ಕಾರ್ಮಿಕರಿಗೆ ನ್ಯಾಯ ಸಿಕ್ಕಿದೆ ಎಂದ ಶಿವರಾಂ ಹೆಬ್ಬಾರ್: ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು

Update: 2020-09-24 15:37 GMT

ಬೆಂಗಳೂರು, ಸೆ.24: ಕಾರ್ಮಿಕ ಕಾನೂನು ತಿದ್ದುಪಡಿಗಳಿಂದ ಕಾರ್ಮಿಕರಿಗೆ ನ್ಯಾಯ ಸಿಕ್ಕಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರ ಹೇಳಿಕೆಯನ್ನು ಖಂಡಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಜರುಗಿತು.

ಗುರುವಾರ ನಗರದ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಸಿಐಟಿಯು ನೇತೃತ್ವದಲ್ಲಿ ನಡೆದ ಕಾರ್ಮಿಕರ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಕಾರ್ಮಿಕರು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಎಷ್ಟೋ ಕಾರ್ಮಿಕರು ಬದುಕುವ ಹಕ್ಕು ಹಾಗೂ ಶಕ್ತಿಯನ್ನು ಕಳೆದುಕೊಂಡಿದ್ದನ್ನು ನಾವು ಗಮನಿಸಿದ್ದೇವೆ. ಕಾರ್ಮಿಕ ಇಲಾಖೆ ಇರುವುದು ಕಾರ್ಮಿಕರ ರಕ್ಷಣೆಗಾಗಿ. ಆದರೆ ಈ ಆರೇಳು ತಿಂಗಳಿನ ಸಂದರ್ಭದಲ್ಲಿ ಕಾರ್ಮಿಕರಿಗೆ ನೂರಕ್ಕೆ ನೂರರಷ್ಟು ನ್ಯಾಯ ಕೊಡಲು ಸಾಧ್ಯವಾಗಿಲ್ಲ. ಇದು ನಮಗೆ ಗೊತ್ತಿದೆ. ಆದರೂ ಅನೇಕ ಕಾರ್ಮಿಕ ಕಾನೂನು ತಿದ್ದುಪಡಿಗಳಿಂದ ಕಾರ್ಮಿಕರಿಗೆ ನ್ಯಾಯವು ಸಿಕ್ಕಿದೆ. ಅನೇಕ ಸಂದರ್ಭಗಳಲ್ಲಿ ನ್ಯಾಯ ಸಿಕ್ಕಿಲ್ಲ ಎಂದು ನುಡಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಪ್ರತಿಭಟನಾಕಾರರು, ಕೇಂದ್ರ ಸರಕಾರ ಮತ್ತು ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದ ಸಚಿವರು ತಬ್ಬಿಬ್ಬಾಗಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಂತರ ಕಾರ್ಮಿಕ ಮುಖಂಡರು ಪರಿಸ್ಥಿತಿ ತಿಳಿಗೊಳಿಸಿದರು.

ಮತ್ತೆ ಮಾತು ಮುಂದುವರೆಸಿದ ಸಚಿವರು, ಕಾರ್ಮಿಕ ಕಾಯ್ದೆಗಳ ತಿದ್ದುಪಡಿಗಳ ಬಗ್ಗೆ ಕಾರ್ಮಿಕರಲ್ಲಿ ಅಸಮಾಧಾನ ಇರುವುದನ್ನು ಗಮನಿಸಿದ್ದೇವೆ. ಇದನ್ನು ಮುಖ್ಯಮಂತ್ರಿಗಳ ಜೊತೆ ಕೂತು ಚರ್ಚೆ ಮಾಡುತ್ತೇವೆ. ಕಾರ್ಮಿಕರಿಗೆ ಬದುಕುವ ಶಕ್ತಿ ನೀಡುವುದು ನಮ್ಮ ಮೊದಲ ಆದ್ಯತೆಯಾದರೆ, ಕಾರ್ಮಿಕರ ಹಕ್ಕುಗಳನ್ನು ರಕ್ಷಣೆ ಮಾಡುವುದು ಎರಡನೇ ಆದ್ಯತೆಯಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News