ಫೇಸ್‌ಬುಕ್ ವಿರುದ್ಧ ಬಲವಂತದ ಕ್ರಮ ತೆಗೆದುಕೊಳ್ಳುವ ಉದ್ದೇಶ ಇರಲಿಲ್ಲ: ಸುಪ್ರೀಂ ಕೋರ್ಟ್‌ಗೆ ದಿಲ್ಲಿ ವಿಧಾನ ಸಭೆ

Update: 2020-09-23 17:50 GMT

ಹೊಸದಿಲ್ಲಿ, ಸೆ. 23: ಫೇಸ್‌ಬುಕ್ ಇಂಡಿಯಾದ ಉಪಾಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಅಜಿತ್ ಮೋಹನ್ ಅವರಿಗೆ ಆರೋಪಿ ಎಂದು ಸಮನ್ಸ್ ನೀಡಿಲ್ಲ ಹಾಗೂ ಫೇಸ್‌ಬುಕ್ ಕಂಪೆನಿ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳುವ ಉದ್ದೇಶ ಇರಲಿಲ್ಲ ಎಂದು ದಿಲ್ಲಿ ವಿಧಾನ ಸಭೆ ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. 

ಫೆಬ್ರವರಿಯಲ್ಲಿ ನಡೆದ ದಿಲ್ಲಿ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿ ದಿಲ್ಲಿ ವಿಧಾನ ಸಭೆಯ ಶಾಂತಿ ಹಾಗೂ ಸೌಹಾರ್ದ ಸಮಿತಿ ಮುಂದೆ ಹಾಜರಾಗುವಂತೆ ಜಾರಿಗೊಳಿಸಲಾದ ನೋಟಿಸನ್ನು ಪ್ರಶ್ನಿಸಿ ಫೇಸ್‌ಬುಕ್ ಇಂಡಿಯಾ ಹಾಗೂ ಅಜಿತ್ ಮೋಹನ್ ಸಲ್ಲಿಸಿದ ಮನವಿಯ ವಿಚಾರಣೆಯನ್ನು ನ್ಯಾಯಾಲಯ ಬುಧವಾರ ನಡೆಸಿತು. ದಿಲ್ಲಿ ವಿಧಾನ ಸಭೆ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾದ ಹಿರಿಯ ನ್ಯಾಯವಾದಿ ಅಭಿಷೇಕ್ ಸಿಂಘ್ವಿ, ಫೇಸ್‌ಬುಕ್ ದುರ್ಬಳಕೆ ತಡೆಯುವ ವ್ಯವಸ್ಥೆ ರೂಪಿಸಲು ಫೇಸ್‌ಬುಕ್‌ನ ಸಲಹೆ ಪಡೆಯಲು ಸಾಕ್ಷಿಯಾಗಿ ಮೋಹನ್ ಅವರಿಗೆ ನೋಟಿಸು ಜಾರಿಗೊಳಿಸಲಾಗಿತ್ತು ಎಂದರು. ‘‘ಅವರು ಸಾಕ್ಷಿಯಾಗಿ ಹಾಜರಾಗಲು ನೋಟಿಸು ನೀಡಲಾಗಿತ್ತು. ಆರೋಪಿಯಾಗಿ ಅಲ್ಲ. ಫೇಸ್‌ಬುಕ್ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳುವ ಉದ್ದೇಶ ಇರಲಿಲ್ಲ (ಕೋಮು ಹಿಂಸಾಚಾರಕ್ಕೆ ಸಂಬಂಧಿಸಿ)’’ ಎಂದು ಸಿಂಘ್ವಿ ಹೇಳಿದರು. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಅನಿರುದ್ಧ ಬೋಸ್ ಹಾಗೂ ಕೃಷ್ಣ ಮುರಳಿ ಅವರನ್ನು ಒಳಗೊಂಡ ನ್ಯಾಯಪೀಠ, ಸಮನ್ಸ್‌ನ ಪ್ರತಿಕೂಲತೆಯನ್ನು ಗುರುತಿಸಿತು ಹಾಗೂ ಈ ವಿಷಯದ ಬಗ್ಗೆ ಮತ್ತೆ ವಿಚಾರಣೆ ನಡೆಸದಂತೆ ದಿಲ್ಲಿ ವಿಧಾನ ಸಭೆ ಸಮಿತಿಗೆ ಆದೇಶ ನೀಡಿತು. ಮೋಹನ್ ಅವರ ಮೇಲ್ಮನವಿಗೆ ವಿಸ್ತೃತ ಪ್ರತಿಕ್ರಿಯೆ ಸಲ್ಲಿಸುವಂತೆ ಸಮಿತಿಗೆ ತಿಳಿಸಿದ ನ್ಯಾಯಪೀಠ, ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News