ಎಪಿಎಂಸಿ ಕಾಯ್ದೆಯಿಂದ ರೈತ ವರ್ಗಕ್ಕೆ ಅನುಕೂಲ: ಸಚಿವ ಎಸ್.ಟಿ.ಸೋಮಶೇಖರ್

Update: 2020-09-23 14:52 GMT

ಬೆಂಗಳೂರು, ಸೆ. 23: ಎಪಿಎಂಸಿ ಕಾಯ್ದೆ ರೈತರಿಗೆ ಉಪಕಾರಿಯಾಗಿದ್ದು, ಕರ್ನಾಟಕದಲ್ಲಿ 162 ಎಪಿಎಂಸಿಗಳಿದ್ದು, ಇವುಗಳೂ ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ಬೇಕಾದರೂ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಆದರೆ, ವಿಪಕ್ಷಗಳು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಇಂದಿಲ್ಲಿ ಆರೋಪಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾಯ್ದೆಯಿಂದ ಎಪಿಎಂಸಿಗೆ ಯಾವುದೇ ಧಕ್ಕೆ ಇಲ್ಲ. ಮೊದಲು 1 ರೂ. ಸೆಸ್ ನಿಗದಿ ಮಾಡಿದ್ದೆವು. ಕೊನೆಗೂ ದರವೂ ಹೆಚ್ಚಾಯಿತು ಎಂಬ ಮನವಿಗಳು ಬಂದ ಹಿನ್ನೆಲೆಯಲ್ಲಿ ನಾವು ಸಂಪುಟದಲ್ಲಿ ಚರ್ಚೆ ನಡೆಸಿ 35 ಪೈಸೆಗೆ ನಿಗದಿ ಮಾಡಿದೆವು. ಇಷ್ಟಾದರೂ ಎಪಿಎಂಸಿಗೆ ವರ್ಷಕ್ಕೆ 120 ಕೋಟಿ ರೂ.ಆದಾಯ ಬರುತ್ತದೆ. ಇದರಿಂದ ವ್ಯವಸ್ಥೆ ಮೇಲೆ ಯಾವುದೇ ಪರಿಣಾಮ ಬೀರದು. ಅಲ್ಲದೆ, ಎಪಿಎಂಸಿಯ ಅಧಿಕಾರ ಮೊಟುಕುಗೊಳ್ಳುವುದಿಲ್ಲ, ಇದನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರಕಾರ ಜಾರಿಗೆ ತಂದ ಕಾಯ್ದೆಯನ್ನು ಸಚಿವನಾಗಿ ನಾನು ಸ್ವಾಗತಿಸುತ್ತೇನೆ. ಇದು ರೈತರಿಗೆ ಅನುಕೂಲವಾಗುವ ಕಾನೂನೇ ವಿನಃ ಯಾವುದೇ ತೊಂದರೆಯಾಗದು. ಈ ಕಾಯ್ದೆ ಬರುವುದಕ್ಕೆ ಮುಂಚೆ 50ಕ್ಕೂ ಹೆಚ್ಚು ಬಹುರಾಷ್ಟ್ರೀಯ ವಿದೇಶಿ ಕಂಪೆನಿಗಳಿಗೆ ಮಾರಾಟ ಮಾಡುವ ಅವಕಾಶವನ್ನು ಈ ಹಿಂದಿನ ಸರಕಾರವೇ ಅನುಮತಿ ಕೊಟ್ಟಿತ್ತು. ಆದರೆ, ಅದರಿಂದಲೂ ರೈತರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಈಗಿನ ನೂತನ ಕಾಯ್ದೆಯಿಂದ ಪೈಪೋಟಿ ಏರ್ಪಟ್ಟು ರೈತರಿಗೇ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಸ್ಥಳೀಯ ಎಪಿಎಂಸಿಗೆ ಅಧಿಕಾರ ಇಲ್ಲದಿದ್ದರೂ ರಾಜ್ಯ ಎಪಿಎಂಸಿ ಬೋರ್ಡ್ ಗೆ ಸಂಪೂರ್ಣ ಅಧಿಕಾರ ಇದೆ. ಹೀಗಾಗಿ ಬಹುರಾಷ್ಟ್ರೀಯ ಕಂಪೆನಿಗಳು ಅಕ್ರಮ ಎಸಗುತ್ತಿದ್ದರೆ, ಹಣವನ್ನು ರೈತರಿಗೆ ಸರಿಯಾಗಿ ನೀಡದಿದ್ದರೆ ದೂರು ಕೊಟ್ಟರೆ ಅಂಥವರ ಪರವಾನಿಗೆಯನ್ನೇ ರದ್ದುಪಡಿಸುತ್ತೇವೆ ಎಂದ ಅವರು, ರೈತರ ಪ್ರತಿಭಟನೆ ಬಗ್ಗೆ ಸರಕಾರ ಗಮನಹರಿಸುತ್ತಿದೆ. ಸಮಸ್ಯೆಗಳ ಪಟ್ಟಿ ಮಾಡಿಕೊಂಡು ಕೊಡುವಂತೆ ಸಿಎಂ ಸೂಚಿಸಿದ್ದಾರೆ. ಹೀಗಾಗಿ ನಾನೂ ಸಿಎಂ ಜೊತೆ ಚರ್ಚಿಸುತ್ತೇನೆ. ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಈ ಬಾರಿ ವಿಜಯ ಸಾಧಿಸಲಿದೆ. ಪಕ್ಷಕ್ಕೆ ಪೂರಕ ವಾತಾವರಣ ಕ್ಷೇತ್ರದಲ್ಲಿದ್ದು, ಶೀಘ್ರವೇ ಬಿಜೆಪಿ ಅಭ್ಯರ್ಥಿಯ ಘೋಷಣೆ ಮಾಡಲಾಗುವುದು. ಪಕ್ಷದಲ್ಲಿ 8ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಇದೇ ತಿಂಗಳ 25ರಂದು ದೀನ ದಯಾಳ್ ಉಪಾಧ್ಯಾಯ ಅವರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಅವರ ಧ್ಯೇಯೋದ್ದೇಶವಾದ ಅಂತ್ಯೋದಯ ಎಂಬ ಆಶಯಕ್ಕೆ ಬಿಜೆಪಿ ಬದ್ಧವಾಗಿದೆ'

-ರವಿಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News