ಬಿಎಸ್‍ವೈ, ಕುಟುಂಬಸ್ಥರಿಂದ ಭ್ರಷ್ಟಾಚಾರ ಆರೋಪ: ಸಿಎಂ ಸ್ಥಾನಕ್ಕೆ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ

Update: 2020-09-23 13:49 GMT

ಬೆಂಗಳೂರು, ಸೆ: 23: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಪಾರ್ಟ್ಮೆಂಟ್ ಕಾಮಗಾರಿಯಲ್ಲಿ ಬಿಡಿಎ ಆಯುಕ್ತರ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕುಟುಂಬ ಸದಸ್ಯರು ಲಂಚ ಪಡೆದಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ನ ಹಾಲಿ ನ್ಯಾಯಾಧೀಶರು ಅಥವಾ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ನೇತೃತ್ವದ ಸಮಿತಿ ತನಿಖೆ ನಡೆಸಬೇಕು. ತನಿಖೆ ನಡೆಯುವವರೆಗೂ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಇಂದಿಲ್ಲಿ ಆಗ್ರಹಿಸಿದ್ದಾರೆ.

ಬುಧವಾರ ಇಲ್ಲಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಣದೀಪ್ ಸಿಂಗ್ ಸುರ್ಜೆವಾಲ, ಬಿಎಸ್‍ವೈ ಅವರು ಈ ಹಿಂದೆ ಚೆಕ್ ಮೂಲಕ ಲಂಚ ಪಡೆದಿದ್ದರು. ಈ ಬಾರಿ ಆರ್‍ಟಿಜಿಎಸ್ ಮೂಲಕ ಪಡೆದಿದ್ದಾರೆ. ಇವರಿಗೆ ಭ್ರಷ್ಟಾಚಾರ ಮಾಡಲು ಎಷ್ಟು ಆತುರವಿದೆ ಎಂದರೆ ಬ್ಯಾಂಕ್ ವ್ಯವಹಾರದ ಮೂಲಕವೇ ಲಂಚ ಪಡೆಯುತ್ತಿದ್ದಾರೆ. ವಿಜಯೇಂದ್ರ ತಮಗೆ ಬಿಡಿಎ ಆಯುಕ್ತ ಹಣ ನೀಡಿಲ್ಲ ಎಂದು ವರ್ಗಾವಣೆ ಮಾಡಲು ಶಿಫಾರಸ್ಸು ಮಾಡಿರುವುದು ಆಡಿಯೋದಲ್ಲಿ ಸ್ಪಷ್ಟವಾಗಿದೆ. ಇಷ್ಟೆಲ್ಲಾ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಇದ್ದರೂ ಅವರ ವಿರುದ್ಧ ಕ್ರಮ ಏಕೆ ಕೈಗೊಂಡಿಲ್ಲ. ಇದು ಕೇವಲ ಆರೋಪವಲ್ಲ, ಇದಕ್ಕೆ ನಮ್ಮ ಬಳಿ ಎಲ್ಲ ದಾಖಲೆಗಳಿವೆ ಎಂದು ಬಹಿರಂಗಪಡಿಸಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ನಡೆದಿದ್ದರೂ ಜಾರಿ ನಿರ್ದೇಶನಾಲಯ ಏಕೆ ಗಮನಿಸಿಲ್ಲ. ಮಾಧ್ಯಮದ ಸ್ಟಿಂಗ್ ಆಪರೇಷನ್‍ನಲ್ಲಿ ಬಯಲಾಗಿದೆ. ಮುಖ್ಯಮಂತ್ರಿ ಕುಟುಂಬದ ಸದಸ್ಯರ ಮೇಲೆ ಆರೋಪವಿದೆ. ಹೀಗಾಗಿ ತನಿಖೆ ಆಗಬೇಕಿದೆ. ತನಿಖೆ ಸಂದರ್ಭದಲ್ಲಿ ಬಿಎಸ್‍ವೈ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಯಡಿಯೂರಪ್ಪನವರು ಪ್ರಕರಣ ಮುಚ್ಚಿ ಹಾಕುವ ವಿಫಲ ಯತ್ನ ನಡೆಸುವುದನ್ನು ಬಿಟ್ಟು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, `ಪ್ರಧಾನಿ ಮೋದಿ ಹೋದ ಕಡೆಯಲ್ಲೆಲ್ಲಾ `ನಾನು ಲಂಚ ತಿನ್ನುವುದಿಲ್ಲ, ಬೇರೆಯವರು ತಿನ್ನಲು ಬಿಡುವುದಿಲ್ಲ' ಎಂದು ಹೇಳುತ್ತಾರೆ. ನಾನು ಸಿಎಂ ಆಗಿದ್ದ ವೇಳೆ ಶೇ.10 ಕಮಿಷನ್ ಸರಕಾರ ಎಂದು ಮೋದಿ ಆರೋಪಿಸಿದ್ದರು. ಈ ಲಂಚದ ಆರೋಪದಲ್ಲಿ ಪ್ರಮುಖ ಆರೋಪಿಯಾಗಿರುವ ವಿಜಯೇಂದ್ರ ಅವರನ್ನೇ ಮೋದಿ ಅವರು ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಪಕ್ಷದ ಉಪಾಧ್ಯಕ್ಷರೇ ಭ್ರಷ್ಟಾಚಾರದಲ್ಲಿ ತೊಡಗಿರುವಾಗ, ಸಿಎಂ ಸ್ಥಾನದಲ್ಲಿದ್ದು ಯಡಿಯೂರಪ್ಪನವರು ಭ್ರಷ್ಟಾಚಾರ ಮಾಡಿದವರಿಗೆ ರಕ್ಷಣೆ ನೀಡಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಮೌನವಾಗಿದ್ದಾರೆ ಎಂದು ಆರೋಪಿಸಿದರು.

ಈ ಪ್ರಕರಣದ ತನಿಖೆಯಾಗುವವರೆಗೂ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವೇ ಪ್ರಧಾನಿ ಮೋದಿ ಅವರೇ ಈ ಸ್ಥಾನದಿಂದ ಕಿತ್ತುಹಾಕಬೇಕು. ಇದನ್ನು ಮಾಡದಿದ್ದರೆ ಪ್ರಧಾನಿ ಮೋದಿ ಅವರು ಹೇಳುವುದೇ ಒಂದು ಮಾಡುವುದೇ ಒಂದು ಎಂಬುದು ಸಾಬೀತಾಗುತ್ತದೆ. ಗಾಂಧೀಜಿ ಅವರ ಪ್ರಕಾರ `ದುರಾಡಳಿತ ಹಾಗೂ ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ'. ಭ್ರಷ್ಟಾಚಾರ ಆರೋಪ ವಿಚಾರದಲ್ಲಿ ಯಡಿಯೂರಪ್ಪ ಸರಕಾರ ಜಾಣ ಕಿವುಡುತನ ತೋರುತ್ತಿದೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮೇಲ್ಮನೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಮಾಜಿ ಸಚಿವ ದಿನೇಶ್ ಗುಂಡೂರಾವ್, ಮಾಜಿ ಸಂಸದ ಕೆ.ಎಚ್. ಮುನಿಯಪ್ಪ, ಮಾಜಿ ಸಚಿವ ಎಚ್.ಕೆ.ಪಾಟೀಲ್, ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್, ಈಶ್ವರ್ ಖಂಡ್ರೆ ಸೇರಿದಂತೆ ಇನ್ನಿತರ ಮುಖಂಡರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

ಪ್ರಶ್ನೆಗಳು

-ಬಿಡಿಎ ಆಯುಕ್ತರು ಬಿಎಸ್‍ವೈ ಹಾಗೂ ಅವರ ಪುತ್ರನ ಹೆಸರಲ್ಲಿ 12 ಕೋಟಿ ರೂ.ಲಂಚ ಪಡೆದಿದ್ದಾರೆಂಬ ಆರೋಪದ ಬಗ್ಗೆ ವಿಜಯೇಂದ್ರ ಅವರಿಗೆ ತಿಳಿದಿತ್ತು ಎಂಬುದು ನಿಜವಲ್ಲವೇ?

-ಅಧಿಕಾರ ದುರ್ಬಳಕೆ ಮಾಡಿ ಲಂಚ ಪಡೆದ ಆರೋಪ ಎದುರಿಸುತ್ತಿರುವ ಗುತ್ತಿಗೆದಾರ ಹಾಗೂ ಬಿಡಿಎ ಆಯುಕ್ತರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಲ್ಲ ಏಕೆ?

-ಸಿಎಂ ಪುತ್ರ ವಿಜಯೇಂದ್ರ ಅವರು ಬಿಡಿಎ ಆಯುಕ್ತರ ವಿರುದ್ಧ ಎಫ್‍ಐಆರ್ ದಾಖಲಿಸಿ ಎಂದು ಆಗ್ರಹಿಸದೆ, ಕೇವಲ ವರ್ಗಾವಣೆ ಮಾಡಿ ಎಂದು ಕೇಳುತ್ತಿರುವುದೇಕೆ?

-ಗುತ್ತಿಗೆದಾರರು ಹಾಗೂ ಆಯುಕ್ತರ ವಿರುದ್ಧ ಎಫ್‍ಐಆರ್ ದಾಖಲಿಸದೆ, ವಿಜಯೇಂದ್ರ ಅವರು ಕೇವಲ ಆಯುಕ್ತರಿಂದ ಗುತ್ತಿಗೆದಾರ ಹಣ ವಾಪಸ್ ಪಡೆಯುವಂತೆ ಸೂಚಿಸುತ್ತಿರುವುದೇಕೆ ?

-ಈ ಪ್ರಕರಣದಲ್ಲಿ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗಿದ್ದರೂ ಯಡಿಯೂರಪ್ಪನವರು ಗುತ್ತಿಗೆ ರದ್ದು ಮಾಡದೆ, ಎಫ್‍ಐಆರ್ ದಾಖಲಿಸಲು ಯಾಕೆ ಆದೇಶ ನೀಡುತ್ತಿಲ್ಲ?

-ಬಿಡುಗಡೆಯಾಗಿರುವ ವಾಟ್ಸ್ ಆ್ಯಪ್ ಸಂದೇಶದ ಪ್ರಕಾರ ಗುತ್ತಿಗೆದಾರ ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ್ ಮರಡಿ ಅವರಿಗೆ ಹಣ ನೀಡಿರುವುದೇಕೆ?

-ಜೂ.25 ಮತ್ತು ಜುಲೈ 16ರಂದು ಗುತ್ತಿಗೆದಾರ ಮತ್ತು ಶಶಿಧರ್ (ಸಿಎಂ ಮೊಮ್ಮಗ) ನಡುವಣ ವಾಟ್ಸ್ ಆ್ಯಪ್ ಸಂದೇಶದಲ್ಲಿ ಪ್ರಸ್ತಾಪ ಮಾಡಲಾಗಿರುವ ಪ್ರಕಾರ ಶಶಿಧರ್ ಖಾತೆಗೆ ರವಾನಿಸಿರುವ 7.40 ಕೋಟಿ ರೂ.ಹಣವನ್ನು ಲಂಚ ಎಂದು ಘೋಷಿಸಿಲ್ಲ ಏಕೆ?

-ಲಂಚ ವರ್ಗಾವಣೆಯಲ್ಲಿ ಮಂಜು, ಉಮೇಶ್, ಸಂಜಯ್ ಎಂಬುವವರ ಹೆಸರು ಕೇಳಿಬಂದಿದ್ದು, ಇವರು ಬಿಎಸ್‍ವೈ ನಿವಾಸ ಹಾಗೂ ಗೃಹ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿರುವುದು ನಿಜವೇ?

-ಈ ಪ್ರಕರಣದ ಪ್ರಮುಖ ಆರೋಪಿಯನ್ನು ಸಿಎಂ ಯಡಿಯೂರಪ್ಪ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ರಕ್ಷಿಸುತ್ತಿಲ್ಲವೇ? ಇದು ಯಡಿಯೂರಪ್ಪ ಅವರು ಸಿಎಂ ಸ್ಥಾನದಲ್ಲಿ ಒಂದೇ ಒಂದು ನಿಮಿಷ ಮುಂದುವರಿಯಲು ಅನರ್ಹರಲ್ಲವೇ?

ಬಿಎಸ್‍ವೈ ಅವರ ಮಗ, ಮೊಮ್ಮಗ ಸೇರಿದಂತೆ ತನ್ನ ಇಡೀ ಕುಟುಂಬವನ್ನೇ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿರುವ ಮುಖ್ಯಮಂತ್ರಿ ಬಿಎಸ್‍ವೈ ಅವರು ತಕ್ಷಣ ರಾಜೀನಾಮೆ ನೀಡಬೇಕು. ಈ ಇಡೀ ಹಗರಣದ ಬಗ್ಗೆ ನ್ಯಾಯಾಲಯದ ನಿಗಾದಲ್ಲಿ ತನಿಖೆಗೆ ವಿಶೇಷ ತನಿಖಾ ದಳವನ್ನು ರಚಿಸಬೇಕು

-ಸಿದ್ದರಾಮಯ್ಯ ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News