ಕೇಂದ್ರದ ಬಿಜೆಪಿ ಸರಕಾರಕ್ಕೆ ಗೋಮೂತ್ರ ಅಗತ್ಯ ವಸ್ತುವೇ: ಎಸ್‍ಡಿಪಿಐ ಪ್ರಶ್ನೆ

Update: 2020-09-24 12:40 GMT

ಬೆಂಗಳೂರು, ಸೆ.24: ಈರುಳ್ಳಿ, ದ್ವಿದಳ ಧಾನ್ಯಗಳು ಸೇರಿದಂತೆ ಇನ್ನಿತರೆ ಆಹಾರ ಪದಾರ್ಥಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಗಿಡುವ ಮಸೂದೆ ಜಾರಿಗೊಳಿಸಿರುವ ಕೇಂದ್ರದ ಬಿಜೆಪಿ ಸರಕಾರಕ್ಕೆ ಗೋಮೂತ್ರ ಅಗತ್ಯ ವಸ್ತುವೇ ಎಂದು ಎಸ್‍ಡಿಪಿಐ ಪ್ರಶ್ನಿಸಿದೆ.

ಗುರುವಾರ ನಗರದ ಹಮೀದ್ ಶಾ ಕಟ್ಟಡದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ಕಾರ್ಯದರ್ಶಿ ಆಫ್ಸರ್ ಕೊಡ್ಲಿಪೇಟೆ, ದ್ವಿದಳ ಧಾನ್ಯಗಳು, ಎಣ್ಣೆಕಾಳು, ಖಾದ್ಯ ತೈಲ, ಈರುಳ್ಳಿ  ಮತ್ತು ಆಲೂಗಡ್ಡೆಯನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಗಿಡುವ ತಿದ್ದುಪಡಿ ಮಸೂದೆ ಅನ್ನು ಕೇಂದ್ರ ಸರಕಾರ ಜಾರಿಗೆ ಕೈಹಾಕಿರುವುದು ಸರಿಯಲ್ಲ. ಅಲ್ಲದೆ, ಈ ಸರಕಾರಕ್ಕೆ, ಪಕ್ಷಕ್ಕೆ ಗೋಮೂತ್ರ ಅಥವಾ ಸಗಣಿ ಅಗತ್ಯ ವಸ್ತುವೇ ಎಂದು ವಾಗ್ದಾಳಿ ನಡೆಸಿದರು.

ಪಕ್ಷದ ಉಪಾಧ್ಯಕ್ಷ ಮಜೀದ್ ಖಾನ್ ಮಾತನಾಡಿ, ರೈತರ ಸಮಸ್ಯೆಗಳನ್ನು ಪರಿಹರಿಸುವ ಬದಲಿಗೆ ಇನ್ನಷ್ಟು ಬಡತನಕ್ಕೆ ತಳ್ಳುವ ಹಾಗೂ ಕೃಷಿ ಭೂಮಿಯನ್ನು ಬಂಡವಾಳಶಾಹಿಗಳು ಖರೀದಿಸಲು ಅವಕಾಶ ಮಾಡಿಕೊಡುವ ಕೇಂದ್ರ ಹಾಗೂ ರಾಜ್ಯ ಸರಕಾರದ ನೀತಿ ಖಂಡನೀಯ ಎಂದರು.

ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರಗಳು ಕೃಷಿ ಕ್ಷೇತ್ರವನ್ನು ಕಾರ್ಪೋರೇಟೀಕರಣ ಮಾಡಲು ಹೊರಟಿರುವುದರೊಂದಿಗೆ ರೈತರನ್ನು ಶಾಶ್ವತವಾಗಿ ಜೀತದಾಳುಗಳನ್ನಾಗಿಸಲು ಪಣತೊಟ್ಟಿವೆ. ಗ್ರಾಮೀಣ ಪ್ರದೇಶಗಳ ಜನರು ಹಾಗೂ ರೈತರ ಬದುಕಿನ ಜೊತೆಗೆ ಚೆಲ್ಲಾಟವಾಡುವ ಬಿಜೆಪಿ ಸರಕಾರಗಳ ಈ ದುರ್ನೀತಿಯ ವಿರುದ್ಧ ಎಸ್‍ಡಿಪಿಐ ಪಕ್ಷ ಇತರೆ ಸಮಾನ ಮನಸ್ಕರ ಜೊತೆಗೂಡಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿಯಲ್ಲದೆ, ವಿದ್ಯುತ್ ಕಾಯ್ದೆಗೂ ತಿದ್ದುಪಡಿ ತಂದಿರುವ ರಾಜ್ಯ ಸರಕಾರ ರೈತರ ಗಾಯದ ಮೇಲೆ ಬರೆ ಎಳೆದಿದೆ. ಕನಿಷ್ಠ ಬೆಂಬಲ ಬೆಲೆಯ ವ್ಯವಸ್ಥೆಯನ್ನು ಬುಡಮೇಲುಗೊಳಿಸಿ ಖಾಸಗಿ ಉದ್ಯಮಿಗಳಿಗೆ ಕೃಷಿ ಉತ್ಪನ್ನ ಮಂಡಿ ಮತ್ತು ಮಾರುಕಟ್ಟೆಗಳ ಮೇಲೆ ಹಿಡಿತ ಸಾಧಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚರ್, ಮುಖಂಡ ಅಬ್ರಾರ್ ಆಹಮದ್, ಬಿಬಿಎಂಪಿ ಮಾಜಿ ಸದಸ್ಯ ಮುಜಾಹಿದ್ ಪಾಷ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News