ಪಕವಾಗಿ ಪರೀಕ್ಷೆ ಮತ್ತು ಚಿಕಿತ್ಸೆ ವ್ಯವಸ್ಥೆ ಕಲ್ಪಿಸಿ ಎಂದು ಆಗ್ರಹಿಸಿದರು.

ಬಳಿಕ ಉತ್ತರಿಸಿದ ಡಾ.ಸುಧಾಕರ್, `ಕೊರೋನ ಸೋಂಕಿನ ನಿಯಂತ್ರಿಸುವಲ್ಲಿ ಸರಕಾರ ಎಳ್ಳಷ್ಟು ಲೋಪವೆಸಗಿಲ್ಲ. ವೈದ್ಯಕೀಯ ಉಪಕರಣ ಖರೀದಿಯಲ್ಲೂ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಹೀಗಾಗಿ, ನ್ಯಾಯಾಂಗ ತನಿಖೆ ನಡೆಸುವ ಅಗತ್ಯವಿಲ್ಲ. ವಿಪಕ್ಷಗಳ ಆರೋಪ ಮಾಡುವ ಮೂಲಕ ಕೊರೋನ ವಾರಿಯರ್ಸ್ ಗಳ ಮನೋಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ' ಎಂದು ತಿರುಗೇಟು ನೀಡಿದರು. ಇದರಿಂದ ಕೆರಳಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವರ ಉತ್ತರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ತನ್ನ ನೇತೃತ್ವದ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಸದಸ್ಯರೊಂದಿಗೆ ಸಭಾತ್ಯಾಗ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News