ಕೋವಿಡ್ ನಿರ್ವಹಣೆಗೆ ಅನುದಾನ: 4,008 ಕೋಟಿ ರೂ. ಪೂರಕ ಅಂದಾಜುಗಳ ಮೊದಲ ಕಂತು ಮಂಡನೆ

Update: 2020-09-23 16:16 GMT

ಬೆಂಗಳೂರು, ಸೆ. 23: ಕೋವಿಡ್-19 ಸೋಂಕು ನಿಯಂತ್ರಣ ದೃಷ್ಟಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗೆ ಐಸಿಯು ಉಪಕರಣ, ಎನ್-95 ಮಾಸ್ಕ್, ಪಿಪಿಇ ಕಿಟ್ ಖರೀದಿಗೆ ಒಟ್ಟು 1,090.61 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಒದಗಿಸುವುದು ಸೇರಿದಂತೆ ಒಟ್ಟು 4,008.50 ಕೋಟಿ ರೂ.ಗಳನ್ನು ಒದಗಿಸುವ 2020-21ನೆ ಸಾಲಿನ ಪೂರಕ ಅಂದಾಜುಗಳ ಮೊದಲನೆ ಕಂತನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಬುಧವಾರ ವಿತ್ತೀಯ ಕಾರ್ಯಕಲಾಪದಲ್ಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು 2020-21ನೆ ಸಾಲಿ ಪೂರಕ ಅಂದಾಜುಗಳ ಮೊದಲನೆ ಕಂತಿನ ಬೇಡಿಕೆಗಳನ್ನು ಮಂಡಿಸಿದರು. ಪೂಕರ ಅಂದಾಜುಗಳಲ್ಲಿನ ಒಟ್ಟು 4,008.50 ಕೋಟಿ ರೂ.ಗಳ ಪೈಕಿ 278.58 ಕೋಟಿ ರೂ.ಗಳು ಪ್ರಭೃತ ವೆಚ್ಚ ಮತ್ತು 3,729.92 ಕೋಟಿ ರೂ.ಪರಿಷ್ಕೃತ ವೆಚ್ಚ ಸೇರಿರುತ್ತದೆ. ಸಂಚಿತ ನಿಧಿಯಿಂದ ಹೊರ ಹೋಗುವ ನಿವ್ವಳ ಮೊತ್ತ 3,971.58 ಕೋಟಿ ರೂ.ಗಳು. ಇದರಲ್ಲಿ 497.87 ಕೋಟಿ ರೂ.ಗಳು ಕೇಂದ್ರ ಸಹಾಯಕ್ಕೆ ಸಂಬಂಧಿಸಿವೆ ಎಂದು ಉಲ್ಲೇಖಿಸಲಾಗಿದೆ.

ಕೋವಿಡ್ ಪ್ರಕರಣಕ್ಕೆ ಉಪಕರಣ, ಔಷಧಿ, ಕಿಟ್‍ಗಳು, ವೆಂಟಿಲೇಟರ್ ಖರೀದಿಗೆ ಆರೋಗ್ಯ ಇಲಾಖೆಗೆ 1,090.61 ಕೋಟಿ ರೂ., ವೈದ್ಯಕೀಯ ಶಿಕ್ಷಣ ಇಲಾಖೆ ಅಡಿಯ ವಿವಿಧ ವೈದ್ಯಕೀಯ ಸಂಸ್ಥೆಗಳಿಗೆ ಐಸಿಯು ಉಪಕರಣ, ಎನ್-95 ಮಾಸ್ಕ್, ಪಿಪಿಇ ಕಿಟ್ ಖರೀದಿಗೆ 136.16 ಕೋಟಿ ರೂ., ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಶಿಕ್ಷಣ ಸಂಸ್ಥೆಯಡಿ ಬರುವ ಬ್ರಾಡ್ ವೇ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ವಹಣೆಗೆ ತಾತ್ಕಾಲಿಕವಾಗಿ ಸೃಜಿಸಿರುವ ಹುದ್ದೆಗಳಿಗೆ ವೇತನ ಪಾವತಿಗೆ 2.38 ಕೋಟಿ ರೂ. ಹಾಗೂ, ಕೋವಿಡ್ ನಿರ್ವಹಣೆಗೆ ಆರೋಗ್ಯ ಇಲಾಖೇ ಗುತ್ತಿಗೆ, ಹೊರ ಗುತ್ತಿಗೆ ವೈದ್ಯಾಧಿಕಾರಿಗಳಿಗೆ ವೇತನ ನೀಡಲು 12.90 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಮಡಿವಾಳರು, ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ಸಮುದಾಯಗಳಿಗೆ ಪರಿಹಾರ ನೀಡಲು 180 ಕೋಟಿ ರೂ.ಗಳನ್ನು ಒದಗಿಸಿರುವುದು ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕೋವಿಡ್ ನಿರ್ವಹಣೆ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಕಲ್ಪಿಸಲು ಪೂರಕ ಅಂದಾಜುಗಳಲ್ಲಿ ಹಣವನ್ನು ನೀಡಲು ಕ್ರಮ ವಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News