ಸಿಇಟಿ-2020: ಮೂಲ ದಾಖಲೆಗಳನ್ನು ಅಪ್‍ಲೋಡ್ ಮಾಡಲು ಮತ್ತೊಂದು ಅವಕಾಶ

Update: 2020-09-23 17:03 GMT

ಬೆಂಗಳೂರು, ಸೆ.23: ಸಿಇಟಿ 2020ರಲ್ಲಿ ರ‍್ಯಾಂಕ್ ಪಡೆದು ಈಗಾಗಲೆ ಪ್ರಕಟಿಸಿರುವ ವೇಳಾಪಟ್ಟಿಯಂತೆ ಸೆ.7ರಿಂದ 23ರವರೆಗೆ ನಿಗದಿತ ದಿನಾಂಕಗಳಲ್ಲಿ ಮೂಲ ದಾಖಲೆಗಳನ್ನು ಅಪ್‍ಲೋಡ್ ಮಾಡದೆ ಇರುವ ಅಭ್ಯರ್ಥಿಗಳಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಆದೇಶದಂತೆ ರಾಜ್ಯ ಪರೀಕ್ಷಾ ಪ್ರಾಧಿಕಾರವು ಮತ್ತೊಂದು ಅವಕಾಶವನ್ನು ಕಲ್ಪಿಸಿದೆ.

ಅದರಂತೆ ಅಭ್ಯರ್ಥಿಗಳು ಸೆ.24ರಿಂದ 27ರವರೆಗೆ ಮೂಲ ದಾಖಲೆಗಳನ್ನು ಪ್ರಾಧಿಕಾರದ ವೆಬ್‍ಸೈಟಿನಲ್ಲಿ ನಿಗದಿತ ಲಿಂಕ್ ಅನ್ನು ಆಯ್ಕೆ ಮಾಡಿ ಅಪ್‍ಲೋಡ್ ಮಾಡಬಹುದು. ಈಗಾಗಲೆ ದಾಖಲೆಗಳನ್ನು ಅಪ್‍ಲೋಡ್ ಮಾಡಿ ಡಿಕ್ಲರೇಷನ್ ಮಾಡದೆ ಇರುವ ಅಭ್ಯರ್ಥಿಗಳು ಸೆ.24 ರಿಂದ 27ರವರೆಗೆ ಡಿಕ್ಲರೇಷನ್ ಮಾಡಿ ದಾಖಲೆಗಳ ಅಪ್‍ಲೋಡ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ.

ಎರಡನೆ ಪಿಯುಸಿ, 12ನೆ ತರಗತಿ ಅಂಕಪಟ್ಟಿಯನ್ನು ಸಲ್ಲಿಸದೆ ಅಥವಾ ಅರ್ಹತಾ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಅಂಕಗಳು ಪರಿಷ್ಕೃತವಾದ ಹಿನ್ನೆಲೆಯಲ್ಲಿ ಸ್ಪಾಟ್ ರ‍್ಯಾಂಕ್ ಗಳಿಸಿದ ಅಭ್ಯರ್ಥಿಗಳೂ ಈ ಮೇಲಿನ ದಿನಾಂಕಗಳಲ್ಲಿ ಮೂಲ ದಾಖಲೆಗಳನ್ನು ಅಪ್‍ಲೋಡ್ ಮಾಡಬಹುದಾಗಿದೆ.

ಅಪ್‍ಲೋಡ್ ಮಾಡುವ ವಿಧಾನವನ್ನು ಪ್ರಾಧಿಕಾರದ ವೆಬ್‍ಸೈಟ್‍ನಲ್ಲಿ ಈಗಾಗಲೆ ಪ್ರಕಟಿಸಲಾಗಿದೆ. ಮೂಲ ದಾಖಲೆಗಳನ್ನು ಅಪ್‍ಲೋಡ್ ಮಾಡಲು ಇದು ಅಂತಿಮ ಅವಕಾಶವಾಗಿದೆ. ಉಳಿದಂತೆ ಸೆ.24 ರಿಂದ ಅ.1ರವರಗೆ ಮೂಲ ದಾಖಲೆಗಳನ್ನು ಅಪ್‍ಲೋಡ್ ಮಾಡುವ ವೇಳಾಪಟ್ಟಿಯಲ್ಲಿ ಯಾವುದೆ ಬದಲಾವಣೆ ಇರುವುದಿಲ್ಲ ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News