ನೀವು ಬಿಸ್ಕಿಟ್‌ ನ್ನು ಚಹಾದಲ್ಲಿ ಅದ್ದಿ ತಿನ್ನುತ್ತೀರಾ? ಹಾಗಿದ್ದರೆ ಆ ಅಭ್ಯಾಸವನ್ನು ಮೊದಲು ಬಿಡಿ

Update: 2020-09-23 18:29 GMT

ಚಹಾಕ್ಕೆ ಬಿಸ್ಕಿಟ್ ಒಳ್ಳೆಯ ಜೊತೆಯಾಗಿದೆ. ನೀವು ಒಪ್ಪಿಕೊಳ್ಳಿ ಇಲ್ಲವೇ ಬಿಡಿ,ನಾವೆಲ್ಲ ಬಿಸ್ಕಿಟ್‌ನ್ನು ಚಹಾದಲ್ಲಿ ಅದ್ದಿ ತಿನ್ನುವುದನ್ನು ಇಷ್ಟ ಪಡುತ್ತೇವೆ ಎನ್ನುವುದಂತೂ ನಿಜ. ಬಿಸ್ಕಿಟ್ ಜೊತೆಯಲ್ಲಿ ಸೇವಿಸಿದರೆ ಚಹಾ ತೃಪ್ತಿಯನ್ನು ಕೊಡುತ್ತದೆ,ಆದರೆ ಈ ಸಣ್ಣ ಖುಷಿ ನಮ್ಮ ಆರೋಗ್ಯಕ್ಕೆ ಹೆಚ್ಚಿನ ಹಾನಿಯನ್ನುಂಟು ಮಾಡಬಹುದು. ಚಹಾ ಮತ್ತು ಬಿಸ್ಕಿಟ್ ಸಂಯೋಜನೆ ಹೆಚ್ಚಿನ ಕ್ಯಾಲರಿಗಳನ್ನು ಒಳಗೊಂಡಿದ್ದು ನಮ್ಮ ಶರೀರದ ತೂಕವನ್ನು ಹೆಚ್ಚಿಸಬಹುದು.

 ನೀವು ಚಹಾ ಮತ್ತು ಬಿಸ್ಕಿಟ್ ಸಂಯೋಜನೆಯ ಅಭಿಮಾನಿಯಾಗಿದ್ದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎನ್ನುವುದೂ ನಿಮಗೆ ಗೊತ್ತಿರಬೇಕು. ಏಕೆಂದರೆ ಇದರಲ್ಲಿರುವ ಹೆಚ್ಚಿನ ಕ್ಯಾಲರಿಗಳು ನಿಮ್ಮ ದೈನಂದಿನ ಕ್ಯಾಲರಿ ಸೇವನೆ ಲೆಕ್ಕಕ್ಕೆ ಸೇರುತ್ತವೆ. ನೀವು ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದು,ನೀವೇನು ತಿನ್ನುತ್ತಿದ್ದೀರಿ ಎನ್ನುವುದರ ಮೇಲೆ ಗಮನವಿರಿಸುವ ವ್ಯಕ್ತಿಯಾಗಿದ್ದರೆ ಚಹಾ-ಬಿಸ್ಕಿಟ್ ಕ್ಯಾಲರಿಗಳನ್ನೂ ನಿಮ್ಮ ಕೋಷ್ಟಕದಲ್ಲಿ ಸೇರಿಸಿಕೊಳ್ಳಬೇಕಾಗುತ್ತದೆ. ಗೋದಿಯಿಂದ ತಯಾರಿಸಿದ ಬಿಸ್ಕಿಟ್‌ಗಳು ಹೆಚ್ಚಿನ ಕ್ಯಾಲರಿಗಳನ್ನು ಹೊಂದಿರುತ್ತವೆ. ಹೀಗಾಗಿ ಅವುಗಳಿಗಿಂತ ಗೋದಿಯ ರಸ್ಕ್ ಉತ್ತಮ ಆಯ್ಕೆಯಾಗುತ್ತದೆ.

ಬಿಸ್ಕಿಟ್ ಆರೋಗ್ಯಕರವೇ ಅನಾರೋಗ್ಯಕರವೇ ಎನ್ನುವುದನ್ನು ನಿರ್ಧರಿಸುವ ಮೂರು ಪ್ರಮುಖ ಅಂಶಗಳು

 * ಹಿಟ್ಟು: ಬಿಸ್ಕಿಟ್‌ನ್ನು ಆರೋಗ್ಯಕರ ಎಂದು ಬಿಂಬಿಸಲು ಹೆಚ್ಚಿನ ತಯಾರಕರು ಘಟಕಗಳ ಪಟ್ಟಿಯಲ್ಲಿ ‘ರಿಫೈನ್ಡ್ ವ್ಹೀಟ್ ಫ್ಲೋರ್’ ಎಂದು ಉಲ್ಲೇಖಿಸಿರುತ್ತಾರೆ. ಗೋದಿ ಮತ್ತು ರಿಫೈನ್ಡ್ ಅಥವಾ ಸಂಸ್ಕರಿತ ಗೋದಿ ನಡುವಿನ ವ್ಯತ್ಯಾಸ ಗೊತ್ತಿಲ್ಲದವರು ತಯಾರಕರ ಈ ಬಲೆಯಲ್ಲಿ ಬೀಳುತ್ತಾರೆ. ಸಂಸ್ಕರಿತ ಗೋದಿ ಹಿಟ್ಟು ಮೈದಾ ಅಲ್ಲದೆ ಬೇರೇನೂ ಅಲ್ಲ ಮತ್ತು ಮೈದಾ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ಸಾಮಾನ್ಯವಾಗಿ ಹೆಚ್ಚಿನವರಿಗೆ ಗೊತ್ತಿದೆ. ರಿಫೈನಿಂಗ್ ಪ್ರಕ್ರಿಯೆ ವೇಳೆ ಗೋದಿಯು ತನ್ನಲ್ಲಿಯ ನಾರು ಮತ್ತು ಪೋಷಕಾಂಶಗಳನ್ನು ಕಳೆದುಕೊಂಡು ನಿಸ್ಸತ್ವಗೊಳ್ಳುತ್ತದೆ. ಇದನ್ನು ಸೇವಿಸಿದಾಗ ಜೀರ್ಣಾಂಗದ ಮೇಲೆ ಹೆಚ್ಚಿನ ಕಾರ್ಯಭಾರ ಬೀಳುತ್ತದೆ ಮತ್ತು ಹೊಟ್ಟೆಯುಬ್ಬರ, ವಾಯು,ಜಠರಗರುಳಿನ ಉರಿಯೂತ,ಮಲಬದ್ಧತೆ ಮತ್ತು ಅನಿಯಮಿತ ಕರುಳು ಚಲನವಲನಗಳಿಗೆ ಕಾರಣವಾಗುತ್ತದೆ. ಅಲ್ಲದೆ ಮೈದಾ ಶರೀರದ ತೂಕವನ್ನೂ ಹೆಚ್ಚಿಸುತ್ತದೆ.

* ಸಕ್ಕರೆ: ಬಿಸ್ಕಿಟ್ ಸಿಹಿಯಾಗಿರುವುದಕ್ಕೆ ಅದರಲ್ಲಿರುವ ಸಕ್ಕರೆ ಕಾರಣವಾಗಿದೆ. ಅತಿ ಸಿಹಿಯಾದ ಬಿಸ್ಕಿಟ್ ಎಂದರೆ ಅತಿಯಾದ ಸಕ್ಕರೆ ಎಂದೇ ಅರ್ಥ. ಉದಾಹರಣೆಗೆ ಗ್ಲುಕೋಸ್ ಬಿಸ್ಕಿಟ್‌ಗಳು ಇತರ ಬಿಸ್ಕಿಟ್‌ಗಳಿಗಿಂತ ಹೆಚ್ಚು ಸಕ್ಕರೆಯನ್ನು ಒಳಗೊಂಡಿರುತ್ತವೆ. ಅಪರೂಪಕ್ಕೊಮ್ಮೆ ಸಿಹಿ ಬಿಸ್ಕಿಟ್‌ಗಳನ್ನು ತಿಂದರೆ ಪರವಾಗಿಲ್ಲ,ಆದರೆ ಯಾವಾಗಲೂ ತಿನ್ನುತ್ತಿದ್ದರೆ ಕಾಲಕ್ರಮೇಣ ರಕ್ತದಲ್ಲಿಯ ಸಕ್ಕರೆ ಮಟ್ಟದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ತೂಕ ಏರಿಕೆ,ಬೊಜ್ಜು ಮತ್ತು ಮಧುಮೇಹ ಇತ್ಯಾದಿಗಳ ಅಪಾಯವನ್ನು ಹೆಚ್ಚಿಸುತ್ತದೆ.

* ಹೈಡ್ರೋಜನೀಕೃತ ಕೊಬ್ಬು: ಬಿಸ್ಕಿಟ್‌ಗಳ ಜೀವಿತಾವಧಿಯನ್ನು ಹೆಚ್ಚಿಸಲು ಸಂರಕ್ಷಕವಾಗಿ ಹೈಡ್ರೋಜನೀಕೃತ ಕೊಬ್ಬು ಅಥವಾ ಟ್ರಾನ್ಸ್ ಫ್ಯಾಟ್ ಅನ್ನು ಸೇರಿಸಲಾಗುತ್ತದೆ. ಹೀಗಾಗಿ ತಿಂಗಳುಗಟ್ಟಲೆ ಬಿಸ್ಕಿಟ್‌ಗಳನ್ನಿಟ್ಟು ತಿನ್ನುತ್ತಿರಬಹುದು. ಟ್ರಾನ್ಸ್ ಫ್ಯಾಟ್ ಎಲ್‌ಡಿಎಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಇದು ಹೃದ್ರೋಗಗಳು ಹಾಗೂ ಮಧುಮೇಹದ ಅಪಾಯವನ್ನು ಅಧಿಕಗೊಳಿಸುತ್ತದೆ.

ಗ್ಲುಕೋಸ್ ಬಿಸ್ಕಿಟ್‌ಗಳು ಆರೋಗ್ಯಕರ ಎನ್ನುವುದು ಕೇವಲ ಮಿಥ್ಯೆಯಾಗಿದೆ. ವಾಸ್ತವದಲ್ಲಿ ಗ್ಲುಕೋಸ್ ಬಿಸ್ಕಿಟ್‌ಗಳು ಇತರ ಬಿಸ್ಕಿಟ್‌ಗಳಿಗಿಂತ ಹೆಚ್ಚು ಹಾನಿಕರವಾಗಿವೆ. ಮಕ್ಕಳ ಆರೋಗ್ಯದ ಮೇಲೆ ಗ್ಲುಕೋಸ್ ಬಿಸ್ಕಿಟ್‌ನ ದುಷ್ಪರಿಣಾಮಗಳು

 ಈ ವರೆಗೆ ಗ್ಲುಕೋಸ್ ಬಿಸ್ಕಿಟ್‌ಗಳು ಆರೋಗ್ಯಕರ ಎಂದು ನಾವೆಲ್ಲ ಹೊಗಳುತ್ತಿದ್ದೆವು. ದಶಕಗಳಿಂದಲೂ ಅಸ್ತಿತ್ವದಲ್ಲಿರುವ ಒಂದು ಗ್ಲುಕೋಸ್ ಬಿಸ್ಕಿಟ್‌ನ ಬ್ರಾಂಡ್ ಇದೆ ಮತ್ತು ಜನರು ಈಗಲೂ ಅದನ್ನು ಚಹಾದೊಂದಿಗೆ ಸೇವಿಸುವುದನ್ನು ಇಷ್ಟ ಪಡುತ್ತಾರೆ. ನೀವು ನಿಮ್ಮ ಮಕ್ಕಳಿಗೆ ಹಾಲಿನ ಜೊತೆಗೆ ಗ್ಲುಕೋಸ್ ಬಿಸ್ಕಿಟ್ ನೀಡುತ್ತಿದ್ದರೆ ಎಚ್ಚರಿಕೆಯಿರಲಿ,ಅದು ನಿಮ್ಮ ಮಕ್ಕಳ ಆರೋಗ್ಯಕ್ಕೆ ಹಾನಿಯನ್ನ್ನುಂಟು ಮಾಡಬಲ್ಲದು.

 ಕಳಪೆ ಪೋಷಕಾಂಶ ವೌಲ್ಯ: ಬೆಳೆಯುವ ವಯಸ್ಸಿನಲ್ಲಿ ಮಕ್ಕಳಿಗೆ ಸೂಕ್ತ ಬೆಳವಣಿಗೆಗಾಗಿ ಗರಿಷ್ಠ ಪ್ರಮಾಣದಲ್ಲಿ ಪೋಷಕಾಂಶಗಳ ಅಗತ್ಯವಿರುತ್ತದೆ. ನೀವು ಅವರಿಗೆ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರಗಳನ್ನು ನೀಡಬೇಕೇ ಹೊರತು ಗ್ಲುಕೋಸ್ ಬಿಸ್ಕಿಟ್‌ಗಳನ್ನಲ್ಲ. ಅವುಗಳಲ್ಲಿ ಸಂಸ್ಕರಿತ ಹಿಟ್ಟು,ಟ್ರಾನ್ಸ್ ಫ್ಯಾಟ್,ಸಕ್ಕರೆ ಮತ್ತು ಸಂರಕ್ಷಕ ಇವೆಲ್ಲವೂ ಇರುತ್ತವೆ ಮತ್ತು ಇವು ಮಕ್ಕಳ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತವೆ.

ಪಚನ ಸಮಸ್ಯೆಗಳು: ಗ್ಲುಕೋಸ್ ಬಿಸ್ಕಿಟ್‌ಗಳ ಸೇವನೆಯಿಂದಾಗಿ ನಿಮ್ಮ ಮಗುವು ಆಗಾಗ್ಗೆ ಶೌಚಾಲಯಕ್ಕೆ ಓಡುವುದನ್ನು ಅಥವಾ ಹೊಟ್ಟೆನೋವು ಎಂದು ದೂರುವುದನ್ನು ನೀವೆಂದಾದರೂ ಗಮನಿಸಿದ್ದೀರಾ? ಗ್ಲುಕೋಸ್ ಬಿಸ್ಕಿಟ್‌ಗಳಲ್ಲಿ ಕರುಳಿನ ಚಲನವಲನವನ್ನು ಕ್ರಮಬದ್ಧಗೊಳಿಸಲು ನೆರವಾಗುವ ನಾರು ಇರುವುದಿಲ್ಲವಾದ್ದರಿಂದ ಅವುಗಳ ಸೇವನೆ ಜೀರ್ಣಾಂಗದ ಮೇಲೆ ದುಷ್ಪರಿಣಾಮಗಳನ್ನುಂಟು ಮಾಡುತ್ತದೆ. ಮಕ್ಕಳ ಜೀರ್ಣಾಂಗ ಇನ್ನೂ ಬೆಳೆಯುವ ಹಂತದಲ್ಲಿರುವುದರಿಂದ ಈ ಬಿಸ್ಕಿಟ್‌ಗಳನ್ನು ಜೀರ್ಣಿಸಿಕೊಳ್ಳುವುದು ಅವರಿಗೆ ಕಷ್ಟವಾಗುತ್ತದೆ.

ನರಗಳ ಆರೋಗ್ಯದ ಸಮಸ್ಯೆ: ಟ್ರಾನ್ಸ್ ಫ್ಯಾಟ್ ಶರೀರದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ನ್ನು ಹೆಚ್ಚಿಸುತ್ತದೆ ಮತ್ತು ಇದು ಮಕ್ಕಳಲ್ಲಿ ನರರೋಗಗಳು, ದೃಷ್ಟಿಸಮಸ್ಯೆಗಳು,ಬೊಜ್ಜು,ಮಧುಮೇಹ ಮತ್ತು ಅಲರ್ಜಿಗಳಿಗೆ ಕಾರಣವಾಗಬಹುದು. ನಿಮ್ಮ ಮಕ್ಕಳಿಗೆ ಯಾವುದೇ ಬಿಸ್ಕಿಟ್ ನೀಡುವ ಮುನ್ನ ಅದರಲ್ಲಿ ಟ್ರಾನ್ಸ್ ಫ್ಯಾಟ್ ಇದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಪ್ಯಾಕ್ ಮೇಲಿನ ಲೇಬಲ್ ಪರಿಶೀಲಿಸಿ.

ಇನ್ನು ಮುಂದೆ ನೀವು ಚಹಾ ಮತ್ತು ಬಿಸ್ಕಿಟ್‌ಗಾಗಿ ಹಾತೊರೆಯುತ್ತಿರುವಾಗ ನಿಮ್ಮ ಒಳ್ಳೆಯದಕ್ಕಾಗಿ ಈಗ ಓದಿರುವುದನ್ನು ನೆನಪಿಸಿಕೊಳ್ಳಿ,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News