ಕಾರ್ಯವ್ಯಾಪ್ತಿ ಮೀರಿ ವಾಣಿಜ್ಯ ಮಳಿಗೆ ಒಡೆದ ಆರೋಪ: ನೋಡಲ್ ಅಧಿಕಾರಿ ವಿರುದ್ಧ ಪ್ರತಿಭಟನೆ

Update: 2020-09-23 17:53 GMT

ಬೆಂಗಳೂರು, ಸೆ.23: ಜೆ.ಸಿ. ನಗರದ ನೋಡಲ್ ಅಧಿಕಾರಿ ಎಸ್.ಜಿ. ರವೀಂದ್ರ ಅವರು ತಮ್ಮ ಕಾರ್ಯವ್ಯಾಪ್ತಿ ಮೀರಿ ಮನೆಗಳು ಮತ್ತು ವಾಣಿಜ್ಯ ಮಳಿಗೆ ಒಡೆದುಹಾಕಲು ಮುಂದಾಗಿದ್ದಾರೆ ಎಂದು ಸ್ಥಳೀಯರು ರಸ್ತೆ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ ಜೆ.ಸಿ. ನಗರದ ನೋಡಲ್ ಅಧಿಕಾರಿ (ಕಲ್ಯಾಣ ವಿಭಾಗ ವಿಶೇಷ ಆಯುಕ್ತ) ಎಸ್.ಜೆ. ರವೀಂದ್ರ ಅವರು ಕೆಲವು ಕಟ್ಟಡ ಮತ್ತು ವಾಣಿಜ್ಯ ಮಳಿಗೆಗಳನ್ನು ಅನಧಿಕೃತವಾಗಿವೆ ಎಂದು ತೆರವುಗೊಳಿಸಲು ಮುಂದಾಗಿದ್ದಾರೆ. ಅಂಗವಿಕಲ ವ್ಯಕ್ತಿ ಕಳೆದ 10 ವರ್ಷಕ್ಕಿಂತ ಅಧಿಕ ಕಾಲ ವ್ಯಾಪಾರ ಮಾಡುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳು ಏಕಾಏಕಿ ಅಂಗಡಿ ಪರವಾನಗಿ ಕೇಳಿದ್ದು, ಪರವಾನಗಿ ಪತ್ರವಿಲ್ಲದ ಕಾರಣ ಮಳಿಗೆ ಒಡೆದುಹಾಕಲು ಮುಂದಾಗಿದ್ದಾರೆ. ಆಗ ಸಾರ್ವಜನಿಕರು ಜಮಾಯಿಸಿ ವಾಣಿಜ್ಯ ಮಳಿಗೆ ಒಡೆಯುವುದನ್ನು ತಡೆದು, ಪಾಲಿಕೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ, ನೋಡಲ್ ಅಧಿಕಾರಿಯನ್ನು ಕೂಡಲೆ ವಾಪಸ್ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಶಾಸಕ ಭೈರತಿ ಸುರೇಶ್ ಭೇಟಿ: ಜನರು ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಶಾಸಕ ಭೈರತಿ ಸುರೇಶ್ ಅವರು, ವಾಣಿಜ್ಯ ಮಳಿಗೆ ತೆರವು ಮಾಡುವುದನ್ನು ತಡೆದರು. ನಂತರ, ನೋಡಲ್ ಅಧಿಕಾರಿ ಎಸ್.ಜೆ. ರವೀಂದ್ರ ಅವರೊಂದಿಗೆ ಮಾತನಾಡಿ, ನೀವು ಕೇವಲ ನೋಡಲ್ ಅಧಿಕಾರಿಯಾಗಿದ್ದು, ಸಮಸ್ಯೆ ಆಲಿಸಿ ಪರಿಹಾರ ಒದಗಿಸಬೇಕು. ಅದನ್ನು ಬಿಟ್ಟು ತೆರವು ಮಾಡಲು ನಿಮಗೆ ಯಾರು ಅಧಿಕಾರ ಕೊಟ್ಟಿದ್ದಾರೆ. ನೀವು ತೆರವು ಮಾಡುವ ಮುನ್ನ ಜನರ ಪ್ರತಿಭಟನೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಿಬಿಎಂಪಿ ನೋಡಲ್ ಅಧಿಕಾರಗಳು ಸಮಸ್ಯೆ ಆಲಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಕಳೆದ 7 ತಿಂಗಳಿಂದ ಕೊರೋನ ಸೋಂಕಿನಿಂದ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ತೊಂದರೆ ನೀಡಿದರೆ ಸುಮ್ಮನಿರುವುದಿಲ್ಲ. ಸಾರ್ವಜನಿಕರ ಮೇಲೆ ಅಧಿಕಾರಿಗಳಿಂದ ದರ್ಪ ತೋರಿಸುವ ಬಿಜೆಪಿ ಸರಕಾರರದ ಕ್ರಮವನ್ನು ನಾವು ದಿಕ್ಕರಿಸುತ್ತೇವೆ.

-ಭೈರತಿ ಸುರೇಶ್, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News