ರೇಸ್‍ಕೋರ್ಸ್ ಸ್ಥಳಾಂತರಕ್ಕೆ ವಿಪಕ್ಷಗಳ ಆಗ್ರಹ: ಆಡಳಿತ ಪಕ್ಷದ ಕೆಲ ಸದಸ್ಯರ ಬೆಂಬಲ

Update: 2020-09-23 16:38 GMT

ಬೆಂಗಳೂರು, ಸೆ.23: ರೇಸ್‍ಕೋರ್ಸ್ ಅನ್ನು ನಗರದ ಹೃದಯಭಾಗದಿಂದ ಹೊರ ವಲಯಕ್ಕೆ ಸ್ಥಳಾಂತರ ಮಾಡಬೇಕು ಎಂದು ವಿರೋಧ ಪಕ್ಷದ ಸದಸ್ಯರಿಂದು ವಿಧಾನಪರಿಷತ್‍ನಲ್ಲಿ ಒತ್ತಾಯಿಸಿದರು.

ಬುಧವಾರ ವಿಧಾನಪರಿಷತ್‍ನಲ್ಲಿ ಕರ್ನಾಟಕ ರೇಸ್‍ಕೋರ್ಸ್ ಗಳಿಗೆ ಪರವಾನಿಗೆ ನೀಡುವ(ತಿದ್ದುಪಡಿ) ವಿಧೇಯಕ-2020 ಕುರಿತ ಚರ್ಚೆಯ ವೇಳೆ, ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್, ಇಬ್ರಾಹಿಂ, ಎಂ.ನಾರಾಯಣಸ್ವಾಮಿ, ಜೆಡಿಎಸ್ ತಿಪ್ಪೇಸ್ವಾಮಿ, ಬಸವರಾಜ ಹೊರಟ್ಟಿ ಸೇರಿದಂತೆ ಅನೇಕರು ರೇಸ್‍ಕೋರ್ಸ್ ಸ್ಥಳಾಂತರ ಮಾಡಿ ಎಂದು ಆಗ್ರಹಿಸಿದರು. ಇದಕ್ಕೆ ಆಡಳಿತ ಪಕ್ಷದ ಕೆಲ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ರೇಸ್‍ಕೋರ್ಸ್ ಅನ್ನು ನಗರದ ಹೃದಯಭಾಗದಿಂದ ಹೊರ ವಲಯಕ್ಕೆ ಸ್ಥಳಾಂತರ ಮಾಡುವ ಸಂಬಂಧ ಹಲವು ಬಾರಿ ಚರ್ಚೆಯಾಗಿದ್ದರೂ, ಅದು ಸಾಧ್ಯವಾಗಿಲ್ಲ. ಸಿಲಿಕಾನ್ ಸಿಟಿಯು ಹಸಿರಿನ ಪ್ರಮಾಣವೇ ಕಡಿದುಕೊಳ್ಳುತ್ತಿದೆ. ಹೀಗಾಗಿ, ರೇಸ್‍ಕೋರ್ಸ್ ಸ್ಥಳಾಂತರ ಮಾಡುವ ಮೂಲಕ ಇಲ್ಲಿ ಹಸಿರಿನ ಉದ್ಯಾನವನ ನಿರ್ಮಾಣವಾಗಬೇಕು ಎಂದು ಅವರು ಹೇಳಿದರು. ಇದಕ್ಕೆ ಸಿ.ಎನ್.ನಿಂಗಪ್ಪ ಧ್ವನಿಗೂಡಿಸಿ, ನಗರದಲ್ಲಿ ಮಾಲಿನ್ಯ ಪ್ರಮಾಣ ನೋಡಿದರೆ ಹಸಿರು ವಲಯ ಹೆಚ್ಚಾಗಬೇಕಿದ್ದು, ಆ ನಿಟ್ಟಿನಲ್ಲಿ ಇದನ್ನು 20-25 ಕಿ.ಮೀ. ದೂರಕ್ಕೆ ಕಳುಹಿಸಬೇಕು ಎಂದರು.

ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, 64 ಎಕರೆ ಪ್ರದೇಶವನ್ನು ಕೇವಲ 60 ಸಾವಿರ ರೂ.ಗಳಿಗೆ ಟರ್ಫ್ ಕ್ಲಬ್‍ಗೆ ಬಿಟ್ಟುಕೊಡಲಾಗಿದೆ. ಅದನ್ನು ಸ್ಥಳಾಂತರ ಮಾಡಬೇಕು ಎಂದು ಯಾರಾದರೂ ಕೈ ಹಾಕಿದರೂ ಆ ಸರಕಾರ ಪತನವಾಗುತ್ತದೆ ಎನ್ನುತ್ತಿದ್ದಂತೆಯೇ ಮಧ್ಯಪ್ರವೇಶಿಸಿದ ಸಚಿವ ಮಾಧುಸ್ವಾಮಿ, ಕೇವಲ 300 ಜನರಿರುವ ಒಂದು ಕ್ಲಬ್ ಮೂರು ಕೋಟಿ ಜನರನ್ನು ಆಕರ್ಷಿಸುತ್ತದೆ ಎಂದರೆ ಒಪ್ಪಲಾಗದು ಎಂದು ನುಡಿದರು.

ಇದಕ್ಕೆ ಉತ್ತರಿಸಿದ ಸಚಿವ ಮಾಧುಸ್ವಾಮಿ, ಸುಪ್ರೀಂಕೋರ್ಟ್ ನಲ್ಲಿ ಪ್ರಕರಣ ಬಾಕಿಯಿರುವುದರಿಂದ ರೇಸ್‍ಕೋರ್ಸ್ ಅನ್ನು ನಗರದ ಹೊರವಲಯಕ್ಕೆ ಸ್ಥಳಾಂತರ ಮಾಡಿಸಲು ಸದ್ಯಕ್ಕೆ ಸಾಧ್ಯವಾಗುವುದಿಲ್ಲ. ಆದರೆ, ರೇಸ್‍ಕೋರ್ಸ್ ಗಳಿಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ. ಪರವಾನಿಗೆ ಇಲ್ಲದೇ ರೇಸ್ ನಡೆಸಿದರೆ ಹಾಗೂ ರೇಸ್‍ನಲ್ಲಿ ಪಾಲ್ಗೊಂಡರೆ, ನಿಯಮಗಳನ್ನು ಉಲ್ಲಂಘಿಸಿದರೆ ಪ್ರಸ್ತುತವಿರುವ ದಂಡದ ಮೊತ್ತ ಹೆಚ್ಚಿಸಿದ್ದು, 500 ಇದ್ದದ್ದನ್ನು 50 ಸಾವಿರಕ್ಕೆ ಹಾಗೂ 1 ಸಾವಿರ ಇದ್ದ ದಂಡದ ಮೊತ್ತವನ್ನು ಒಂದು ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ದಂಡದ ಮೊತ್ತವನ್ನು ಒಂದು ಸಾವಿರ ಪಟ್ಟು ಅಧಿಕ ಮಾಡಲಾಗಿದೆ. ಅದಕ್ಕಿಂತಲೂ ಹೆಚ್ಚಳ ಮಾಡಿದರೆ ಟ್ರರ್ಫ್ ಕ್ಲಬ್ ಆಡಳಿತ ಮಂಡಳಿ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತರುತ್ತದೆ. ಹೀಗಾಗಿ, ಸದ್ಯಕ್ಕಿಷ್ಟು ದಂಡದ ಪ್ರಮಾಣವಿದ್ದು, ಮುಂದಿನ ಅವಧಿಗೆ ಮತ್ತಷ್ಟು ಹೆಚ್ಚಿಸೋಣ. ದಂಡ ವಿಧಿಸಿ, ವಸೂಲಿ ಮಾಡಲು ಹಾಗೂ ನ್ಯಾಯಾಲಯದಲ್ಲಿ ತಗಾದೆಗಳನ್ನು ಎದುರಿಸಲು ಸಕ್ಷಮ ಅಧಿಕಾರಿಯನ್ನು ನಿಯೋಜನೆ ಮಾಡಲಾಗುತ್ತದೆ ಎಂದರು.

ಸಕ್ಷಮ ಅಧಿಕಾರಿ ನಿಯೋಜನೆ ಮಾಡಲಾಗುತ್ತದೆ ಎಂಬ ಹೇಳಿಕೆಗೆ ವಿಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಟರ್ಫ್ ಕ್ಲಬ್ ಚುನಾವಣೆ ಸಂಸದರ ಚುನಾವಣೆಯ ಹಾಗೆ ನಡೆಯುತ್ತದೆ ಎಂದು ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು. ಇದಕ್ಕೆ ಸಮ್ಮತಿ ಸೂಚಿಸಿದ ವಿರೋಧ ಪಕ್ಷದ ಮುಖ್ಯ ಸಚೇತಕ ಎಂ.ನಾರಾಯಣಸ್ವಾಮಿ, ಟರ್ಫ್ ಕ್ಲಬ್ ದೊಡ್ಡ ದಂಧೆಯ ತಾಣವಾಗಿದೆ. ಅಲ್ಲಿ ಒಬ್ಬರು ಸದಸ್ಯರಾಗಲು ಚುನಾವಣೆಗಾಗಿಯೇ ಕೋಟ್ಯಾಂತರ ರೂ.ಗಳು ಹಣ ವ್ಯಯ ಮಾಡಲಾಗುತ್ತಿದೆ ಎಂದು ಅಪಾದಿಸಿದರು.

ಟರ್ಫ್ ಕ್ಲಬ್‍ಗೆ ಒಬ್ಬರೇ ಅಧಿಕಾರಿ ನಿಯೋಜನೆ ಮಾಡಬಾರದು. ಅದರ ಬದಲಿಗೆ ನಾಲ್ಕೈದು ಜನರ ತಂಡವನ್ನು ನಿಯೋಜನೆ ಮಾಡಬೇಕು. ಆ ಮೂಲಕ ಅದರೊಳಗೆ ನಡೆಯುವ ಅಕ್ರಮಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಬಿ.ಕೆ.ಹರಿಪ್ರಸಾದ್ ಅಭಿಪ್ರಾಯಪಟ್ಟರು.

ಬಿಜೆಪಿ ಸದಸ್ಯೆ ತೇಜಸ್ವಿನಿ ಪ್ರತಿಕ್ರಿಯಿಸಿ, ಜೂಜು ಎಂಬುದು ದೊಡ್ಡ ವ್ಯವಸ ಹಾಗೂ ಇದು ಖಂಡನೀಯ. ಹೀಗಾಗಿ, ರೇಸ್‍ಕೋರ್ಸ್ ಅನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿ, ಆ ಸ್ಥಳದಲ್ಲಿ ವಾಹನ ಪಾರ್ಕಿಂಗ್, ಮಂತ್ರಿಗಳ ನಿವಾಸ, ದೊಡ್ಡ ಸಭಾಂಗಣವನ್ನು ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News