ಕಸ ವಿಂಗಡಿಸದಿದ್ದರೆ ದಿನಕ್ಕೆ ಸಾವಿರ ರೂ. ದಂಡ: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

Update: 2020-09-24 13:15 GMT

ಬೆಂಗಳೂರು, ಸೆ.24: ಪ್ರತ್ಯೇಕವಾಗಿ ಕಸ ಸಂಗ್ರಹ ಯೋಜನೆ ಜಾರಿಯಾಗುತ್ತಿರುವ ವಾರ್ಡ್ ಗಳಲ್ಲಿ ಹಸಿ, ಒಣ ಹಾಗು ವೈದ್ಯಕೀಯ ತ್ಯಾಜ್ಯವನ್ನು ಪ್ರತ್ಯೇಕಿಸಿ ನೀಡದಿದ್ದರೆ ದಿನಕ್ಕೆ 1 ಸಾವಿರ ರೂ. ದಂಡ ವಿಧಿಸುವಂತೆ ಘನತ್ಯಾಜ್ಯ ನಿರ್ವಹಣೆಯ ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಸೂಚನೆ ನೀಡಿದರು.

ನಗರದ ಗಾಳಿ ಆಂಜನೇಯ ಸ್ವಾಮಿ ದೇವಾಲಯ ವಾರ್ಡ್ ಹಾಗೂ ದೀಪಾಂಜಲಿ ನಗರ ವಾರ್ಡ್‍ಗಳಲ್ಲಿ ಪ್ರತ್ಯೇಕ ಹಸಿಕಸ ಸಂಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಗರದಲ್ಲಿ ಕಸ ವಿಂಗಡಣೆ ಮಾಡದೆ ನೀಡುವರಿಗೆ ಒಂದು ಸಾವಿರ ರೂ. ದಂಡ ವಿಧಿಸುವ ಹಾಗೂ ಬಂಧಿಸುವುದಕ್ಕೂ ಅವಕಾಶ ಇದೆ ಎಂದು ತಿಳಿಸಿದರು.

ಕಸ ವಿಂಗಡಣೆ ಮಾಡದೆ ಇರುವ ಮನೆಗಳನ್ನು ಗುರುತಿಸಿ, ತ್ಯಾಜ್ಯ ಸಂಪರ್ಕ ಕಾರ್ಯಕರ್ತೆಯರ ಮೂಲಕ ಈ ನಿರ್ದಿಷ್ಟ ಮನೆಗಳಲ್ಲಿನ ಸಾರ್ವಜನಿಕರಿಗೆ ಕಸ ವಿಂಗಡಣೆ ಸಂಬಂಧ ಜಾಗೃತಿ ಮೂಡಿಸಬೇಕು. ಈ ವೇಳೆಯೂ ಕಸ ವಿಂಗಡಣೆ ಮಾಡದೆ ಇದ್ದರೆ, ಮಾರ್ಷಲ್‍ಗಳ ಮೂಲಕ ಒಂದು ಸಾವಿರ ರೂ. ದಂಡ ವಿಧಿಸಬೇಕು ಎಂದು ನಿರ್ದೇಶನ ನೀಡಿದರು.

ಹೊಸ ಯೋಜನೆಯ ಪ್ರಕಾರ ನಿರ್ದಿಷ್ಟ ವೇಳೆಯಲ್ಲಿ ಕಸ ಸಂಗ್ರಹ ಮಾಡಬೇಕು. ಬ್ಲಾಕ್ ಸ್ಪಾಟ್‍ಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬಾರದು. ಮನೆ, ಮನೆಯಿಂದ ಸಂಗ್ರಹಿಸುವ ಆಟೋದಿಂದ ನೇರವಾಗಿ ಕಾಂಪ್ಯಾಕ್ಟರ್ ಗೆ ತುಂಬಬೇಕು ಎಂದು ಪಾಲಿಕೆ ಸಿಬ್ಬಂದಿ ಹಾಗು ಪೌರಕಾರ್ಮಿಕರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News