ಖಾಸಗಿ ಆಸ್ಪತ್ರೆಗಳ ಲೂಟಿ ನಿಯಂತ್ರಿಸಲು ಸಾಧ್ಯವಿಲ್ಲವೇ?: ರಾಜ್ಯ ಸರಕಾರದ ವಿರುದ್ಧ ಶಾಸಕ ಯತ್ನಾಳ್ ಆಕ್ರೋಶ

Update: 2020-09-24 14:12 GMT

ಬೆಂಗಳೂರು, ಸೆ. 24: `ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ದಿನದಿಂದ ದಿನಕ್ಕೆ ಮಿತಿ ಮೀರುತ್ತಿದ್ದು, ವಾರದಲ್ಲಿ ಎರಡು ದಿನ ಪುನಃ ಲಾಕ್‍ಡೌನ್ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ' ಎಂದು ಹೇಳಿದ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, `ಕೋವಿಡ್ ಚಿಕಿತ್ಸೆ ನೆಪದಲ್ಲಿ ಖಾಸಗಿ ಆಸ್ಪತ್ರೆಗಳ ಬೇಕಾಬಿಟ್ಟಿ ಲೂಟಿಗೆ ರಾಜ್ಯ ಸರಕಾರ ಕಡಿವಾಣ ಹಾಕಬೇಕು' ಎಂದು ತಮ್ಮ ಪಕ್ಷದ ನೇತೃತ್ವದ ಸರಕಾರದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಕೇಂದ್ರದ ಹಾಲಿ ಸಚಿವ ಸುರೇಶ್ ಅಂಗಡಿ ಅವರ ಸಂತಾಪ ಸೂಚನೆ ನಿರ್ಣಯವನ್ನು ಬೆಂಬಲಿಸಿ ಮಾತನಾಡುತ್ತಿದ್ದ ವೇಳೆ, 'ನನಗೂ ಕೊರೋನ ಸೋಂಕು ತಗುಲಿತ್ತು. ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೆ. ಅವರು ನನಗೆ 3.80 ಲಕ್ಷ ರೂಪಾಯಿ ಚಾರ್ಜ್ ಮಾಡಿದ್ದಾರೆ. ಒಬ್ಬ ಶಾಸಕನ ಪರಿಸ್ಥಿತಿಯೇ ಹೀಗಾದರೆ ಬಡವರು ಲಕ್ಷಾಂತರ ರೂ. ಹಣವನ್ನು ಎಲ್ಲಿಂದ ತರಬೇಕು' ಎಂದು ಖಾರವಾಗಿ ಪ್ರಶ್ನಿಸಿದರು.

ವಿಜಯಪುರದಂತಹ ಸಣ್ಣ ನಗರಗಳಲ್ಲಿ ಕೊರೋನ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯೊಂದು 18 ಲಕ್ಷ ರೂ. ಚಾರ್ಜ್ ಮಾಡಿದೆ. ಖಾಸಗಿ ಆಸ್ಪತ್ರೆಗಳ ಬೇಕಾ ಬಿಟ್ಟಿ ಲೂಟಿಯನ್ನು ಸರಕಾರ ನಿಯಂತ್ರಣ ಮಾಡಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಕೊರೋನ ಸೋಂಕಿಗೆ ಚಿಕಿತ್ಸೆ ನೆಪದಲ್ಲಿ ಮನಸೋ ಇಚ್ಛೆ ವಸೂಲಿ ಮಾಡುವ ಖಾಸಗಿ ಆಸ್ಪತ್ರೆಗಳನ್ನು ಸರಕಾರ ನಿಯಂತ್ರಿಸುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.

'ಇತ್ತೀಚಿನ ದಿನಗಳಲ್ಲಿ ಜನರು ಕೊರೋನ ಸೋಂಕಿನ ಬಗ್ಗೆ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಹೀಗಾಗಿ ಸೋಂಕು ನಿಯಂತ್ರಣ ದೃಷ್ಟಿಯಿಂದ ವಾರದಲ್ಲಿ ಒಂದೆರಡು ದಿನಗಳ ಕಾಲ ಮತ್ತೊಮ್ಮೆ ಲಾಕ್‍ಡೌನ್ ಘೋಷಣೆ ಮಾಡಬೇಕಾದ ಅನಿವಾರ್ಯತೆ ಇದೆ. ಸುರೇಶ್ ಅಂಗಡಿಯವರಂತೆ ಇನ್ನೂ ಅನೇಕರಿಗೆ ನಾವು ಮೌನಾಚರಣೆ ಮಾಡುವಂತಹ ಪರಿಸ್ಥಿತಿ ಬರದಂತೆ ಎಚ್ಚರ ವಹಿಸಬೇಕಿದೆ' ಎಂದು ಅವರು ತಿಳಿಸಿದರು.

ಹೊಸದಿಲ್ಲಿಯ ಏಮ್ಸ್ ನಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೇಂದ್ರದ ಹಾಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರನ್ನು ನಾನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ಸೋಂಕಿನ ಬಗ್ಗೆ ಎಲ್ಲರೂ ಅತ್ಯಂತ ಗಂಭೀರವಾದ ಎಚ್ಚರಿಕೆಯನ್ನು ವಹಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News